Advertisement
ಗರ್ಜಿಸುತ್ತಿದ್ದ ಹುಲಿಯಂತ್ರದ ಹುಲಿಗೆ ಒಂದು ಕೀಲಿ ಇದೆ. ಈಗ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇತಿಹಾಸದಲ್ಲಿ ದಾಖಲಾಗಿರುವ ಮಾಹಿತಿಯ ಪ್ರಕಾರ ಕೀಲಿಯನ್ನು ತಿರುಗಿಸಿದಾಗ ಹುಲಿ ಭೀಕರವಾಗಿ ಗರ್ಜಿಸುತ್ತಿತ್ತು. ನೆಲಕ್ಕುರುಳಿದ ಬ್ರಿಟಿಷ್ ಸೈನಿಕನ ಗಂಟಲಿಗೆ ಬಾಯಿ ಹಾಕುತ್ತಿತ್ತು. ಆಗ ಅಸಹಾಯಕ ಯೋಧ ನೋವಿನಿಂದ ನರಳುವ ದನಿ ಕೇಳಿಸುತ್ತಿತ್ತು.
ಈ ಯಂತ್ರದ ಹುಲಿಯ ಕೀಲಿ ಕೈ ತಿರುಗಿಸಿ ತಿರುಗಿಸಿ ಟಿಪ್ಪು ತನ್ನ ವೈರಿ ಪಡೆಯ ಯೋಧ ಅನುಭವಿಸುವ ಸಂಕಟದ ದನಿಯನ್ನು ಕೇಳುತ್ತಾ ಖುಷಿಪಡುತ್ತಿದ್ದನಂತೆ. ಹುಲಿಯ ಬೆನ್ನಿನ ಬಳಿಯಿರುವ 4 ತಿರುಪು ಮೊಳೆಗಳನ್ನು ತೆಗೆದರೆ ಅಲ್ಲಿರುವ ಮರದ ಜೋಡಣೆಯನ್ನು ಕಳಚಬಹುದು. ಒಳಗೆ ಕಂಚು ಬಳಸಿ ತಯಾರಾಗಿರುವ ಪೈಪ್ ಅರ್ಗನ್ ವಾದ್ಯ ಇದೆ. ಯೋಧನ ಕೊರಳಿಗೆ ಹುಲಿ ಬಾಯಿ ಹಚ್ಚಿದಾಗ ಅವನ ಕೈ ಹದಿನೆಂಟು ಅಳವಡಿಕೆಗಳಿರುವ ಆನೆ ದಂತದಲ್ಲಿ ಮಾಡಿದ ಕೀ ಬೋರ್ಡನ್ನು ತಡವುತ್ತದೆ. ಆಗ ಪೈಪ್ ಆರ್ಗನ್ ಒಳಗೆ ಗಾಳಿ ತುಂಬಿ ಯೋಧನ ಆರ್ತನಾದ ಮತ್ತು ಹುಲಿಯ ಗರ್ಜನೆಯ ಸದ್ದು ಕೇಳಿಬರುವ ಹಾಗೆ ಸ್ವಯಂಚಾಲಿತ ವ್ಯವಸ್ಥೆ ಮಾಡಲಾಗಿತ್ತು. ಹಾಳಾಗಿದ್ದು ಹೇಗೆ?
ಈಸ್ಟ್ ಇಂಡಿಯಾ ಕಂಪೆನಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಟಿಪ್ಪುವಿನ ಹುಲಿ 1808ರ ಬಳಿಕ ಪ್ರದರ್ಶಿತವಾಗುತ್ತಿತ್ತು. 1880ರಲ್ಲಿ ಅದನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಸಂಗ್ರಹಾಲಯಕ್ಕೆ ವರ್ಗಾಯಿಸಲಾಯಿತು. ದ್ವಿತೀಯ ಮಹಾಯುದ್ಧದ ಕಾಲದವರೆಗೂ ಯಂತ್ರ ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ವಸ್ತು ಸಂಗ್ರಹಾಲಯದ ಛಾವಣಿ ಕುಸಿದಾಗ ಯಂತ್ರದ ಹುಲಿ ಹಲವು ತುಂಡುಗಳಾಗಿತ್ತು. ಆವತ್ತಿನಿಂದ ಹುಲಿ ಮತ್ತು ಆಂಗ್ಲ ಸೈನಿಕ ತಮ್ಮ ದನಿಯನ್ನು ಕಳೆದುಕೊಂಡುಬಿಟ್ಟಿದ್ದರು.
ಯಂತ್ರದ ಹುಲಿ ತಮ್ಮ ವಿರುದ್ಧದ ಕ್ರೌರ್ಯದ ಪ್ರತೀಕವಾಗಿದ್ದರೂ ಆಂಗ್ಲರು ಯಂತ್ರವನ್ನು ಇಂದಿಗೂ ಜೋಪಾನವಾಗಿಟ್ಟಿದ್ದಾರೆ. ಅಮೆರಿಕ, ಯುರೋಪು ಮೊದಲಾದ ಹಲವು ದೇಶಗಳ ವಿಶೇಷ ಉತ್ಸವಗಳಲ್ಲಿ ಅದರ ಪ್ರದರ್ಶನವೂ ನಡೆದಿದೆ. ಈ ಹುಲಿಯ ಚಿತ್ರವಿರುವ ಅಂಚೆಚೀಟಿಗಳು, ಗೊಂಬೆಗಳು ಸೇರಿದಂತೆ ಹಲವಾರು ಸಾಮಗ್ರಿ ತಯಾರಾಗಿ ಇಂದಿಗೂ ಮಾರಾಟಗೊಳ್ಳುತ್ತಲೇ ಇವೆ.
Related Articles
ಈ ಯಂತ್ರವನ್ನು ತಯಾರಿಸಿ ಕೊಟ್ಟವರು ಫ್ರಾನ್ಸಿನ ನಿವೃತ್ತ ಸೇನಾ ತಂತ್ರಜ್ಞರು, ಕುಶಲಕರ್ಮಿಗಳು ಹಾಗೂ ಬಡಗಿಗಳು. ಹುಲಿಯನ್ನು ಮರದಿಂದ ತಯಾರಿಸಲು ಮೈಸೂರು ಕಲೆಯ ಶೈಲಿಯನ್ನು ಬಳಸಲಾಗಿದೆ. 1799ರ ಮೇ 4ರಂದು ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರು ಟಿಪ್ಪುವಿನ ಅರಮನೆಗೆ ನುಗ್ಗಿದರು. ಅವರೊಂದಿಗೆ ನಡೆದ ಘರ್ಷಣೆಯು ಟಿಪ್ಪುವಿನ ಸಾವಿನೊಡನೆ ಅಂತ್ಯವಾಯಿತು. ಟಿಪ್ಪುವಿಗೆ ಸೇರಿದ ಹಲವಾರು ವಸ್ತು ವಿಶೇಷಗಳ ಜೊತೆಗೆ ಸಂಗೀತ, ನೃತ್ಯಗಳ ಕೊಠಡಿಯಲ್ಲಿದ್ದ ಈ ಯಂತ್ರದಹುಲಿ ಕೂಡ ವೈರಿಗಳ ವಶವಾಯಿತು. 1800ರಲ್ಲಿ ಅದನ್ನು ಇಂಗ್ಲೆಂಡಿಗೆ ಸಾಗಿಸಲಾಯಿತು. ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ “ಈ ಯಂತ್ರದ ಹುಲಿ ಟಿಪ್ಪುವಿನ ಅಹಂಕಾರ ಮತ್ತು ಆಂಗ್ಲ ವಿರೋಧಿ ಕ್ರೌರ್ಯದ ಪ್ರತಿರೂಪ’ ಎಂದು ಹೇಳಿದ.
Advertisement
-ಪ.ರಾಮಕೃಷ್ಣ ಶಾಸ್ತ್ರಿ