Advertisement

ಹುಣಸೂರು: ಇಂದಿನಿಂದ ನಾಗರಹೊಳೆಯಲ್ಲಿ ಹುಲಿ ಗಣತಿ ಕಾರ್ಯ ಆರಂಭ

10:28 AM Jan 27, 2023 | Team Udayavani |

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.27 ರಿಂದ ಫೆ.6 ರವರೆಗೆ ಎಂಟು ದಿನಗಳ ಕಾಲ ಹುಲಿಗಣತಿ ಕಾರ್ಯ ನಡೆಯಲಿದೆ.

Advertisement

ಈ ಸಂಬಂಧ ಜ.26 ಗುರುವಾರದಂದು ವೀರನಹೊಸಹಳ್ಳಿ ವಲಯ ಕಚೇರಿಯಲ್ಲಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದರ ನೇತೃತ್ವದಲ್ಲಿ ಬೆಂಗಳೂರಿನ ಟೈಗರ್‌ಸೆಲ್‌ನ ವಿನಯ್ ಹಾಗೂ ಡಿಆರ್‌ಎಫ್‌ಓ ನಂದನ್ ತರಬೇತಿ ನೀಡಿದರು.

ಈ ವೇಳೆ ಮಾಹಿತಿ ನೀಡಿದ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದರವರು ಮೊದಲ ಮೂರು ದಿನ ಮಾಂಸಹಾರಿ ಹಾಗೂ ದೊಡ್ಡ ಪ್ರಾಣಿಗಳ ಸಮೀಕ್ಷೆ ನಡೆಸಿ ಎಕಾಲಾಜಿಕಲ್ ಆ್ಯಪ್‌ನಲ್ಲಿ ದಾಖಲಿಸಬೇಕು.

ನಂತರ ಮೂರು ದಿನ ಲೈನ್ ಟ್ರಾಂಜ್ಯಾಕ್ಟ್ ಮೂಲಕ ಪ್ರತಿ ಬೀಟ್‌ನಲ್ಲಿ ಸುಮಾರು 1-2 ಕಿ.ಮೀ ವರೆಗೆ ಸಸ್ಯಹಾರಿ ಪ್ರಾಣಿಗಳ ಸರ್ವೆ, ಮರಗಿಡ, ಗಿಡಮೂಲಿಕೆ ಸಸ್ಯ ಪ್ರಬೇಧಗಳ ಮಾಹಿತಿ ಸಂಗ್ರಹಣೆ, ಸಸ್ಯಹಾರಿ ಪ್ರಾಣಿಗಳ ಹಿಕ್ಕೆಗಳ ಪರಿವೀಕ್ಷಣೆ ನಡೆಸಲಾಗುವುದು.

ಏಳನೇ ದಿನ ರಣಹದ್ದುಗಳ ಸಮೀಕ್ಷೆ ನಡೆಸಲಾಗುವುದು. ಕೊನೆಯ ದಿನ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಿ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು.

Advertisement

ಉದ್ಯಾನದ 8 ವಲಯಗಳ 91 ಬೀಟ್‌ನಲ್ಲಿ ಗಣತಿ ಕಾರ್ಯ ನಡೆಯಲಿದ್ದು, ಗಣತಿ ಕಾರ್ಯದಲ್ಲಿ ಸಂಪೂರ್ಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ತೊಡಗಿಸಿಕೊಳ್ಳಲಿದ್ದಾರೆ. ಯಾವುದೇ ಸ್ವಯಂ ಸೇವಕರನ್ನು ಈ ಕಾರ್ಯಕ್ಕೆ ಬಳಸಿಕೊಂಡಿಲ್ಲವೆಂದು ಡಿಸಿಎಫ್ ಮಾಹಿತಿ ನೀಡಿದರು.

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಳೆದ ಬಾರಿ ನಡೆಸಿದ್ದ ಹುಲಿ ಗಣತಿ ಕಾರ್ಯದ ಅಂಕಿ ಅಂಶ ಈವರೆಗೂ ಬಿಡುಗಡೆಯಾಗದಿರುವುದು, ಮತ್ತೆ ಈಗ ಗಣತಿ ಕಾರ್ಯಾರಂಭವಾಗಿರುವುದು ಇದೀಗ ಚರ್ಚಾ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next