Advertisement

ಚಾಲಾಕಿ ಹುಲಿ ಸಂಚಾರ: ಬೆಚ್ಚಿದ ಜನತೆ

10:12 PM Jul 10, 2019 | Lakshmi GovindaRaj |

ಗುಂಡ್ಲುಪೇಟೆ: ತಾಲೂಕಿನ ಹುಂಡೀಪುರ ಸುತ್ತಮುತ್ತ ಹಲವಾರು ದಿನಗಳಿಂದ ಸಂಚರಿಸುತ್ತಿದ್ದ ಹುಲಿಯ ಚಲನವಲನ ಅರಣ್ಯ ಇಲಾಖೆಯು ಅಳವಡಿಸಿದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ಇದು ಈಗ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹುಲಿ ಇದೇ ಜಾಗದಲ್ಲಿ ಹಲವಾರು ತಿಂಗಳುಗಳಿಂದ ತನ್ನ ಕಾರ್ಯಕ್ಷೇತ್ರ ಮಾಡಿಕೊಂಡು ಜಾನುವಾರುಗಳನ್ನು ತಿಂದು ಭಯ ಭೀತಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಈ ಭಾಗದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ.

ಸಿಬ್ಬಂದಿ ಕೊರತೆ: ಪದೇ ಪದೆ ಗ್ರಾಮಗಳತ್ತ ಬರುತ್ತಿರುವ ಹುಲಿಗಳ ಸಂಚಾರವನ್ನು ನಿರಂತರವಾಗಿ ಗಮನಿಸಿ ಕಾಡಿಗಟ್ಟಲು ಅಗತ್ಯವಾದ ಕ್ರಮಕೈಗೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಕೊರತೆಯಿಂದ ನಿರ್ಲಕ್ಷ್ಯವಹಿಸಿದ್ದು ಕಾಡಂಚಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಕಣ್ಣಿಗೆ ಕಾಣಿಸದ ಹುಲಿ: ಕಳೆದ ನಾಲ್ಕಾರು ತಿಂಗಳಿನಿಂದಲೂ ಹುಲಿಯೊಂದು ಮಗುವಿನಹಳ್ಳಿ, ಕಲಿಗೌಡನಹಳ್ಳಿ, ಹುಂಡೀಪುರ, ಕೆಬ್ಬೇಪುರ ಹಾಗೂ ಚೌಡಹಳ್ಳಿ ಸಮೀಪದಲ್ಲಿಯೇ ಸಂಚರಿಸುತ್ತಿದೆ. ಇದು ಕಳೆದ ಫೆಬ್ರವರಿ ತಿಂಗಳಿನಲ್ಲಿ ಚೌಡಹಳ್ಳಿ ಗ್ರಾಮದ ಮಹೇಶ್‌ ಅವರ ಬಾಳೆ ತೋಟದಲ್ಲಿ ಕಾಣಿಸಿಕೊಂಡ ಹೆಣ್ಣು ಹುಲಿ ಕೂಂಬಿಂಗ್‌ ಕಾರ್ಯಾಚರಣೆಯಲ್ಲಿ ಸೆರೆಯಾಗದೆ ತಪ್ಪಿಸಿಕೊಂಡಿತ್ತು.

ಬೋನು ಅಳವಡಿಕೆ: ಆದರೆ ಕಳೆದ ಕೆಲವು ದಿನಗಳಿಂದ ಹುಲಿಯೊಂದು ತನ್ನ ಎರಡು ಮರಿಗಳ ಜತೆ ಹುಂಡೀಪುರ ಗ್ರಾಮದ ಸುತ್ತಲೂ ಸಂಚರಿಸುತ್ತಿರುವುದನ್ನು ಗ್ರಾಮಸ್ಥರು, ವಾಹನ ಸವಾರರು ಜಮೀನಿನಲ್ಲಿ ನೆಲೆಸಿರುವ ರೈತರು ಕಣ್ಣಾರೆ ಕಂಡಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಹೆಜ್ಜೆ ಗುರುತುಗಳು ಕಂಡು ಬಂದ ಸ್ಥಳದಲ್ಲಿ ಬೋನು ಇರಿಸಲಾಗಿದೆ.

Advertisement

ನೀರು ಕುಡಿಯಲು ಬರುವ ಹುಲಿಗಳು: ಆದರೆ ಅದರಲ್ಲಿ ಹುಲಿಯನ್ನು ಆಕರ್ಷಿಸುವ ಯಾವುದೇ ಪ್ರಾಣಿಯನ್ನೂ ಇರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವಿನಹಳ್ಳಿ ಸಮೀಪದ ಗುಡ್ಡದ ಬದಿಯಲ್ಲಿರುವ ಮಲ್ಲಯ್ಯನಕಟ್ಟೆಯಲ್ಲಿ ನೀರು ಕುಡಿಯಲು ಬರುವ ಹುಲಿಗಳು ಹುಂಡೀಪುರ ಸಮೀಪದ ಮಾಳಿಗಮ್ಮನ ದೇವಸ್ಥಾನ ಸುತ್ತಮುತ್ತಲೂ ಸಂಚರಿಸುತ್ತಿವೆ.

20 ಕ್ಯಾಮೆರಾ ಅಳವಡಿಕೆ: ಕಳೆದ ವಾರ ಕರಿಯ ಎಂಬುವರ ಜಮೀನಿನಲ್ಲಿ ಹಸುವನ್ನು ಕೊಂದು ಹಾಕಿದೆ. ನಂತರ ಸಮೀಪದ ರವಿ ಎಂಬುವರ ಜಮೀನಿನಲ್ಲಿ ಹುಲಿ ಕಂಡು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ಇಟ್ಟು ಸುತ್ತಲೂ 20 ಕ್ಯಾಮೆರಾಗಳನ್ನು ಅಳವಡಿಸಿತ್ತು.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಈ ಸ್ಥಳದಲ್ಲಿ ಭಾರೀ ಗಾತ್ರದ ಹುಲಿಯ ಭಾಗಶಃ ದೇಹ ಸೆರೆಯಾಗಿದೆ. ಸುತ್ತಲೂ ಸಂಚರಿಸುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಬೋನಿನಲ್ಲಿ ಯಾವುದೇ ಪ್ರಾಣಿಯನ್ನಾಗಲಿ ಹುಲಿಯು ಬೇಟೆಯಾಡಿದ ಕಳೇಬರವನ್ನಾಗಲಿ ಇರಿಸಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಡು ಪ್ರಾಣಿಗಳ ಬೇಟೆ: ಬಂಡೀಪುರ ಹುಲಿಯೋಜನೆಯ ಕುಂದಕೆರೆ ಹಾಗೂ ಗೋಪಾಲಸ್ವಾಮಿಬೆಟ್ಟ ವಲಯಗಳಿಗೆ ಭಾರೀ ಪ್ರಮಾಣದ ಬೆಂಕಿ ಬಿದ್ದ ಸಂದರ್ಭದಲ್ಲಿ ಅಲ್ಲಿಂದ ಹೊರಬಂದ ಹುಲಿಗಳು ಸಮೀಪದ ಬೆಟ್ಟಗುಡ್ಡಗಳಲ್ಲಿ ನೆಲೆಕಂಡುಕೊಂಡಿವೆ. ಜಮೀನುಗಳಲ್ಲಿ ಹಾಗೂ ಗುಡ್ಡಗಳಲ್ಲಿ ನೆಲೆಸಿದ್ದ ಕಾಡುಹಂದಿಗಳನ್ನು ಬೇಟೆಯಾಡುತ್ತ ಆಗಾಗ ರೈತರ ಜಾನುವಾರುಗಳನ್ನೂ ಕೊಲ್ಲುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ರೈತರು ಜೀವವುಳಿದರೆ ಸಾಕೆಂಬ ಭಾವನೆಯಿಂದ ರಾತ್ರಿ ವೇಳೆ ತಮ್ಮ ಜಮೀನಿಗೆ ಹೋಗುವುದನ್ನೇ ಬಿಡುತ್ತಿದ್ದಾರೆ. ಯಾವುದೇ ಬೇಟೆ ದೊರಕದ ಸಂದರ್ಭದಲ್ಲಿ ಮನುಷ್ಯರ ಮೇಲೆ ಬಿದ್ದರೆ ಗತಿ ಏನು ಎಂಬುದು ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.

ಅರಣ್ಯ ಇಲಾಖೆ ನಿರ್ಲಕ್ಷ್ಯ: ಕಳೆದ ತಿಂಗಳು ಸ್ಕಂದಗಿರಿ ಪಾರ್ವತಾಂಬಾ ಬೆಟ್ಟದ ಸಮೀಪ ಜಾನುವಾರುಗಳನ್ನು ಕೊಲ್ಲುತ್ತಿದ್ದ ವನ್ಯ ಜೀವಿಗಳಿಗೆ ವಿಷವಿಕ್ಕಿದ ಘಟನೆ ನಡೆದಿದೆ. ವಿಷಪ್ರಾಶನದಿಂದಲೇ ಹುಲಿ ಹಾಗೂ ಚಿರತೆ ಸಾವನಪ್ಪಿದೆ ಎನ್ನಲಾಗುತ್ತಿದೆ.

ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮಕೈಗೊಳ್ಳುವ ಮೂಲಕ ಹುಲಿಗಳನ್ನು ಕಾಡಿಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಹುಂಡೀಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವನ್ಯಜೀವಿ ಸಂಘರ್ಷ ತಪ್ಪಿಸಬಹುದು: ಹೆಚ್ಚುತ್ತಿರುವ ಹುಲಿಗಳ ಸಂಖ್ಯೆ, ಅರಣ್ಯ ಪ್ರದೇಶದ ನಾಶದಿಂದ ಕಾಡಿಗಿಂತ ಹೆಚ್ಚಾಗಿ ಕಾಡು ಹಂದಿಗಳು ಸುತ್ತಮುತ್ತಲ ಜಮೀನಿನಲ್ಲಿ ವಾಸವಿರುತ್ತದೆ. ಇದನ್ನು ಬೇಟೆಯಾಡಲು ಹುಲಿಗಳು ಕಾಡಿನಿಂದ ಹೊರಬರುತ್ತವೆ.

ವನ್ಯಜೀವಿಗಳು ಕಾಣಿಸಿಕೊಂಡ ಸಂದರ್ಭದಲ್ಲಿ ಅಲ್ಲಿ ಕೂಡಲೇ ಬೋನು ಕ್ಯಾಮೆರಾ ಅಳವಡಿಸಿ ಸೆರೆ ಹಿಡಿದ ಹುಲಿಗಳ ಚಿತ್ರವನ್ನು ಅಭ್ಯಸಿಸಿ ನಿರಂತರ ಗಮನಿಸುವ ಮೂಲಕ ಅವುಗಳ ಸಂಚಾರವನ್ನು ಅಭ್ಯಸಿಸಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಖಾಲಿ ಬೋನು ಅಳವಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಹುಲಿಯು ಬೇಟೆಯಾಡಿದ ಪ್ರಾಣಿಯನ್ನೇ ಬೋನಿನಲ್ಲಿ ಇರಿಸಿ ಅದರ ಚಲನವಲನ ಗಮನಿಸಿದರೆ ಮಾತ್ರ ಸೆರೆ ಕಾರ್ಯಾಚರಣೆ ಯಶಸ್ವಿಯಾಗುತ್ತದೆ. ಅಲ್ಲದೆ ಕಾಡಂಚಿನ ಗ್ರಾಮಸ್ಥರ ಜತೆ ಉತ್ತಮ ಸಂಪರ್ಕ ಇಟ್ಟುಕೊಂಡರೆ ಮಾತ್ರ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಬಹುದು.

ಇತ್ತೀಚಿಗೆ ಹುಲಿ ದಾಳಿಯಿಂದ ನಮ್ಮ ಜೀವನದ ಆಧಾರ ಸ್ತಂಭವಾಗಿರುವ ಜಾನುವಾರುಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಯಾವ ಸಮಯದಲ್ಲಾದರೂ ಜಮೀನಿನಲ್ಲಿ ಮೇಯುತ್ತಿರುವ ಹಸುವಿನ ಮೇಲೆ ಹುಲಿದಾಳಿ ನಡೆಯುತ್ತಿದೆ. ಇದರಿಂದಾಗಿ ಜೀವ ಭಯದೊಂದಿಗೆ ಬದುಕ ಬೇಕಾಗಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಲಿ.
-ಪ್ರೇಮ್‌, ರೈತ, ಮೊಗುವಿನಹಳ್ಳಿ

ಹುಂಡೀಪುರದಲ್ಲಿ ಅಳವಡಿಸಿದ ಕ್ಯಾಮೆರಾದಲ್ಲಿ ಹುಲಿಯ ಸಂಪೂರ್ಣ ದೇಹ ಕಂಡುಬಂದಿಲ್ಲ. ಆದ್ದರಿಂದ ಎಲ್ಲಾ ಕಡೆಯೂ ಒಂದೇ ಹುಲಿ ಸಂಚರಿಸುತ್ತಿದೆಯೇ ಬೇರೆ ಹುಲಿಗಳಿವೇ ಎಂಬುದು ಖಚಿತವಾಗಿಲ್ಲ. ಸದ್ಯ ಕಳ್ಳಿಪುರ ಸಮೀಪದಲ್ಲಿ ಹುಲಿಸೆರೆ ಕಾರ್ಯಾಚರಣೆ ನಡೆಸುತ್ತಿದ್ದು ನಂತರ ಹುಂಡೀಪುರ ಸುತ್ತಮುತ್ತಲ ಪ್ರದೇಶದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ಮಾಡಲಾಗುವುದು. ರೈತರು ಆತಂಕ ಪಡುವುದು ಬೇಡ. ನಾವು ನಮ್ಮ ಎಲ್ಲಾ ಶ್ರಮವನ್ನು ಹಾಕಿ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ.
-ಟಿ.ಬಾಲಚಂದ್ರ, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ

* ಸೋಮಶೇಖರ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next