Advertisement

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಬಿಗಿ ಕ್ರಮ

11:56 PM Feb 14, 2020 | Lakshmi GovindaRaj |

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಅಂತಹ ಪ್ರಕರಣಗಳು ಮರುಕಳಿಸಲು ಬಿಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

“ಉದಯವಾಣಿ’ಯ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್‌, ಡಿಜಿಟಲ್‌ ವಾಚ್‌ಗಳನ್ನು ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗುವುದು. ವಿದ್ಯಾರ್ಥಿಗಳ ಅನುಕೂಲಕ್ಕೆ ಪರೀಕ್ಷಾ ಕೊಠಡಿಯೊಳಗೆ ಗೋಡೆ ಗಡಿಯಾರ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಯಾರು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದರು, ಅವರ ಸಂಬಂಧಿಗಳು ಎಲ್ಲೆಲ್ಲಿದ್ದಾರೆ ಎಂಬುದೂ ಗೊತ್ತಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆ, ಪೊಲೀಸ್‌ ಹಾಗೂ ಖಜಾನೆ ಅಧಿಕಾರಿಗಳ ಜತೆ ಸಭೆ ನಡೆಸಿ, ಯಾವ್ಯಾವ ರೀತಿಯ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಮೂರು ಮನವಿ: ನಾನು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದಾಗ ಅವರು ಮೂರು ಮನವಿ ಮಾಡಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಅವಕಾಶ ಮಾಡಿಕೊಡಬೇಡಿ. ವದಂತಿ ಹಬ್ಬಿಸುವುದನ್ನು ತಡೆಗಟ್ಟಿ. ಮೌಲ್ಯಮಾಪನವನ್ನು ಸರಿಯಾಗಿ ಮಾಡಿಸಿ ಎಂದು ಹೇಳಿದ್ದಾರೆ. ಹೀಗಾಗಿ, ಈ ಎಲ್ಲ ವಿಚಾರಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ಮೌಲ್ಯಮಾಪನ ಮಾಡಿದ ನಂತರ ಮರು ಮೌಲ್ಯಮಾಪನ ದಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದರೆ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. 6.30 ಲಕ್ಷ ವಿದ್ಯಾರ್ಥಿಗಳು ಆರ್‌ಟಿಇ ಅಡಿ ವ್ಯಾಸಂಗ ಮಾಡುತ್ತಿದ್ದಾರೆ. 8ನೇ ತರಗತಿವರೆಗೆ ಮಾತ್ರ ಅವರಿಗೆ ಅವ ಕಾಶ. ನಂತರ ಅವರ ಶಿಕ್ಷಣ ವ್ಯವಸ್ಥೆ ಹೇಗೆ ಎಂಬ ಪ್ರಶ್ನೆಯಿದೆ. ಖಾಸಗಿ ಶಾಲೆಗಳಲ್ಲಿ ಅವರು ವಿದ್ಯಾಭ್ಯಾಸ ಮುಂದುವರಿಸಲು ಸರ್ಕಾರದಿಂದ ನೆರವು ನೀಡಬೇಕು ಎಂಬ ವಿಚಾರವೂ ಇದೆ.

Advertisement

ಆದರೆ, ಅದೇ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಟ್ಟು, ಆ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಪ್ರಯತ್ನಿಸಬಹುದು ಎಂಬ ಸಲಹೆಯೂ ಇದೆ. ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೂ ಸೇರಲು ಅವಕಾಶ ಇದೆ. ಈ ಕುರಿತು ಮುಖ್ಯಮಂತ್ರಿಯವರ, ಕಾನೂನು ತಜ್ಞರ ಗಮನ ಸೆಳೆಯಲಾಗಿದೆ. ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೌಲ್ಯಾಂಕನ ಕುರಿತು ಅನಗತ್ಯ ಗೊಂದಲ: 7ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ವಿಚಾರದಲ್ಲಿ ಅನಗತ್ಯ ಗೊಂದಲ ಮೂಡಿಸಲಾಗುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ವಿಶೇಷ ತರಗತಿಗಳ ಒತ್ತಡ ಹಾಕುವ ಬದಲು 8 ಮತ್ತು 9 ನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುವುದು ನಮ್ಮ ಉದ್ದೇಶ ಎಂದರು.

ಅಲೆಮಾರಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಎಲ್ಲಿ ಬೇಕಾದರೂ ಅವರನ್ನು ಶಾಲೆಗೆ ಸೇರಿಸಿಕೊಳ್ಳಬೇಕು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಟೆಂಟ್‌ ಶಾಲೆಗಳನ್ನು ಸಹ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ: ಶಿಕ್ಷಕರ ವರ್ಗಾವಣೆ ಸಂಬಂಧ ಶಿಕ್ಷಕ ಸ್ನೇಹಿ ನಿಯಮಾವಳಿ ರೂಪಿಸಲಾಗಿದ್ದು ಎಲ್ಲ ವಿಧಾನಪರಿಷತ್‌ ಸದಸ್ಯರ ಸಲಹೆ ಪಡೆದು ಒಂದು ರೂಪ ನೀಡಲಾಗಿದೆ. ಸದ್ಯದಲ್ಲೇ ಅದು ಜಾರಿಯಾಗಲಿದೆ. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿನ ಗೊಂದಲ ಸರಿಪಡಿಸಲಾಗುವುದು ಎಂದು ಸಚಿವರು ಹೇಳಿದರು.

ಹಾಸ್ಯ ಚಟಾಕಿ: ನನಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಕೊಟ್ಟ ನಂತರ ಮುಖ್ಯಮಂತ್ರಿಯವರ ಜತೆ ಕಾರಿನಲ್ಲಿ ಹೋಗುವಾಗ, “ಒಮ್ಮೆ ಹೇಗಿದೆ ಇಲಾಖೆ’ ಎಂದು ಕೇಳಿದ್ದರು. ಆಗ ನಾನು, “ಶಿಕ್ಷಕರ ವರ್ಗಾವಣೆಗೋಸ್ಕರವೇ ಬೇರೊಬ್ಬ ಸಚಿವರನ್ನು ನೇಮಕ ಮಾಡಿ ಬಿಡಿ. ನಾನು ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳ ಸಮಸ್ಯೆ, ಶಾಲೆಗಳ ಅಭಿವೃದ್ಧಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕನ್ನಡ ಮಾಧ್ಯಮ ಪ್ರಮಾಣ ಪತ್ರಕ್ಕೆ ಕ್ರಮ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಅವರ ವಯೋ ಮಿತಿಗೆ ತಕ್ಕಂತೆ 3, 4, 5 ಸೇರಿ ಯಾವುದೇ ತರಗತಿಗೆ ಸೇರಿಸುತ್ತಾರೆ. ಆದರೆ, ಮುಂದೆ ಅವರು ಪಿಯುಸಿ, ಉನ್ನತ ವ್ಯಾಸಂಗದ ನಂತರ ಯಾವುದಾದರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಕನ್ನಡ ಮಾಧ್ಯಮದ ಪ್ರಮಾಣ ಪತ್ರ ಸಿಗುವುದಿಲ್ಲ ಎಂಬ ಸಮಸ್ಯೆ ಇರುವ ಪ್ರಶ್ನೆಗೆ, ಅಧಿಕಾರಿಗಳ ಜತೆ ಚರ್ಚಿಸಿ, ಪರಿಶೀಲಿಸಲಾಗುವುದು ಎಂದು ಹೇಳಿದರು.

ಶಿಕ್ಷಕರನ್ನು ಜನಗಣತಿ, ಚುನಾವಣಾ ಕಾರ್ಯ, ರೇಷನ್‌ ಕಾರ್ಡ್‌ ವಿತರಿಸುವ ಕೆಲಸಕ್ಕೂ ಹಚ್ಚುತ್ತಾರೆ ಎನ್ನುವುದು ಆರೋಪ. ಇತ್ತೀಚೆಗೆ ನಾನು ಚುನಾವಣಾ ಆಯೋಗಕ್ಕೂ ಈ ಬಗ್ಗೆ ಪತ್ರ ಬರೆದಿ ದ್ದೇನೆ. ಶಿಕ್ಷಕರನ್ನು ಚುನಾವಣೆ ಕಾರ್ಯಕ್ಕೆ ಬಳಸಬೇಡಿ ಎಂದು ಹೇಳಿದ್ದೇನೆ. ಶಿಕ್ಷಕರು ಶಿಕ್ಷಣ ಮಾತ್ರ ನೀಡಬೇಕು. ಕ್ರಮೇಣ ಅವರಿಗೆ ಹೆಚ್ಚುವರಿ ಕೆಲಸದ ಹೊರೆ ಕಡಿಮೆ ಮಾಡಿಸಲಾಗುವುದು. ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಬ್ಯಾಗ್‌ ಹೊರೆ ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ: ಶಿಕ್ಷಣ ಮಾಧ್ಯಮ ವಿಚಾರದಲ್ಲಿ ಪೋಷಕರ ಆಯ್ಕೆ ಅಂತಿಮ ಎಂದು ಸುಪ್ರೀಂಕೋರ್ಟ್‌ ತೀರ್ಪು ಬಂದಿದ್ದು, ಅದರ ಬಗ್ಗೆ ಪುನರ್‌ ಪರಿಶೀಲನೆ ಸಲ್ಲಿಸಲು ಅವಕಾಶ ಇದೆಯಾ ಎಂಬ ಬಗ್ಗೆ ಸಾಹಿತಿಗಳು, ತಜ್ಞರ ಸಲಹೆ ಪಡೆಯಲಾಗುತ್ತಿದೆ. ಒಂದನೇ ತರಗತಿಯಿಂದ ಒಂದು ಭಾಷೆಯಾಗಿ ಇಂಗ್ಲಿಷ್‌ನ್ನು ಕಲಿಸಲು ತೀರ್ಮಾನ ಮಾಡಿದ್ದೇವೆ.

ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪಠ್ಯಕ್ರಮವನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ (ದ್ವಿಭಾಷೆ) ಇರುವಂತೆ ಸಿದ್ಧಪಡಿಸಲಾಗಿದೆ. ಏಕರೂಪ ಶಿಕ್ಷಣ ಜಾರಿಗೆ ತರುವುದು ನಮ್ಮ ಬಯಕೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಏಕರೂಪ ಶಿಕ್ಷಣಕ್ಕೆ ಒತ್ತು ಕೊಡುತ್ತದೆ. ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಮುಂದಿನ ತಿಂಗಳು ಪ್ರಧಾನಿಯವರು ಅದರ ಬಗ್ಗೆ ಘೋಷಣೆ ಮಾಡುತ್ತಾರೆ ಎನ್ನುವ ಸುದ್ದಿ ಇದೆ. ಅದಾದ ಮೇಲೆ ಇದಕ್ಕೆ ಚಾಲನೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next