ಎಚ್.ಡಿ.ಕೋಟೆ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ತಿಮ್ಮನಹೊಸಹಳ್ಳಿ ಗಿರಿಜನ ಹಾಡಿಯಲ್ಲಿ ಕೆಂಚ ಅಲಿಯಾಸ್ ಬೊಳ್ಳ (55) ಎಂಬುವರು ಗುರುವಾರ ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ಕೆಂಚ ಅವರು ತಮ್ಮ ಮೊಮ್ಮಗ, 15 ವರ್ಷದ ಕುಳ್ಳನೊಂದಿಗೆ ಮೇಕೆ (ಆಡು) ಮೇಯಿಸಲು ಕಾಡಿಗೆ ತೆರಳಿದ್ದರು. ನಾಗರಹೊಳೆ ಉದ್ಯಾನವನಕ್ಕೆ ಚಾಚಿಕೊಂಡಿರುವ ಸೇಬಿನಕೊಲ್ಲಿ ಎಂಬ ಸ್ಥಳಕ್ಕೆ ತೆರಳಿ, ಮೇಕೆಗಳನ್ನು ಮೇಯಿಸಿಕೊಂಡು, ತಿನ್ನಲು ಗೆಡ್ಡೆ ಗೆಣಸನ್ನು ಸಂಗ್ರಹಿಸಿಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ನರಭಕ್ಷಕ ಹುಲಿ ಏಕಾಏಕಿ ದಾಳಿ ಮಾಡಿತು. ಈ ವೇಳೆ, ಜತೆಯಲ್ಲಿದ್ದ ಮೊಮ್ಮಗ ಕುಳ್ಳ, ತನ್ನ ಬಳಿಯಿದ್ದ ಕಬ್ಬಿಣದ ರಾಡಿನಿಂದ, ಕಲ್ಲಿನಿಂದ ಹುಲಿಗೆ ಹೊಡೆದು ಓಡಿಸಿದ.
ಆದರೆ, ಕೆಂಚ ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಕೆಳಗೆ ಕುಸಿದು ಬಿದ್ದ. ಕುಳ್ಳ ತಕ್ಷಣ ಓಡಿ ಬಂದು, ಹಾಡಿಯ ಜನರಿಗೆ ತಿಳಿಸಿದ. ವಿಷಯ ತಿಳಿದು ಹಾಡಿಯ ಜನ ಸ್ಥಳಕ್ಕೆ ಆಗಮಿಸಿದರಾದರೂ ಆ ವೇಳೆಗಾಗಲೇ ಕೆಂಚ ಕೊನೆಯುಸಿರೆಳೆದಿದ್ದ.
ಕಳೆದ ಡಿ.25ರಂದು ಮಾನಿಮೂಲೆ ಹಾಡಿಯಲ್ಲಿ ಮಧು ಎಂಬ ಯುವಕನನ್ನು ಹುಲಿ ಕೊಂದು ಹಾಕಿತ್ತು. ಕಳೆದ 3 ದಿನಗಳ ಹಿಂದಷ್ಟೇ ಜ.28ರಂದು ಸೋಮವಾರ ಮಚ್ಚಾರು ಸಮೀಪದ ಹುಲ್ಲುಮಟ್ಲು ಗ್ರಾಮದ ಚಿನ್ನಪ್ಪನನ್ನು ಹುಲಿ ಕೊಂದು ಹಾಕಿತ್ತು. ಬಳಿಕ, ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ನರಭಕ್ಷಕ ಹುಲಿಯ ಸೆರೆಗಾಗಿ ಹತ್ತಾರು ಟ್ರ್ಯಾಪಿಂಗ್ ಕ್ಯಾಮರಾಗಳನ್ನು ಅಳವಡಿಸಿ, 5 ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಕೈಗೊಂಡಿದ್ದರು. ಆದರೂ, ವ್ಯಾಘ್ರನ ಸುಳಿವು ಸಿಕ್ಕಿರಲಿಲ್ಲ.