Advertisement

ವನಿತಾ ಕ್ರಿಕೆಟ್‌ ಸರಣಿಯ ಸಮಯ

11:33 PM Jun 15, 2024 | Team Udayavani |

ಬೆಂಗಳೂರು: ಎಲ್ಲರೂ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಗುಂಗಿನಲ್ಲಿರುವಾಗ ಭಾರತ- ದಕ್ಷಿಣ ಆಫ್ರಿಕಾ ನಡುವಿನ ಪೂರ್ಣ ಪ್ರಮಾಣದ ವನಿತಾ ಕ್ರಿಕೆಟ್‌ ಸರಣಿಗೆ ರವಿವಾರ ಬೆಂಗಳೂರಿನಲ್ಲಿ ಚಾಲನೆ ಲಭಿಸಲಿದೆ. ಮೊದಲು 3 ಪಂದ್ಯಗಳ ಏಕದಿನ ಸರಣಿ, ಬಳಿಕ ಒಂದು ಟೆಸ್ಟ್‌, ಅನಂತರ 3 ಟಿ20 ಪಂದ್ಯಗಳನ್ನು ಆಡಲಾಗುವುದು.

Advertisement

ಏಕದಿನ ಸರಣಿಯ ಮೂರೂ ಪಂದ್ಯಗಳ ತಾಣ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ. ಜೂ. 16, 19 ಮತ್ತು 23ರಂದು ಈ ಪಂದ್ಯಗಳು ನಡೆಯಲಿವೆ. ಟೆಸ್ಟ್‌ ಹಾಗೂ ಟಿ20 ಸರಣಿಯ ತಾಣ ಚೆನ್ನೈ. ಮುಂದಿನ ವರ್ಷ ಭಾರತದಲ್ಲೇ ಏರ್ಪಡಲಿರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ತಯಾರಿ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಸರಣಿಯಾಗಿದೆ.

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡ ವರ್ಷಾರಂಭದಲ್ಲಿ ಆಸ್ಟ್ರೇಲಿಯ ಎದುರಿನ ಏಕದಿನ ಹಾಗೂ ಟಿ20 ಸರಣಿಯನ್ನು ಕಳೆದುಕೊಂಡಿತ್ತು. ಅನಂತರ ಅಷ್ಟೇನೂ ಬಲಿಷ್ಠವಲ್ಲದ ಬಾಂಗ್ಲಾದೇಶ ವಿರುದ್ಧ ಅವರದೇ ನೆಲದಲ್ಲಿ 5-0 ಅಂತರದಿಂದ ಟಿ20 ಸರಣಿ ಜಯಿಸಿತ್ತು. ಸ್ಮತಿ ಮಂಧನಾ-ಶಫಾಲಿ ವರ್ಮ ಜೋಡಿ ಉತ್ತಮ ಆರಂಭ ಒದಗಿಸಿದರೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರು ಇನ್ನಿಂಗ್ಸ್‌ ಬೆಳೆಸಬಲ್ಲರು.
ಬೌಲಿಂಗ್‌ನಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್‌, ರೇಣುಕಾ ಸಿಂಗ್‌ ಠಾಕೂರ್‌, ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌, ಆಲ್‌ರೌಂಡರ್‌ ದೀಪ್ತಿ ಶರ್ಮ ಮೇಲೆ ಭಾರೀ ಭರವಸೆ ಇಡಲಾಗಿದೆ.

ವೋಲ್ವಾರ್ಟ್‌ ಅಮೋಘ ಫಾರ್ಮ್
ದಕ್ಷಿಣ ಆಫ್ರಿಕಾ ತಂಡ ಕೂಡ ಬಲಿಷ್ಠವಾಗಿದೆ. ನಾಯಕಿ ಲಾರಾ ವೋಲ್ವಾರ್ಟ್‌ ಅಮೋಘ ಫಾರ್ಮ್ ನಲ್ಲಿದ್ದಾರೆ. ಕಳೆದ 5 ಇನ್ನಿಂಗ್ಸ್‌ಗಳಲ್ಲಿ 102, 56, 41, ಅಜೇಯ 110 ಹಾಗೂ ಅಜೇಯ 184 ರನ್‌ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇತರ ಸೀನಿಯರ್‌ಗಳಾದ ಮರಿಜಾನ್‌ ಕಾಪ್‌, ಅಯಬೊಂಗಾ ಖಾಕಾ, ನಾಡಿನ್‌ ಡಿ ಕ್ಲರ್ಕ್‌ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಸರಣಿಗಾಗಿ ಭಾರತದ ಬೌಲರ್‌ಗಳಿಗೆ ಬೆಂಗಳೂರಿನ ಎನ್‌ಸಿಎಯಲ್ಲಿ ಹಾಗೂ ಬ್ಯಾಟರ್‌ಗಳಿಗೆ ನವೀ ಮುಂಬಯಿಯಲ್ಲಿ ಪ್ರತ್ಯೇಕ ತರಬೇತಿಯನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next