Advertisement

ಹುಲಿ, ಚಿರತೆ ಪ್ರತ್ಯಕ್ಷ: ಬೆಚ್ಚಿಬಿದ್ದ ಗ್ರಾಮಸ್ಥರು

07:25 AM Feb 12, 2019 | Team Udayavani |

ಕೊಳ್ಳೇಗಾಲ: ಕಾಡಂಚಿನ ಗ್ರಾಮಗಳಾದ ಜಕ್ಕಳ್ಳಿ, ಹಿತ್ತಲದೊಡ್ಡಿ, ಅರೇಪಾಳ್ಯ, ಸೂರಾಪುರ ಮತ್ತಿತರ ಗ್ರಾಮಗಳಲ್ಲಿ ಹುಲಿ ಹಾಗೂ ಚಿರತೆ ಪ್ರತ್ಯೇಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರ ಬರಲು ಹಾಗೂ ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

Advertisement

ಕಾಡಂಚಿನ ಗ್ರಾಮಗಳಲ್ಲಿರುವ ಜನರು ತೋಟದ ಮನೆಗಳಲ್ಲಿ ಹಸು, ಕುರಿ, ಕೋಳಿಗಳನ್ನು ಸಾಕಿ ಜಮೀನುಗಳಲ್ಲಿ ವಿವಿಧ ಫ‌ಸಲುಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಹುಲಿ ಮತ್ತು ಚಿರತೆ ಅಲ್ಲಲ್ಲಿ ಪ್ರತ್ಯೇಕ್ಷವಾಗಿರುವ ಸುದ್ದಿ ಹರಡುತ್ತಿದ್ದಂತೆ ಜಮೀನುಗಳಿಗೆ ತೆರಳಲು ಜೀವಭಯದಿಂದ ‌ಹಿಂದೇಟು ಹಾಕುತ್ತಿದ್ದಾರೆ.

ರಾತ್ರಿ ಸಂಚರಿಸಲು ಭಯ: ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಜನರು ಕತ್ತಲಾಗುತ್ತಿದ್ದಂತೆ ಮನೆ ಸೇರಿ ರಾತ್ರಿ ವೇಳೆ ಓಡಾಡಲು ಭಯಭೀತರಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಿಂದ ಗ್ರಾಮಗಳಿಗೆ ಬಂದಿರುವ ಹುಲಿ ಮತ್ತು ಚಿರತೆಯನ್ನು ಕೂಡಲೇ ಹಿಡಿದು ಕಾಡಿಗಟ್ಟಿ ಗ್ರಾಮಸ್ಥರ ಪ್ರಾಣ ರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಲಿ ಪ್ರತ್ಯಕ್ಷ: ತಾಲೂಕಿನ ಸೂರಾಪುರ ಗ್ರಾಮದಲ್ಲಿ ರಾತ್ರಿಯ ಹೊತ್ತುಹುಲಿಯೊಂದು ಕಾಣಿಸಿಕೊಳ್ಳುತ್ತಿದ್ದಂತೆ ತೋಟದ ಮನೆಯ ಮಾಲಿಕ ಜೋಗಿರಾಜ್‌ ಪ್ರಾಣಿಯನ್ನು ಕಂಡು ನಂತರ ಮನೆಯ ಮುಂಭಾಗ ಇರುವ ಬೊಲೆರೋ ವಾಹನದಲ್ಲಿ ಕುಳಿತು ಲೈಟನ್ನು ಪ್ರಕಾಶನಮಾನಗೊಳಿಸಿ ಹುಲಿಯ ಚಿತ್ರವನ್ನು ಸೆರೆಹಿಡಿದಿದ್ದಾರೆ.

ಹುಲಿ, ಚಿರತೆ ಹೆಜ್ಜೆ ಗುರುತು: ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕರಡಿಗುಡ್ಡದ ಮೇಲೆ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಈ ಚಿತ್ರವನ್ನು ಸೆರೆ ಹಿಡಿದಿದ್ದೇನೆ. ಅಲ್ಲದೇ ಇಲ್ಲಿ ಹುಲಿ ಹಾಗೂ ಚಿರತೆಗಳು ಓಡಾಡಿರುವ ಹೆಜ್ಜೆ ಗುರುತು ಸಹ ಇದೆ. ಇದರಿಂದ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಪ್ರತಿ ಕ್ಷಣವೂ ಆತಂಕದಲ್ಲಿ ಬದುಕುತ್ತಿದ್ದೇವೆ ಎಂದು ಅವಲತ್ತುಕೊಂಡಿದ್ದಾರೆ.

Advertisement

ಗ್ರಾಮದ ಕರಡಿಗುಡ್ಡ ಬಳಿ 130 ಎಕರೆ ಜಮೀನು ಇದ್ದು, ಜಮೀನಿನಲ್ಲಿ ಎಲ್ಲಾ ತರಹದ ಬೆಳೆಗಳನ್ನು ಹಾಕಲಾಗಿದೆ. ನಿತ್ಯ ಕಳೆ ತೆಗೆಯುವ ಕೆಲಸಕ್ಕೆ ಕೂಲಿ ಆಳುಗಳು ಹುಲಿ ಹಾಗೂ ಚಿರತೆ ಭಯದಿಂದ ಬರುತ್ತಿಲ್ಲ. ಜಮೀನುಗಳಿಗೆ ಬರಲು ಹೆದರುತ್ತಿದ್ದಾರೆ. ಕಾಡುಪ್ರಾಣಿಗಳು ಪ್ರತ್ಯೇಕವಾಗಿರುವ ಬಗ್ಗೆ ಹಲವಾರು ಬಾರಿ ಡಿಎಫ್ಒ ಬಳಿ ಹೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಕಂದಕ ನಿರ್ಮಿಸಿ: ಕಾಡು ಪ್ರಾಣಿಗಳ ಹಾವಳಿ ತಡೆಯಲು ಕಾಡಂಚಿನಲ್ಲಿ ಕಂದಕ ಕೊರೆದು, ತಂತಿ ಬೇಲಿ ನಿರ್ಮಾಣ ಮಾಡಿಕೊಡುವಂತೆ ಅರಣ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದು, ಆದರೆ ಇದುವರೆಗೂ ಕಂದಕ ಕೊರೆದಿಲ್ಲ ಮತ್ತು ತಂತಿಬೇಲಿ ನಿರ್ಮಾಣ ಮಾಡದೆ ಇರುವುದರು ಜನರಿಗೆ ಮತ್ತಷ್ಟು ಭಯ ಉಂಟಾಗಿದೆ. ಕೂಡಲೇ ಕಾಡಂಚಿನ ಗ್ರಾಮಗಳಲ್ಲಿ ಕಂದಕ ನಿರ್ಮಿಸಿ, ರೈಲ್ವೆ ಹಳಿ ನಿರ್ಮಿಸಬೇಕು. ಜೊತೆಗೆ ಈ ಭಾಗದಲ್ಲಿ ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next