ನವದೆಹಲಿ: ಕಳೆದ ವರ್ಷ ಕೋವಿಡ್ 19 ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಅನಾರೋಗ್ಯದ ಕಾರಣದಿಂದ ತಿಹಾರ್ ಜೈಲಿನಿಂದ ಪೆರೋಲ್ ಮೇಲೆ 6,740 ಮಂದಿ ವಿಚಾರಣಾಧೀನ ಕೈದಿಗಳು ಬಿಡುಗಡೆಗೊಂಡಿದ್ದು, ಇದರಲ್ಲಿ 3,468 ಕೈದಿಗಳು ನಾಪತ್ತೆಯಾಗಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದು, ಅವರ ಪತ್ತೆಗಾಗಿ ದೆಹಲಿ ಪೊಲೀಸರ ನೆರವು ಕೋರಲಾಗಿದೆ ಎಂದು ವರದಿ ತಿಳಿಸಿದೆ.
ಪೆರೋಲ್ ಮೇಲೆ ಆರೋಪಿಗಳು, ವಿಚಾರಣಾಧೀನ ಕೈದಿಗಳು ಹೊರ ಹೋಗಿದ್ದು, ಇವರು ಎಚ್ ಐವಿ, ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಹೆಪಟೈಟೀಸ್ ಬಿ (ಸಿ), ಅಸ್ತಮಾ ಮತ್ತು ಟಿಬಿಯಂತಹ ಕಾಯಿಲೆಯಿಂದ ಬಳಲುತ್ತಿದ್ದರು. ದಕ್ಷಿಣ ಏಷ್ಯಾದ ಅತೀ ದೊಡ್ಡ ಜೈಲು ಸಂಕೀರ್ಣಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನಲ್ಲಿ 10,026 ಕೈದಿಗಳನ್ನು ಇರಿಸಬಹುದಾಗಿದೆ ಎಂದು ವರದಿ ತಿಳಿಸಿದೆ.
ದೆಹಲಿಯ ತಿಹಾರ್, ಮಾಂಡೋಲಿ ಮತ್ತು ರೋಹಿಣಿ ಜೈಲುಗಳಿಂದ 1,184 ಆರೋಪಿಗಳನ್ನು ಕೋವಿಡ್ ಪೆರೋಲ್ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಆರಂಭಿಕ ಎಂಟು ವಾರಗಳ ಗಡುವಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ನಂತರ ಸಮಯಕ್ಕೆ ತಕ್ಕಂತೆ ಅವಧಿಯನ್ನು ಮುಂದುವರಿಸಲಾಗಿತ್ತು ಎಂದು ಜೈಲಿನ ಮೂಲಗಳು ವಿವರಿಸಿದೆ.
ಪೆರೋಲ್ ಮೇಲೆ ಹೋದ ಕೈದಿಗಳು ಫೆಬ್ರುವರಿ 7 ಮತ್ತು ಮಾರ್ಚ್ 6ರ ನಡುವೆ ಶರಣಾಗಬೇಕಿತ್ತು. ಆದರೆ 1,184 ಕೈದಿಗಳ ಪೈಕಿ 112 ಕೈದಿಗಳು ನಾಪತ್ತೆಯಾಗಿದ್ದಾರೆ. ಜೈಲಿನ ಅಧಿಕಾರಿಗಳು ಆರೋಪಿತರ ಕುಟುಂಬದ ಸದಸ್ಯರನ್ನು ಭೇಟಿಯಾದಾಗ, ಕೈದಿಗಳು ಮನೆಯಲ್ಲಿ ಇಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ 5,556 ವಿಚಾರಣಾಧೀನ ಕೈದಿಗಳ ಪೈಕಿ ಕೇವಲ 2,200 ಕೈದಿಗಳು ಮಾತ್ರ ವಾಪಸ್ ಆಗಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. 2021ರ ಮಾರ್ಚ್ 6ರಂದು ಕೈದಿಗಳು ಶರಣಾಗುವ ಪ್ರಕ್ರಿಯೆ ಆರಂಭಿಸಲಾಗಿತ್ತು, ಆದರೆ ಈವರೆಗೆ 3,468 ಕೈದಿಗಳು ನಾಪತ್ತೆಯಾಗಿರುವುದಾಗಿ ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.