ಹುಣಸೂರು: ಅರಣ್ಯದಂಚಿನ ಗ್ರಾಮಗಳಲ್ಲಿ ನಿತ್ಯ ವನ್ಯಜೀವಿಗಳ ಹಾವಳಿ ಎಗ್ಗಿಲ್ಲದೆ ಮುಂದುವರೆದಿದ್ದು, ಆ.6ರ ಗುರವಾರ ಹಾಡು ಹಗಲೇ ಹುಲಿಯೊಂದು ಜಾನುವಾರು(ಎತ್ತಿನ) ಮೇಲೆ ದಾಳಿ ನಡೆಸಿ ತೀವ್ರಗಾಯ ಗೊಳಿಸಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ಕೋಣನಹೊಸಹಳ್ಳಿ ಬಳಿ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಕೊಳವಿಗೆಯ ಶಿವಣ್ಣರಿಗೆ ಸೇರಿದ ಎತ್ತು ಇದಾಗಿದ್ದು, ಗುರುವಾರ ಮದ್ಯಾಹ್ನ ಜಮೀನಿನಿಂದ ಹಸುಗಳನ್ನು ಮನೆ ಕಡೆಗೆ ಕರೆತರುತ್ತಿದ್ದ ವೇಳೆ ಹುಲಿ ಒಮ್ಮೆಲೆ ಎತ್ತಿನ ಮೇಲೆರಗಿ ತೀವ್ರ ಗಾಯಗೊಳಿಸಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಕಣ್ಮುಂದೆಯೇ ಹುಲಿ ದಾಳಿ ನಡೆಸಿದ ಘಟನೆಯಿಂದ ಆಘಾತಕ್ಕೊಳಗಾದ ದನಗಾಹಿ ಶಿವಣ್ಣ ಕಿರುಚಿಕೊಂಡು ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸುತ್ತ-ಮುತ್ತಲಿನ ರೈತರ ಕೂಗಾಟ ಕೇಳಿ ಹುಲಿ ಎತ್ತನ್ನು ಬಿಟ್ಟು ಕಾಡಿನತ್ತ ಪರಾರಿಯಾಗಿದೆ.
ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಗಾಯಗೊಂಡಿರುವ ಎತ್ತಿಗೆ ಚಿಕಿತ್ಸೆ ಕೊಡಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ನಿತ್ಯದ ಗೋಳು ಕೇಳೋರ‍್ಯಾರು: ಕೋಣನಹೊಸಹಳ್ಳಿ, ಕೊಳವಿಗೆ, ಬಿಲ್ಲೇನಹೊಸಹಳ್ಳಿ, ಉಡುವೆಪುರ, ಶಂಕರಪುರ ಉದ್ಯಾನವನದಂಚಿನಲ್ಲೇ ಇದ್ದು, ವನ್ಯಜೀವಿಗಳು ಆಗಾಗ ಹೊರಬಂದು ದಾಳಿ ನಡೆಸುವುದು ಈ ಭಾಗದ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಹಲವಾರು ಸಾಕು ಪ್ರಾಣಿಗಳನ್ನು ಕೊಲ್ಲುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಹುಲಿ ಸೆರೆಗೆ ಆಗ್ರಹ: ಕಳೆದ ಎರಡು ವರ್ಷಗಳಿಂದ ಈ ಬಾಗದ ಗ್ರಾಮಗಳಲ್ಲಿ ಆಗಾಗ್ಗೆ ಹುಲಿ ಕಾಣಿಸಿಕೊಂಡು ಜನ, ಜಾನುವಾರುಗಳನ್ನು ಕೊಂದು ಹಾಕುತ್ತಿದ್ದು, ಇದರಿಂದ ಜನರು ಭಯಬೀತರಾಗಿದ್ದಾರೆ. ಹುಲಿ ಸೆರೆಗೆ ಮುಂದಾಗುವಂತೆ ಗ್ರಾ.ಪಂ. ಸದಸ್ಯ ಕೊಳವಿಗೆ ಬಸವಣ್ಣ, ನೇರಳಕುಪ್ಪೆ ಮಹದೇವ್ ಆಗ್ರಹಿಸಿದ್ದಾರೆ.