Advertisement

ತಿಲಕರ ಸದೇಶಿ ಕಲ್ಪನೆಯಡಿ ಆತ್ಮನಿರ್ಭರ ಭಾರತ, ಶಿಕ್ಷಣ ನೀತಿ

10:06 AM Aug 03, 2020 | mahesh |

ಬೆಂಗಳೂರು: ಲೋಕಮಾನ್ಯ ತಿಲಕರ ಸ್ವದೇಶಿ ಚಳುವಳಿ ಮತ್ತು ರಾಷ್ಟ್ರೀಯ ಶಿಕ್ಷಣದ ಪರಿಕಲ್ಪನೆಯಡಿಯಲ್ಲೇ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಹಾಗೂ ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳ್ಳಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದ್ದಾರೆ.

Advertisement

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘವು ಬಾಲ ಗಂಗಾಧರ ತಿಲಕರ 100ನೇ ಪುಣ್ಯತಿಥಿಯ ಅಂಗವಾಗಿ ಭಾನುವಾರ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತಿಲಕರ ಕೊಡುಗೆ ಎಂಬ ವಿಷಯದ ಮೇಲೆ ಮಾತನಾಡಿದರು. ಶಿಕ್ಷಣ ಭಾರತೀಕರಣಗೊಳ್ಳಬೇಕು, ಸ್ವದೇಶೀಕರಣದಲ್ಲಿ ಸತ್ವ ಇರಬೇಕು. ಆತ್ಮನಿರ್ಭರ ಭಾರತವು ಸ್ವದೇಶಿ ಸತ್ವವನ್ನು ಒಳಗೊಂಡಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯು ರಾಷ್ಟ್ರೀಯತೆಯ ಸತ್ವ ಹೊಂದಿದೆ. ತಿಲಕರು ಅಂದು ಆರಂಭಿಸಿದ ಸ್ವದೇಶಿ ಚಳವಳಿ ಮತ್ತು ರಾಷ್ಟ್ರೀಯ ಶಿಕ್ಷಣದ ಪ್ರತಿಪಾದನೆ ಇಂದು ಆತ್ಮನಿರ್ಭರ ಭಾರತ ಹಾಗೂ ಹೊಸ ಶಿಕ್ಷಣ ನೀತಿಯ ಪರಿಕಲ್ಪನೆಯೊಂದಿಗೆ ಅನುಷ್ಠಾನಕ್ಕೆ ಬರಲಿದೆ ಎಂದರು.

ತಿಲಕರು ಸ್ವದೇಶಿ ಚಳುವಳಿಯನ್ನು ಆರಂಭಿಸುವ ಜತೆಗೆ ದೇಶಿ ಉದ್ಯಮಕ್ಕೆ ಆದ್ಯತೆ ನೀಡುತ್ತಿದ್ದರು. ಹಾಗೆಯೇ ರಾಷ್ಟ್ರೀಯ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಶಾಲೆಗಳನ್ನು ಪುಣೆ ಸಹಿತವಾಗಿ ಮುಂಬೈ ಮೊದಲಾದ ಭಾಗಗಳಲ್ಲಿ ಆರಂಭಿಸಿದರು. ಕಾನೂನು ಪದವೀಧರರಾದರೂ ಉತ್ತಮ ಗಣಿತ ಶಿಕ್ಷಕರಾಗಿ ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದಿದ್ದರು. ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ತತ್ವಶಾಸ್ತ್ರ, ಜೋತಿಷ್ಯ ಶಾಸ್ತ್ರ, ಪ್ರಾಚೀನ ಶಾಸ್ತ್ರ, ವ್ಯಾಕರಣಶಾಸ್ತ್ರ ಹಾಗೂ ಇತಿಹಾಸದ ಬಗ್ಗೆಯೂ ವಿಶೇಷ ಆಸಕ್ತಿ ಹೊಂದಿದ್ದರು ಎಂದು ವಿವರಿಸಿದರು.

ಗಣೇಶೋತ್ಸವ, ಶಿವಾಜಿ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದರು. ಬ್ರಿಟಿಷ್‌ ಮಾನಸಿಕತೆಯ ಅಧಿಕಾರಿಗಳ ನಡುವೆಯೇ ಅನೇಕ ಹೋರಾಟಗಳನ್ನು ಮಾಡಿದರು. ಸಮಾಜವನ್ನು ಧಾರ್ಮಿಕ ಆಚರಣೆಗಳ ಮೂಲಕ ಒಗ್ಗೂಡಿಸಿದ್ದಾರೆ. ಬ್ರಿಟಿಷ್‌ ಮಾನಸಿಕತೆಯ ಅಧಿಕಾರಿಗಳು ಇಂದಿಗೂ ಇದ್ದಾರೆ. ಗಣೇಶೋತ್ಸವ ಮೆರವಣಿಗೆ ಸಹಿತವಾಗಿ ವಿವಿಧ ಉತ್ಸವ, ಮೆರವಣಿಗೆಗಳನ್ನು ತಡೆಯುವ ಪ್ರಯತ್ನ ಮಾಡುತ್ತಿರುತ್ತಾರೆ ಎಂದು ಹೇಳಿದರು.

ತಿಕಲರು ರಾಜಿ ಇಲ್ಲದ ಬದ್ಧತೆ, ಫ‌ಲಾಪೇಕ್ಷೆ ಇಲ್ಲದ ಕಾರ್ಯ ಹಾಗೂ ಲೋಕ ಸಂಗ್ರಹ ಈ ಮೂರು ಅಂಶಗಳೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಕೊನೆಯ ಉಸಿರು ಇರುವ ವರೆಗೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ಹಾಗೂ 18 ವರ್ಷದ ನಂತರವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕು ಎಂಬುದರ ಪರವಾದ ಹೋರಾಟ ನಡೆಸುತ್ತಾ ಬಂದಿದ್ದರು ಎಂದು ಮಾಹಿತಿ ನೀಡಿದರು.

Advertisement

ತಿಲಕರು ಭಾರತದ ಸ್ವಾತಂತ್ರ್ಯ ಆಂದೋಲನದ ಗತಿ, ವೇಗ, ಗಾತ್ರ ಹಿಗ್ಗಿಸಿದ್ದು ಅಥವಾ ಪಾಲ್ಗೊಂಡಿದ್ದು ಅಥವಾ ಮುನ್ನೆಡೆಸಿದ್ದು ಮಾತ್ರವಲ್ಲ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಫ‌ಲಿತಾಂಶ ತಂದುಕೊಡಬಲ್ಲ ತಿರುವನ್ನೇ ನೀಡಿದ ಹೋರಾಟಗಾರರಾಗಿದ್ದರು. ಹೀಗೆ ಸ್ವಾತಂತ್ರ್ಯ ಹೋರಾಟ, ಸಾಮಾ ಜಿಕ ಸುಧಾರಣೆ, ಶಿಕ್ಷಣ, ಸ್ವದೇಶಿ ಜತೆಗೆ ಶ್ರೇಷ್ಠ ಪತ್ರಕರ್ತರು ಆಗಿದ್ದರು ಎಂದು ವಿವರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next