ಉಡುಪಿ: ಬಾಲ ಗಂಗಾಧರ ತಿಲಕರು ರಾಷ್ಟ್ರದೇವೋಭವ ಎನ್ನುವ ರಾಷ್ಟ್ರಕ್ಕಾಗಿ ಸಮರ್ಪಿಸುವ ಧ್ಯೇಯವನ್ನು ಪ್ರತಿಪಾದಿಸಿದರು. ಅವರ ಸ್ವದೇಶೀ, ಸ್ವರಾಜ್ಯ ಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಲಕರ ಮರಿಮಗ, ಪುಣೆಯ ತಿಲಕ್ ಮಹಾರಾಷ್ಟ್ರ ವಿದ್ಯಾಪೀಠದ ಕುಲಪತಿ ಡಾ| ದೀಪಕ್ ಜೆ. ತಿಲಕ್ ಹೇಳಿದರು.
ಪರ್ಕಳ ಶ್ರೀ ಗಣೇಶೋತ್ಸವ ಸಮಿತಿ ಸುವರ್ಣ ಮಹೋತ್ಸವದ ಅಂಗವಾಗಿ ರವಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಿಲಕರು 125 ವರ್ಷಗಳ ಹಿಂದೆ ಎಲ್ಲ ಜಾತಿ, ಧರ್ಮದವರನ್ನು ಒಟ್ಟುಗೂಡಿಸಲು ಗಣೇಶೋ ತ್ಸವವನ್ನು ಆರಂಭಿಸಿದರು. ಈಗಲೂ ಇದೇ ಆಶಯದ ಅಗತ್ಯವಿದೆ ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಒಂದು ರಾಷ್ಟ್ರವೆಂಬ ಕಲ್ಪನೆ ಇರಲಿಲ್ಲ ಎನ್ನುತ್ತಿದ್ದಾಗ ನಾವು ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದೇವೆಂದು ತಿಲಕರು ಹೇಳಿದರು. ಸಾಮಾನ್ಯ ಜನರಿಗೆ ಸ್ವಾತಂತ್ರ್ಯ, ಸ್ವರಾಜ್ಯದ ಕಲ್ಪನೆಯೇ ಇರಲಿಲ್ಲ. ಇದೇ ಕಾರಣಕ್ಕಾಗಿ ರಾಷ್ಟ್ರಕ್ಕಾಗಿ ಬದುಕುವ ರಾಷ್ಟ್ರದೇವೋಭವ= ರಾಷ್ಟ್ರಸೇವೆಯೇ ದೇವರ ಸೇವೆ ಎಂದು ಕರೆ ನೀಡಿದರು. ಗೀತೆಯಲ್ಲಿ ಹೇಳಿದ ನಿಷ್ಕಾಮ ಕರ್ಮವೆಂದರೆ ಫಲಾಪೇಕ್ಷೆ ಇಲ್ಲದೆ ದೇಶಕ್ಕಾಗಿ ಮಾಡುವ ಸೇವೆ ಎಂದು ತಿಲಕರು ಹೇಳಿ ದರು. ಎಲ್ಲವೂ ಯಾಂತ್ರೀಕೃತವಾಗುವಾಗ ಮುಂದಿನ ಪೀಳಿಗೆಗೆ ಉದ್ಯೋಗ ಸಿಗದ ಸ್ಥಿತಿ ಬರಬಹುದು. ಆಗ ತಿಲಕರು ಹೇಳಿದ ಸ್ವದೇಶೀ ತಂತ್ರಜ್ಞಾನದ ಮಹತ್ವ ಅರಿವಿಗೆ ಬರಬಹುದು ಎಂದು ದೀಪಕ್ ಎಚ್ಚರಿಸಿದರು.
ಮುಸ್ಲಿಮರ ವಿರುದ್ಧವಲ್ಲ : ಗಣೇಶೋತ್ಸವಗಳು ಮುಸ್ಲಿಮರ ವಿರುದ್ಧ ಎಂದು ಬ್ರಿಟಿಷರು ಪ್ರತಿಬಿಂಬಿಸಲು ಯತ್ನಿಸಿದರು. ಇದು ಮುಸ್ಲಿಂ ವಿರೋಧಿಯಲ್ಲ ಎಂದು ತಿಲಕರು ಮುಸ್ಲಿಮರಿಗೆ ತಿಳಿಸಿ ಅವರನ್ನೂ ಉತ್ಸವಕ್ಕೆ ಕರೆದರು. ಈಗಲೂ ಬ್ರಿಟಿಷರಂತೆ ವ್ಯವಹರಿಸುವವರಿದ್ದಾರೆ ಎಂದು ದೀಪಕ್ ಎಚ್ಚರಿಸಿದರು.ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಧರ್ಮವೆಂದರೆ ಬದುಕಿನ ಸಂವಿಧಾನ. ಧರ್ಮ ದಂತೆ ನಡೆದರೆ ಧರ್ಮ ಸಂಸ್ಥಾಪನೆಯಾಗುತ್ತದೆ ಎಂದರು.
ಸಾವಿರಾರು ವರ್ಷಗಳ ಹಿಂದಿನ ನಾಗರಿಕತೆ ಎಂದು ಗಾಂಧೀಜಿಯವರೇ ಹೇಳಿದ್ದರು. ಪಶು, ಪಕ್ಷಿ, ಕ್ರಿಮಿ, ಕೀಟಗಳಲ್ಲಿಯೂ ಭಗವಂತನನ್ನು ಕಾಣುವ ನಮ್ಮ ನಾಗರಿಕತೆಗೆ ಸರಿಯಾಗಿ ನಾವು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ತಂದೆ, ತಾಯಿಗಳನ್ನು ಚೆನ್ನಾಗಿ ಆರೈಕೆ ಮಾಡಬೇಕು ಎಂದು ದಿಲ್ಲಿಯ ಜಿಎಸ್‌ಟಿ ಆಯುಕ್ತ ಎಚ್. ರಾಜೇಶಪ್ರಸಾದ್ ಕರೆ ನೀಡಿದರು.
ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್, ಡಿವೈಎಸ್ಪಿ ಕುಮಾರಸ್ವಾಮಿ ಶುಭ ಕೋರಿದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ ಪ್ರ. ಕಾರ್ಯದರ್ಶಿ ದಿನಕರ ಶೆಟ್ಟಿ ಪ್ರಸ್ತಾವನೆಗೈದರು. ಗಣೇಶ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ಮುರಳೀಧರ ನಕ್ಷತ್ರಿ ವಂದಿಸಿದರು. ಗೌರವಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಜಯರಾಜ ಹೆಗ್ಡೆ, ದಿನೇಶ್ ಶೆಟ್ಟಿ ಹೆರ್ಗ, ಬಾಲಕೃಷ್ಣ ನಾಯಕ್, ಉದ್ಯಮಿಗಳಾದ ದಿನೇಶ್ ಹೆಗ್ಡೆ ಆತ್ರಾಡಿ, ಜಯರಾಜ ಶೆಟ್ಟಿ, ಪುಣೆಯ ರಂಜಿತ್ ಶೆಟ್ಟಿ ,ಕಟ್ಟಡ ಸಮಿತಿಯ ಅಧ್ಯಕ್ಷ ದಿಲೀಪ್‌ರಾಜ್ ಹೆಗ್ಡೆ ಉಪಸ್ಥಿತರಿದ್ದರು.