ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿ ಧಾಮ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿ ಹಾಗೂ ಇನ್ನಿತರ ಪ್ರಾಣಿಗಳ ಮಾಹಿತಿ ದಾಖಲಿಸುವ ಕಾರ್ಯವನ್ನು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸುತ್ತಿದ್ದಾರೆ.
ಅಖೀಲ ಭಾರತ ಹುಲಿ ಗಣತಿ ಸೇರಿದಂತೆ ಇನ್ನಿತರ ಪ್ರಾಣಿಗಳ ಕುರಿತು ಮಾಹಿತಿ ದಾಖಲಿಸುವ ಕಾರ್ಯ ಫೆ. 17ರಿಂದ ಪ್ರಾರಂಭವಾಗಿದ್ದು, ಮೊದಲ ಹಂತದಲ್ಲಿ ಕರ್ನಾಟಕ ರಾಷ್ಟ್ರೀಯ ವನ್ಯಜೀವಿಧಾಮ ಮತ್ತು ಸಂರಕ್ಷಿತ ಅರಣ್ಯ, ಇತರೆ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಪ್ರಾಣಿಗಳ ಗಣತಿ ಕಾರ್ಯ ಮಾಡುವುದಕ್ಕಾಗಿ 14 ತಂಡ ರಚಿಸಲಾಗಿದೆ. ಪ್ರತಿಯೊಂದು ತಂಡದಲ್ಲಿ ಮೂರರಿಂದ ಐವರು ಅರಣ್ಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಈ ತಂಡಗಳು ಮೂರು ದಿನಗಳ ಕಾಲ (ಫೆ.28ರ ವರೆಗೆ) ಅರಣ್ಯಪ್ರದೇಶದ ಬೇರೆಬೇರೆ ಭಾಗಗಳಲ್ಲಿ 5ಕಿ.ಮೀ ವರೆಗೆ ಪ್ರತಿ ದಿನ ಗಸ್ತು ತಿರುಗಲಿವೆ. ಈ ವೇಳೆ ಕಂಡು ಬರುವ ಮಾಂಸಹಾರಿ ಪ್ರಾಣಿಗಳ ಮಾಹಿತಿ, ಇಲ್ಲವೇ ಧ್ವನಿ ಕೇಳಿಸಿದರೆ, ಅವುಗಳ ಹೆಜ್ಜೆ ಗುರುತು, ಹಿಕ್ಕೆ, ನೆಲ ಕೆದರುವುದು, ಗಿಡ ಕೆದರುವುದು, ಪ್ರಾಣಿಗಳ ಕಳೆಬರ ಕಂಡು ಬಂದರೆ ದಾಖಲಿಸಲಾಗುತ್ತದೆ.
ಮಾಂಸಹಾರಿ ಪ್ರಾಣಿಗಳಾದ ಹುಲಿ, ಚಿರತೆ, ಕಾಡು ನಾಯಿ, ತೋಳ, ನರಿ, ಕತ್ತೆಕಿರುಬ, ಪುನುಗು ಬೆಕ್ಕು, ಕಾಡು ಬೆಕ್ಕು, 2ಕಿ.ಮೀ ಉದ್ದದಲ್ಲಿ ಸುಣ್ಣದಿಂದ ರೇಖೆ ಹಾಕಿ ಅದರಲ್ಲಿ ವಿವಿಧ ವಿನ್ಯಾಸದ ವೃತ್ತ ಹಾಕಿ ಅದರಲ್ಲಿ ದೊರೆತ ಸಸ್ಯಪ್ರಕಾರಗಳು, ಹುಲ್ಲಿನ ಮಾಹಿತಿ ದಾಖಲಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಬರುವ ಕುಸರಂಪಳ್ಳಿ ಅರಣ್ಯಪ್ರದೇಶದಲ್ಲಿ ಚಿರತೆಗಳ ಹೆಜ್ಜೆ ಗುರುತುಗಳು ಕಂಡು ಬಂದಿವೆ.
ಗೊಟ್ಟಂಗೊಟ್ಟ, ಮಾಣಿಕಪುರ, ಸಂಗಾಪುರ, ಧರ್ಮಸಾಗರ, ಸೇರಿಭಿಕನಳ್ಳಿ, ಭೋಗಾಲಿಂಗದಳ್ಳಿ, ಚಂದ್ರಂಪಳ್ಳಿ ಅರಣ್ಯಪ್ರದೇಶದಲ್ಲಿ ಕಳೆದ ಐದಾರು ವರ್ಷಗಳಿಂದ ಚಿರತೆ ಹೆಜ್ಜೆಗುರುತುಗಳು ಕಂಡು ಬರುತ್ತಿವೆ. ಕಲಬುರಗಿ ಎಸಿಎಫ್ ಸುನೀಲ ಚವ್ಹಾಣ, ಉಪ-ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ, ಭಾನುಪ್ರತಾಪಸಿಂಗ್, ನಟರಾಜ, ಅರಣ್ಯರಕ್ಷಕರಾದ ಶೇಖ್ ಅಹೆಮದ್, ಮಾಳಪ್ಪ ಪೂಜಾರಿ, ಹಾಲೇಶ ಪ್ರಭು ಜಾಧವ ಇನ್ನಿತರರು ಪ್ರಾಣಿಗಳ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.