Advertisement
ತಾಲೂಕಿನ ಹನಗೋಡು ಗ್ರಾಮದ ಕೃಷಿಕ ನಾಗೇಶರ ಲಕ್ಷ್ಮಣತೀರ್ಥ ನದಿಯಂಚಿನ ತೋಟದಲ್ಲಿ ಆಗಾಗ್ಗೆ ಹುಲಿ ಓಡಾಡಿರುವ ಹೆಜ್ಜೆಯ ಕುರುಹು ಪತ್ತೆಯಾಗಿದ್ದು, ಈ ಭಾಗದಲ್ಲಿ ಹಲವರ ತೋಟ ಹಾಗೂ ಹೊಲ-ಗದ್ದೆಗಳಿದ್ದು, ಓಡಾಡಲು ಭಯಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ರೈತರು ಆರೋಪಿಸಿದ್ದಾರೆ.
ಉದ್ಯಾನದಂಚಿನ ನೇರಳಕುಪ್ಪೆ ಗ್ರಾಮದ ಎ.ವಿ. ಶಂಕರ್‌ಶಗ್ರಿತ್ತಾಯ, ಕಮಲಮ್ಮ, ಹಾಗೂ ವಸುಧ ರವೀಂದ್ರರ ತೋಟದಲ್ಲಿ ಹುಲಿ ಓಡಾಟ ನಡೆಸಿರುವ ಜಾಡು ಪತ್ತೆಯಾಗಿದ್ದು. ಎರಡೂ ಕಡೆ ಇದೇ ಹುಲಿಯೋ ಆಥವಾ ಬೇರೆಯದೋ ಎಂಬುದು ಪತ್ತೆಯಾಗಬೇಕಿದೆ. ಕಳೆದ ವಾರವಷ್ಟೆ ಶೆಟ್ಟಹಳ್ಳಿ-ಲಕ್ಕಪಟ್ಟಣದ ಸುತ್ತ ಮುತ್ತಲ ಜಮೀನುಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿತ್ತು. ಇದೀಗ ಭಾನುವಾರ ರಾತ್ರಿ ನೇರಳಕುಪ್ಪೆ ಸುತ್ತಮುತ್ತಲ ಜಮೀನಿನಲ್ಲಿ ಹುಲಿ ಓಡಾಟ ನಡೆಸಿರುವುದು ಹೆಜ್ಜೆ ಪತ್ತೆಯಾಗಿರುವುದರಿಂದ ಹುಲಿ ಇರುವಿಕೆ ಧೃಡಪಡಿಸಿದ್ದು, ಕಾಡಂಚಿನಲ್ಲಿರುವ ಜಮೀನುಗಳಿಗೆ ತೆರಳಲು ರೈತರು ಭಯಭೀತರಾಗಿದ್ದಾರೆ.
ನೇರಳಕುಪ್ಪೆ ಭಾಗಕ್ಕೆ ಹುಣಸೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
Related Articles
Advertisement
ಹುಲಿ ಸೆರೆಗೆ ಆಗ್ರಹ:
ವರ್ಷದ ಹಿಂದೆ ನೇರಳಕುಪ್ಪೆ ಎ ಹಾಡಿಯ ವೃದ್ದ ಕುರಿ ಕಾಯುತ್ತಿದ್ದ ವೇಳೆ ಹುಲಿಯು ಕೊಂದು ರುಂಡವನ್ನು ಬಿಟ್ಟು ಹೋಗಿತ್ತು, ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಅಯ್ಯನಕೆರೆ ಹಾಡಿ ಬಳಿ ಯುವಕನೊರ್ವನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು.
ಇದೀಗ ಹನಗೋಡು ಸುತ್ತಮುತ್ತಲ ಹಳ್ಳಿಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ನಗರದಿಂದ ತಡವಾಗಿ ಬರುವ ಈ ಭಾಗದ ವಿದ್ಯಾರ್ಥಿಗಳು-ಗ್ರಾಮಸ್ಥರು ಓಡಾಡಲು, ರೈತರು ಜಮೀನಿಗೆ ತೆರಳಲು, ವಾಹನ ಸವಾರರು ಸಂಚರಿಸಲು ಹೆದರುತ್ತಿದ್ದು. ಅರಣ್ಯ ಇಲಾಖೆ ಅನಾಹುತವಾಗುವ ಮೊದಲೇ ಹುಲಿ ಸೆರೆಗೆ ಕ್ರಮವಹಿಸುವಂತೆ ಹನಗೋಡು ಹಾಗೂ ನೇರಳಕುಪ್ಪೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.