ನಟಿ ಮೇಘನಾರಾಜ್ “ಇರುವುದೆಲ್ಲವ ಬಿಟ್ಟು’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಅಂತ ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ “ನೀಲಿ’ ಧಾರಾವಾಹಿಯ ಹೀರೋ ಶ್ರೀ ನಾಯಕ ಅಂತಾನೂ ಸುದ್ದಿಯಾಗಿತ್ತು. ಈಗ ಹೊಸ ಸುದ್ದಿಯೆಂದರೆ, ಆ ಚಿತ್ರಕ್ಕೆ ಮತ್ತೂಬ್ಬ ಹೀರೋ ಎಂಟ್ರಿಯಾಗಿದ್ದಾರೆ. ಅದು ಬೇರಾರೂ ಅಲ್ಲ, ತಿಲಕ್.
ಹೌದು, ಈಗಾಗಲೇ ತಿಲಕ್ ಆ ಚಿತ್ರ ತಂಡವನ್ನು ಸೇರಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೂ ಆಗಿದೆ. ‘ಸರ್ವಸ್ವ’ ಚಿತ್ರದ ಬಳಿಕ ತಿಲಕ್ ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬ ಬಗ್ಗೆ ಪ್ರಶ್ನೆ ಇತ್ತು. ಈಗ “ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ಅವರೊಂದು ಹೊಸಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂತ ಕನ್ನಲ್ಲಿ ನಿರ್ದೇಶನದ ಎರಡನೇ ಸಿನಿಮಾ ಇದು.
ಈ ಚಿತ್ರದಲ್ಲಿ ತಿಲಕ್ ಅವರು ಇನ್ನೊಬ್ಬ ನಾಯಕರಾಗಿ ನಟಿಸುತ್ತಿದ್ದಾರಾ, ಅಥವಾ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ ಎಂಬುದಕ್ಕೆ ಉತ್ತರವಿಲ್ಲ. ಹಾಗಾದರೆ, ತಿಲಕ್ ಮಾಡುವ ಪಾತ್ರ ಯಾವುದು ಎಂಬುದು ಸಸ್ಪೆನ್ಸ್ ಎನ್ನುತ್ತಾರೆ ನಿರ್ದೇಶಕರು. ಮೇಘನಾರಾಜ್ ಅವರದು ಇಲ್ಲಿ ಕಾರ್ಪೋರೇಟ್ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಪಾತ್ರ ಮಾಡುತ್ತಿದ್ದಾರೆ.
ಸಾಫ್ಟ್ವೇರ್ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಆಸೆ ಹೊತ್ತು ಬಂದಿರುವ ಪಾತ್ರವದು. ಇಲ್ಲಿ ನಾಯಕ ಅನಾಥನಾಗಿದ್ದು, ಸಂಬಂಧಗಳೇ ಗೊತ್ತಿಲ್ಲದ ಅವನಿಗೆ, ಸುಂದರ ಕುಟುಂಬ ಕಟ್ಟಿಕೊಂಡು ಅಲ್ಲೇ ಪ್ರೀತಿ ಕಾಣುವ ಹಂಬಲ ವ್ಯಕ್ತಪಡಿಸುವಂತಹ ವ್ಯಕ್ತಿತ್ವದವನು. ಈ ಮಧ್ಯೆ ಏನೇನೆಲ್ಲಾ ಆಗಿಹೋಗುತ್ತೆ ಎಂಬುದನ್ನಿಲ್ಲಿ ತೋರಿಸುವ ಪ್ರಯತ್ನ ಮಾಡಲಿದ್ದಾರಂತೆ ನಿರ್ದೇಶಕರು.
“ಇರುವುದೆಲ್ಲವ ಬಿಟ್ಟು’ ಈ ಶೀರ್ಷಿಕೆಗೆ “ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎಂಬ ಅಡಿಬರಹ ಕೂಡ ಇದೆ. ಅಂದಹಾಗೆ, ಇದೊಂದು ವಾಸ್ತವತೆಯ ಸಿನಿಮಾ ಎನ್ನುವ ನಿರ್ದೇಶಕರು, “ನಮ್ಮದೆಲ್ಲವನ್ನೂ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಹೊರಟಾಗ, ಆಗುವ ಸಮಸ್ಯೆಗಳು, ಅನುಭವಿಸುವ ನೋವುಗಳು ಚಿತ್ರದ ಹೈಲೈಟ್. ದೇವರಾಜ್ ದಾವಣಗೆರೆ ಈ ಚಿತ್ರದ ನಿರ್ಮಾಪಕರು.
ಇವರಿಗೆ ಇದು ಮೊದಲ ಸಿನಿಮಾ. ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತ ನೀಡಿದರೆ, “ರಂಗಿತರಂಗ’ ಖ್ಯಾತಿಯ ಛಾಯಾಗ್ರಾಹಕ ವಿಲಯಮ್ ಡೇವಿಡ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ದ್ವಿತೀಯ ಹಂತಕ್ಕೆ ಅಣಿಯಾಗುತ್ತಿದೆ ಚಿತ್ರತಂಡ. ಚಿತ್ರದಲ್ಲಿ ಡ್ರಾಮಾ ಜೂನಿಯರ್ನ ಅಭಿಷೇಕ್ ರಾಯಣ್ಣ ಸೇರಿದಂತೆ ಚಿತ್ರದಲ್ಲಿ ಅನೇಕ ಕಲಾವಿದರು ನಟಿಸುತ್ತಿದ್ದಾರೆ.