ಗುಂಡ್ಲುಪೇಟೆ: ನೆರೆಯ ತಮಿಳುನಾಡಿನಲ್ಲಿ ನಾಲ್ಕು ಮಂದಿ ಮತ್ತು 30ಕ್ಕೂ ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯುವ ಮೂಲಕ ತಮಿಳುನಾಡು, ಕೇರಳ ಮತ್ತು ಕರ್ನಾಟಕ ಅರಣ್ಯ ಇಲಾಖೆಯವರ 21 ದಿನಗಳ ಸತತ ಕಾರ್ಯಾಚರಣೆಗೆ ಶುಕ್ರವಾರ ಯಶ ಸಿಕ್ಕಿದೆ.
ಮಧುಮಲೈ ಅರಣ್ಯದ ಮಸಣಿಗುಡಿ ವ್ಯಾಪ್ತಿಯ ದಟ್ಟ ಕಾಡು ಕೂಟುಪಾರೈ ಪ್ರದೇಶದಲ್ಲಿ ಅರವಳಿಕೆ ನೀಡುವ ಮೂಲಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಸುಮಾರು 6 ವರ್ಷ ಪ್ರಾಯದ ಗಂಡು ಹುಲಿ ಇದಾಗಿದ್ದು, ಚೆನ್ನೈನ ವಂದಲೂರು ಮೃಗಾಲಯಕ್ಕೆ ಸಾಗಿಸಲಾಗಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿ, ನೌಕರರು ಮತ್ತು ಪರಿಣತರು ಎಂಟಿ-23(ಮಧುಮಲೈ ಟೈಗರ್ -23) ಹೆಸರಿನಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾ ಚರಣೆ ಆರಂಭಿಸಿದ್ದರು.
ಇದನ್ನೂ ಓದಿ:- ಬಾಂಗ್ಲಾದಲ್ಲಿ ಮುಂದುವರಿದ ಅಟ್ಟಹಾಸ: ಹಿಂದೂ ದೇವಾಲಯ ಧ್ವಂಸ, ಓರ್ವ ಭಕ್ತನ ಸಾವು
ಜಾಡು ಹಿಡಿದು ತಂಡಗಳಲ್ಲಿ ಸಾಕಾನೆಗಳೊಂದಿಗೆ ಮಧುಮಲೈ ಅರಣ್ಯದ ಬಹುತೇಕ ಪ್ರದೇಶ ಜಾಲಾಡಿದ್ದರು. ಅರಣ್ಯ ಅಪರಾಧಗಳ ಪತ್ತೆ ಮೂಲಕ ಕೀರ್ತಿ ಗಳಿಸಿದ್ದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಶ್ವಾನ ರಾಣಾನನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿತ್ತು. ಹುಲಿಯ ಸುಳಿವು ಸಿಕ್ಕಿರಲಿಲ್ಲ. ಈಗಾಗಿ ಮತ್ತೆ ಎಲ್ಲಿ ಹುಲಿ ಜನರನ್ನು ಬಲಿ ಪಡೆಯುವುದೋ ಎಂಬ ಆತಂಕ ಎದುರಾಗಿತ್ತು.
ಹೇಗಾದರೂ ಮಾಡಿ ಹುಲಿಯನ್ನು ಸೆರೆ ಹಿಡಿಯಲೇಬೇಕಾದ ಅನಿವಾರ್ಯತೆ ಹಿನ್ನೆಲೆ ಯಲ್ಲಿ ಹಗಲಿರುಳು ಮೂರು ರಾಜ್ಯದ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರು ಬಿಡುವಿಲ್ಲದ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಶುಕ್ರವಾರ ಹುಲಿ ಸೆರೆ ಸಿಕ್ಕುವ ಮೂಲಕ ಅರಣ್ಯ ಇಲಾಖೆ ಅಧಿಕಾರಿ, ನೌಕರರು ಮತ್ತು ಪರಿಣಿತರು ಮತ್ತು ಮಸಣಿಗುಡಿ ಭಾಗದಲ್ಲಿ ವಾಸಿಸುವ ಜನರು ನಿಟ್ಟುಸಿರು ಬಿಡುವಂತಾಗಿದೆ.