ಈ ಹಿಂದೆ “ಚೌಕಾ ಬಾರ’ ಎಂಬ ಕಿರುಚಿತ್ರ ನಿರ್ದೇಶಿದ್ದ ರಘು ಶಿವಮೊಗ್ಗ, ಈಗ “ಚೂರಿಕಟ್ಟೆ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರ ಬಿಡುಗಡೆಗೆ ತಯಾರಿಯೂ ನಡೆಸಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯೂ ಆಗಿದೆ. ನಟ ರಕ್ಷಿತ್ ಶೆಟ್ಟಿ ಟೀಸರ್ ಬಿಡುಗಡೆ ಮಾಡಿ, “ಈಗಂತೂ ಕನ್ನಡದಲ್ಲಿ ಹೊಸ ಪ್ರತಿಭೆಗಳು ಹೊಸತನದ ಚಿತ್ರಗಳೊಂದಿಗೆ ಬರುತ್ತಿದ್ದಾರೆ. “ಚೂರಿಕಟ್ಟೆ’ ಆ ಸಾಲಿನ ಚಿತ್ರವಾಗಲಿ ಮತ್ತು ಇದೊಂದು ಎಲ್ಲರಿಗೂ ಅಚ್ಚರಿಯ ಸಿನಿಮಾವಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.”
ನಿರ್ದೇಶಕ ರಘು ಶಿವಮೊಗ್ಗ ಅವರು ಅಂದು ತುಂಬಾನೇ ಖುಷಿಯಲ್ಲಿದ್ದರು. “ನನಗೆ ಈ ಚಿತ್ರ ಮಾಡಲು ಅವಕಾಶ ಕೊಟ್ಟಿದ್ದು ನಿರ್ಮಾಪಕ ನಯಾಜ್ ಮತ್ತು ತುಳಸಿರಾಮುಡು. ಅವರ ಸಹಕಾರ ಮತ್ತು ನನ್ನ ಗೆಳೆಯರ ಪ್ರೋತ್ಸಾಹ “ಚೂರಿಕಟ್ಟೆ’ ರೆಡಿಯಾಗಲು ಸಾಧ್ಯವಾಗಿದೆ. ಕೈಲಾಶ್ ಕಥೆಗೆ ಅರವಿಂದ್ ಚಿತ್ರಕಥೆ ಬರೆದಿದ್ದಾರೆ. ಇನ್ನು, ಪ್ರವೀಣ್ ಮತ್ತು ಪ್ರೇರಣಾ ಚಿತ್ರದ ನಾಯಕ-ನಾಯಕಿಯಾಗಿದ್ದಾರೆ. ಮಾರ್ಚ್‌ನಲ್ಲಿ ಶುರುವಾದ ಚಿತ್ರ ಮಲೆನಾಡ ಭಾಗದ ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದ ಕಥೆಯನ್ನು ಇಲ್ಲಿ ಹೇಳಲಾಗಿದೆ. ಅಷ್ಟಕ್ಕೂ “ಚೂರಿಕಟ್ಟೆ’ ಎಂದು ಶೀರ್ಷಿಕೆ ಇಡಲು ಕಾರಣ, ಬ್ರಿಟಿಷರ ಕಾಲದಲ್ಲಿ ತಾಳಗುಪ್ಪ ಸಮೀಪ ಒಂದು ಸರ್ಕಲ್ ಇತ್ತು. ಆಗ ತಾಳಗುಪ್ಪ ಮೂಲಕ ಚೆನ್ನೈವರೆಗೆ ರೈಲು ಸಂಚರಿಸುತ್ತಿತ್ತು. ಆ ಸಂದರ್ಭದಲ್ಲಿ ಪರವಾನಗಿ ಇಲ್ಲದೆಯೇ ಕಳುವ ಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಆಗ ಅಂತಹ ಕಳ್ಳರನ್ನು ಹಿಡಿದು, ಸುಂಕ ವಸೂಲಿ ಮಾಡೋಕೆ ಅಧಿಕಾರಿಗಳು ಸರ್ಕಲ್‌ನಲ್ಲಿ ಕಾದು ಕುಳಿತುಕೊಳ್ಳುತ್ತಿದ್ದರು. ಕಳ್ಳರು ಆ ಸಂದರ್ಭದಲ್ಲಿ ಕೈಯಲ್ಲಿ ಚೂರಿ ಹಿಡಿದು ಟಿಂಬರ್ ಮಾಫಿಯಾದಲ್ಲಿ ತೊಡಗಿಕೊಳ್ಳುತ್ತಿದ್ದರು. ಹಾಗಾಗಿ ಆ ಸರ್ಕಲ್‌ನಲ್ಲಿದ್ದ ಕಟ್ಟೆ ಬಳಿ ನಡೆಯುತ್ತಿದ್ದ ಆ ಮಾಫಿಯಾಗೆ “ಚೂರಿಕಟ್ಟೆ’ ಎಂದು ಹೆಸರು ಬಂತು. ಅದೇ ಹೆಸರನ್ನಿಟ್ಟುಕೊಂಡು ಟಿಂಬರ್ ಮಾಫಿಯಾ ಕುರಿತು ಚಿತ್ರ ಮಾಡಿದ್ದಾಗಿ ಹೇಳಿಕೊಂಡರು ನಿರ್ದೇಶಕರು.
ಅಚ್ಯುತ್ ಅವರಿಲ್ಲಿ ಅರಣ್ಯಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ. “ಒಂಭತ್ತು ತಿಂಗಳ ಹಿಂದೆ ಶುರುವಾದ ಈ ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ನಿರ್ದೇಶಕ ರಘು ಉತ್ಸಾಹಿ ಹುಡುಗ. ಆತನಿಗೊಂದು ಕನಸಿತ್ತು. ಒಳ್ಳೆಯ ಸಿನಿಮಾ ಮಾಡಬೇಕು ಅಂತ. ತುಂಬಾನೇ ಪ್ರೀತಿ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾನೆ. ನಿರ್ಮಾಪಕರಿಗೆ ಮೊದಲ ಪ್ರಯತ್ನವಾದರೂ ಯಾವುದೇ ಕೊರತೆ ಇಲ್ಲದಂತೆ ಚಿತ್ರ ಮಾಡಿದ್ದಾರೆ. ಬಿಗಿಯಾದ ನಿರೂಪಣೆಯೊಂದಿಗೆ ಸೊಗಸಾದ ಚಿತ್ರವನ್ನು ಕಟ್ಟಿ ಕೊಡಲಾಗಿದೆ’ ಅಂದರು ಅಚ್ಯುತ್.
ಹಿರಿಯ ಕಲಾವಿದ ದತ್ತಣ್ಣ ಅವರಿಗೆ ರಘು ಬಂದು ಕಥೆ ಹೇಳಿದಾಗ ರಾತ್ರಿಯಾಗಿತ್ತಂತೆ. ಆಗ ರಘುಗೆ ಮಾಡೋಣ ಬಿಡೋ ಅಂದಿದ್ದರಂತೆ. ಸ್ವಲ್ಪ ದಿನಗಳ ಬಳಿಕ ರಘು ಫೋನ್ ಮಾಡಿ, “ಸಿನಿಮಾ ಶುರುವಾಗುತ್ತಿದೆ. ಡೇಟ್ಸ್ ಇದೆಯಾ ಅಂದಾಗ, ಯಾವ ಸಿನ್ಮಾ, ಕಥೆ ಏನು, ಯಾವಾಗ ಹೇಳಿದ್ಯಪ್ಪಾ …’ ಅಂದರಂತೆ. ಏಕೆಂದರೆ, ರಘು ಕಥೆ ಹೇಳಿದ್ದು ರಾತ್ರಿ. ಅಷ್ಟೊತ್ತಿಗಾಗಲೇ, ದತ್ತಣ್ಣ ಅವರದೇ ಲೋಕದಲ್ಲಿದ್ದರಂತೆ. “ಅವರೇ ಎಲ್ಲವನ್ನೂ ಮಾಡಿ ತೋರಿಸಿ, ನನಗೆ ಹೀಗೇ ಬೇಕು ಅನ್ನುತ್ತಿದ್ದರು. ಒಳ್ಳೆಯ ತಂಡದಲ್ಲಿ ಕೆಲಸ ಮಾಡಿದ್ದೇನೆ. ಇದೊಂದು ಬೇರೆ ತರಹದ ಚಿತ್ರವಾಗುತ್ತೆ’ ಅಂದರು ದತ್ತಣ್ಣ.
ನಾಯಕ ಪ್ರವೀಣ್, ಕಳೆದ ಒಂದು ವರ್ಷದಿಂದಲೂ “ಚೂರಿಕಟ್ಟೆ’ ಬಗ್ಗೆಯೇ ಜಪ ಮಾಡುತ್ತಿದ್ದರಂತೆ. ಚಿತ್ರದ ಶೀರ್ಷಿಕೆ ನೋಡಿದವರೆಲ್ಲರೂ ಕ್ರೈಮ್ ಸಿನಿಮಾನ ಅನ್ನುತ್ತಿದ್ದಾರೆ. ಆರಂಭದಿಂದಲೇ ಅಂಥದ್ದೊಂದು ಕುತೂಹಲ ಮೂಡಿಸಿದೆ. ನನಗೆ ಇದೊಂದು ಹೊಸಬಗೆಯ ಚಿತ್ರವಾಗಲಿದೆ’ ಅಂದರು ಪ್ರವೀಣ್.
ನಾಯಕಿ ಪ್ರೇರಣಾಗೆ ಇದು ಎರಡನೇ ಚಿತ್ರವಂತೆ. ಅವರಿಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಗಿದೆಯಂತೆ. ನಾನಿಲ್ಲಿ ಕಾಲೇಜ್ ಹುಡುಗಿ ಪಾತ್ರ ಮಾಡಿದ್ದೇನೆ ಅಂದರು ಪ್ರೇರಣಾ. ಮಂಜುನಾಥ ಹೆಗಡೆ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ಬಾಲಾಜಿ, ನೊಬಿನ್ ಪಾಲ್, ಕೈಲಾಶ್ ಇತರರು ಮಾತನಾಡಿದರು.