ವಿಜಯಪುರ: ನಗರದಲ್ಲಿ ಅಕ್ರಮವಾಗಿ ಹುಲಿ, ಜಿಂಕೆ (ಕೃಷ್ಣಮೃಗ) ಚರ್ಮ, ಹುಲಿಯ ಎರಡು ಉಗುರು ಸಂಗ್ರಹಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ, ಓರ್ವನನ್ನು ಬಂಧಿಸಿದೆ.
ಅರಣ್ಯ ಇಲಾಖೆ ಜೀವಶಾಸ್ತ್ರ ವಿಭಾಗದ ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದೆ.
ದಾಳಿಯ ವೇಳೆ ಮಹೇಶ ಹಿರೇಮಠ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ ಹುಲಿ ಚರ್ಮ, ಹುಲಿಯ ಉಗುರುಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಹುಲಿ, ಜಿಂಕೆ ಚರ್ಮ, ಉಗುರುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಅಪರಾಧ ಪತ್ತೆಯಾಗಿರುವುದು ಬಹುದೊಡ್ಡ ಪ್ರಕರಣ ಎನಿಸಿದೆ.
ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣೆ ಪ್ರಕರಣ ದಾಖಲಿಸಿದ್ದು, ಅರೋಪ ಸಾಬೀತಾದಲ್ಲಿ 7 ವರ್ಷ ಕಠಿಣ ಶಿಕ್ಷೆ ಅಗಲಿದೆ ಎಂದು ಡಿಎಫ್ಓ ಅಶೋಕ ಪಾಟೀಲ ವಿವರಿಸಿದ್ದಾರೆ.
ದಾಳಿಯ ತಂಡದಲ್ಲಿ ಎಸಿಎಫ್ ಬಿ.ಪಿ.ಚವ್ಹಾಣ, ವಲಯ ಅರಣ್ಯ ಅಧಿಕಾರಿ ಪ್ರಭುಲಿಂಗ ಭುಯ್ಯಾರ, ಉಪ ವಲಯ ಅರಣ್ಯಾಧಿಕಾರಿ ಗುರ ಲೋಣಿ, ಮಹಾದೇವಿ ನಿಡಗುಂದಿ ಮಠ, ಬಸಮ್ಮ ಗೋನಾಳ, ಶಿವಾನಂದ ಮೇತ್ರಿ, ರವಿ ರಾಠೋಡ, ಆರ್.ಎಚ್. ಜಮಾದಾರ, ಅನಿಲ ಲೋಣಿ, ಸಿ.ಎಂ.ಪಟ್ಟಣಶಟ್ಟಿ, ಪ್ರವೀಣ ಅಂಗಡಿ ಇವರಿದ್ದ ತಂಡ ದಾಳಿ ನಡೆಸಿದೆ ಎಂದು ವಿವರ ನೀಡಿದ್ದಾರೆ.