ಮಹಾನಗರ: ಒಂದೆಡೆ ನವರಾತ್ರಿ ಸಂಭ್ರಮಕ್ಕೆ ಮಂಗಳೂರು ಸಿದ್ಧವಾಗುತ್ತಿರುವಂತೆ, ಮತ್ತೂಂದೆಡೆ ತಾಸೆಯ ಶಬ್ದದೊಂದಿಗೆ ಹುಲಿ ವೇಷದ ಅಬ್ಬರವೂ ಕರಾವಳಿಯಾದ್ಯಂತ ಮೋಡಿ ಮಾಡಲಿದೆ. ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಹುಲಿ ವೇಷದ ಸೊಬಗು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಲ್ಲ; ಬದಲಾಗಿ ಅದರ ಹಿಂದೆ ನಂಬಿಕೆ ಹಾಗೂ ಆರಾಧನೆಯೂ ಅಡಕವಾಗಿದೆ.
ಕಷ್ಟ ಕಾಲದಲ್ಲಿ ದೇವಿಯನ್ನು ಸ್ಮರಿಸಿ ʼವೇಷ ಹಾಕುವುದಾಗಿ’ ಹರಕೆ ಹೇಳುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಅದರಂತೆ ಹುಲಿ ವೇಷ ಪ್ರಾಧಾನ್ಯ ಪಡೆದಿದೆ. ಪಟ್ಟೆ ಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ ಹೀಗೆ ನಾನಾ ರೀತಿಗಳಿವೆ. ಕೆಲವೆಡೆ ಲಲಿತ ಪಂಚಮಿಯಂದು ಹುಲಿವೇಷ ಹಾಕುವ ಪದ್ಧತಿ ಇತ್ತು. ಆದರೆ ಇತ್ತೀಚೆಗೆ ದಿನ ಕಡಿಮೆಯಾಗಿದೆ. ಕೊನೆಯ ದಿನದಂದೇ ವೇಷ ಹಾಕುತ್ತಾರೆ.
ರಂಗ್‌ಗೆ ಕುಳಿತುಕೊಳ್ಳುವ ಮುನ್ನ…
ಮೊದಲೆಲ್ಲ ಚೌತಿ ಅಥವಾ ನವರಾತ್ರಿಯ 40 ದಿನಗಳ ಮುನ್ನವೇ ಹುಲಿ ವೇಷ ಹಾಕುವವರು ಮುಹೂರ್ತ ಮಾಡುತ್ತಾರೆ. ಇದಕ್ಕೆ “ಊದು’ ಇಡುವುದು ಎನ್ನುತ್ತಾರೆ. ದೇವರ ಫೋಟೋವನ್ನಿಟ್ಟು, ಹುಲಿ ಕುಣಿತಕ್ಕೆ ಬಳಸಲಾಗುವ ಟೊಪ್ಪಿ, ಚಡ್ಡಿ, ಜಂಡೆಯನ್ನು ದೇವರ ಮುಂದಿರಿಸಿ ಪೂಜೆ ಮಾಡುವುದು ಕ್ರಮ. ಅಂದಿನಿಂದಲೇ ಹುಲಿ ವೇಷಧಾರಿ ವ್ರತಾಚರಣೆಯಲ್ಲಿ ಇರುತ್ತಿದ್ದರು. ಆದರೆ ಈಗ ರಂಗ್‌ಗೆ ಕುಳಿತುಕೊಳ್ಳುವ ಮುನ್ನಾ ದಿನವೇ “ಊದು’ ಇಡಲಾಗುತ್ತದೆ. ಅದಕ್ಕಾಗಿ ಕನಿಷ್ಠ 1 ವಾರ ವೇಷಧಾರಿ ವ್ರತಾಚರಣೆಯಲ್ಲಿ ಇರುತ್ತಾರೆ. ಊದು ಇಡುವ ದಿನ ಪೂಜೆ ಆದ ಬಳಿಕ ಗುರು ಹಿರಿಯರ ಆಶೀರ್ವಾದ ಪಡೆದು, ವೇಷ ಹಾಕದೆ ಹುಲಿ ವೇಷಧಾರಿ ನರ್ತನ ಮಾಡಬೇಕಿದೆ.
ಅಗಸೆ ಕಾಯಿಯ ಬೀಜದಿಂದ ಬಣ್ಣ!
ಹಲವು ವರ್ಷದ ಹಿಂದೆ ಹುಲಿ ವೇಷದ ಬಣ್ಣ ಹಾಕಲು ಈಗಿನಂತೆ ಪೈಂಟ್ ಬಳಸುತ್ತಿರಲಿಲ್ಲ. ಅಗಸೆ ಕಾಯಿಯ ಬೀಜವನ್ನು ಕಲ್ಲಿನಲ್ಲಿ ಅರೆದು ಬಣ್ಣ ಹಚ್ಚಲಾಗುತ್ತಿತ್ತು. ಆಗ ಬಣ್ಣ ಹಚ್ಚಲು ಕೆಲವೊಮ್ಮೆ ಒಂದು ದಿನ ಕೂಡ ತಗಲುತ್ತಿತ್ತು. ಹುಲಿಗೆ “ಪಟ್ಟಿ’ ಬಣ್ಣ ಹಾಕಲು ಚಿಮಿಣಿಯ ಕರಿಯನ್ನು ಬಳಸಲಾಗುತ್ತಿತ್ತು. ಆದರೆ ಈಗ ಪೈಂಟ್, ಸ್ಪ್ರೆ ಬಳಸಲಾಗುತ್ತಿದೆ. ಹುಲಿ ವೇಷದ ಜತೆಗೆ ಇತರ ವೇಷಗಳು ಕೂಡ ನವರಾತ್ರಿಯಲ್ಲಿ ಕಾಣಸಿಗುತ್ತದೆ. ಶಾರ್ದುಲ, ಕರಡಿ, ಚಂಡಮುಂಡರು, ಶೂರ್ಪನಖೀ, ಬ್ರಹ್ಮಕಪಾಲ, ಪ್ರೇತ, ಕುರು ಕುರು ಮಾಮ, ಡ್ಯಾನ್ಸ್, ಜಕ್ಕ ಮದಿನ, ಬೇಡರ ನೃತ್ಯ… ಹೀಗೆ ನೂರಾರು ಬಗೆಯ ವೇಷಗಳನ್ನು ಕಾಣುವುದೇ ಒಂದು ಗಮ್ಮತ್ತು!
ಕುಡ್ಲದಲ್ಲಿ ಜೋಡಿ ಪಿಲಿ ಗೊಬ್ಬು!
ಈ ಬಾರಿಯ ನವರಾತ್ರಿ ಸಡಗರಕ್ಕೆ “ಜೋಡಿ ಪಿಲಿ ಗೊಬ್ಬು’ ರಂಗೇರಿಸಲಿದೆ. ಮಂಗಳೂರಿನ ಪಿಲಿನಲಿಕೆ ಪ್ರತಿಷ್ಠಾನದ ವತಿಯಿಂದ ಅ. 4ರಂದು ಕರಾವಳಿ ಉತ್ಸವ ಮೈದಾನದಲ್ಲಿ 7ನೇ ವರ್ಷದ “ಪಿಲಿ ನಲಿಕೆ’ ನಡೆಯಲಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ “ಕುಡ್ಲದ ಪಿಲಿ ಪರ್ಬ’ ಅ. 2ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ.
ಬಣ್ಣಕ್ಕಾಗಿ ತಾಸುಗಟ್ಟಲೆ!
ಹುಲಿ ವೇಷಧಾರಿ ಬಣ್ಣ ಹಾಕುವಾಗ ಸುಮಾರು 3 ಗಂಟೆ ಎರಡು ಕೈಯನ್ನು ಉದ್ದದ ಕೋಲಿನ ಮೇಲೆ ಇಟ್ಟು ನಿಂತಿರಬೇಕು. ಪೈಂಟ್ ಬಳಿಯುವ ಸಂದರ್ಭ ಕೋಲಿನಿಂದ ಆತ ಕೈ ತೆಗೆಯುವಂತಿಲ್ಲ. ಕುಳಿತುಕೊಳ್ಳುವಂತೆಯೂ ಇಲ್ಲ. ಮೈಗೆ ಹಾಕಿದ ಬಣ್ಣ ಯಥಾಸ್ಥಿತಿಯಲ್ಲಿಯೇ ಇದ್ದು ಒಣಗಬೇಕು. ಕೆಲವರ ದೇಹದಲ್ಲಿ ಪೈಂಟ್ ಕೆಲವೇ ಗಂಟೆಯಲ್ಲಿ ಒಣಗುತ್ತದೆ. ಬಣ್ಣ ಹಾಕಿದ ಬಳಿಕ ನೇರವಾಗಿ ದೇವಸ್ಥಾನಕ್ಕೆ ಬಂದು “ಜಂಡೆ ಮೆರವಣಿಗೆ’ ಮಾಡಿ ಪೂಜೆ ಸಲ್ಲಿಸಿದ ಬಳಿಕ ಹುಲಿಯ ಟೊಪ್ಪಿ ಹಾಕಬೇಕಾಗುತ್ತದೆ.
-ದಿನೇಶ್ ಇರಾ