ಟಿ.ಎನ್. ಸೀತಾರಾಮ್ “ಕಾಫಿ ತೋಟ’ ಸಿನಿಮಾ ಅನೌನ್ಸ್ ಮಾಡಿದ್ದು, ಚಿತ್ರೀಕರಣ ಶುರುಮಾಡಿದ್ದು ಗೊತ್ತೇ ಇದೆ. ಈಗ ಹೊಸ ವಿಷಯ ಏನಪ್ಪಾ ಅಂದ್ರೆ, ಆ ಚಿತ್ರ ಇದೀಗ ಪೂರ್ಣಗೊಂಡಿದ್ದು, ಬಿಡುಗಡೆಯ ತಯಾರಿಯಲ್ಲಿದೆ. ಇತ್ತೀಚೆಗೆ ಸೀತಾರಾಮ್ ತಮ್ಮ ತಂಡವನ್ನು ಕಟ್ಟಿಕೊಂಡು, ತಾವು ಮಾಡಿದ “ಕಾಫಿ’ ರುಚಿ ಬಗ್ಗೆ ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು. ಅದೊಂದು ಸಣ್ಣ ರಸಸಂಜೆ ಕಾರ್ಯಕ್ರಮ ಅಂದರೂ ತಪ್ಪಿಲ್ಲ. ಯಾಕೆಂದರೆ, ಅದು ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮವೂ ಆಗಿತ್ತು. ಹಾಗಾಗಿ, ಅಂದು ಸಂಗೀತ ನಿರ್ದೇಶಕದ್ವಯರಾದ ಅನೂಪ್ ಸೀಳಿನ್ ಮತ್ತು ಮಿದುನ್ ಮುಕುಂದನ್ ಅಂದು ತಾವು ಸಂಯೋಜಿಸಿದ ಹಾಡಿಗೆ ದನಿಯಾಗುವ ಮೂಲಕ ರಂಜಿಸಿದರು. ಅದಷ್ಟೇ ಅಲ್ಲ, ಯೋಗರಾಜ್ ಭಟ್ ಬರೆದ “ಈ ಬದುಕು ಯಾರೋ …’ ಗೀತೆಗೆ ರಾಗ ಸಂಯೋಜಿಸಲು ಆಹ್ವಾನಿಸಿದ್ದ ಯುವ ಸಂಗೀತ ನಿರ್ದೇಶಕರನ್ನು ಅಂದು ವೇದಿಕೆ ಮೇಲೇರಿಸಲಾಗಿತ್ತು. 150 ಮಂದಿ ಯುವ ನಿರ್ದೇಶಕರ ಪೈಕಿ ಅಂತಿಮವಾಗಿ 12 ಮಂದಿಯನ್ನು ಆಯ್ಕೆ ಮಾಡಿದ್ದರು. ಅವರೆಲ್ಲರೂ ತಮ್ಮ ರಾಗಸಂಯೋಜನೆಯಲ್ಲಿ ಮೂಡಿ ಬಂದ ಆ ಗೀತೆಗೆ ಅಂದು ದನಿಯಾದರು. ಆ ಪೈಕಿ ಗೆಲುವು ಕಂಡಿದ್ದು ವಿನಯ್‌ಕುಮಾರ್.
ಇದಕ್ಕೂ ಮೊದಲು, ಪುನೀತ್ ರಾಜಕುಮಾರ್ ಅವರು “ಕಾಫಿ ತೋಟ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭಹಾರೈಸಿದರು. “ವಾರದ ಹಿಂದೆ ಒಂದು ಫೋನ್ ಕಾಲ್ ಬಂತು. ನಾನು ನಂಬರ್ ಸೇವ್ ಮಾಡಿರಲಿಲ್ಲ. ಯಾರೂ ಅಂದೆ. ಆ ಕಡೆಯಿಂದ “ನಾನು ಸೀತಾರಾಮ್’ ಅನ್ನೋ ಧ್ವನಿ ಬಂತು. ತಕ್ಷಣ ನಾನು, ಸರ್ ಹೇಳಿ ಅಂದೆ. ನಮ್ಮ ಚಿತ್ರದ ಆಡಿಯೋ ಸಿಡಿ ನೀವೇ ರಿಲೀಸ್ ಮಾಡಬೇಕು ಅಂದ್ರು. ನಾನು ಆಯ್ತು ಅಂದೆ. ಈಗ ಬಂದು ರಿಲೀಸ್ ಮಾಡಿದ್ದೇನೆ. ಸೀತಾರಾಮ್ ಅವರು ಕರೆದರೆ ಇಂಡಸ್ಟ್ರಿಯಲ್ಲಿ ಯಾರು ತಾನೆ ಬರಲ್ಲ ಹೇಳಿ. “ಕಾಫಿತೋಟ’ ಬಗ್ಗೆ ಕೇಳಿದ್ದೇನೆ. ಒಮ್ಮೆ ಸೆಟ್‌ಗೂ ಹೋಗಿದ್ದೆ. ಈಗ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅವರ ಮಾತುಗಳಿಂದಲೇ ನಾನು ಸಾಕಷ್ಟು ತಿಳಿದುಕೊಂಡಿದ್ದೇನೆ. ಅವರ ಚಿತ್ರದ ಸಿಡಿ ಬಿಡುಗಡೆಗೆ ನಾನು ಬಂದಿದ್ದು ಪುಣ್ಯ’ ಎಂದರು ಪುನೀತ್.
ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ವೃತ್ತಿಜೀವನದಲ್ಲಿ ಇದು ವಿಶೇಷ ಸಿನಿಮಾವಂತೆ. ಜೋಗಿ ಅವರ “ಹಾಡಾಡಿಕೊಂಡು, ಓಡಾಡಿಕೊಂಡು ಮಾಡು ಇಲ್ಲ ಮಡಿ ಇದೇ ಲೈಫು …’ ಹಾಡುವ ಮೂಲಕ ಖುಷಿಗೊಂಡರು. ಇನ್ನು ಜೋಗಿ ಅವರು, “ನನ್ನ ಗೀತೆಗೆ ಅನೂಪ್ ನ್ಯಾಯ ಸಲ್ಲಿಸಿದ್ದಾರೆ. ಸಂಜೆ 4 ಕ್ಕೆ ಹೋಗಿ, ರಾತ್ರಿ 1ರ ತನಕ ಅನೂಪ್ ಮನೆಯಲ್ಲಿ ಕುಳಿತು ಗೀತೆ ಬರೆದಿದ್ದಾಗಿ’ ಹೇಳಿಕೊಂಡರು. ಅಂದು ಸೀತಾರಾಮ್ ಎಂದಿಗಿಂತ ಕೊಂಚ ಜಾಸ್ತಿಯೇ ಲವಲವಿಕೆಯಿಂದ ಓಡಾಡಿಕೊಂಡಿದ್ದರು. ಎಲ್ಲರೂ ಮಾತು ಮುಗಿಸಿದ ಬಳಿಕ ಕ್ಲೈಮ್ಯಾಕ್ಸ್‌ಗೆ ಬಂದದ್ದು ಸೀತಾರಾಮ್. “ಇಂದು ಹೊಸಬರ ಜತೆ ಹಳೆ ಕಾಲದ ನಾನು ಓಡಲು ನಿಂತಿರೋದು ವಿಧಿಯ ವಿಪರ್ಯಾಸ ಅಂದುಕೊಂಡಿದ್ದೇನೆ. ಏನಾದರೂ ಮಾಡಬೇಕು ಅನಿಸಿತ್ತು. ಆದರೆ, ಹಣ ಇರಲಿಲ್ಲ. ಸುಮ್ಮನಿದ್ದೆ. ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದೆ. ಹಣ ಹಾಕೋಕೆ ನೂರಾರು ಮಂದಿ ಬಂದರು. ಆದರೆ, ಕ್ರೌಡ್‌ಫಂಡಿಂಗ್ ಆಗೋದು ಬೇಡ ಅಂತ ಗೆಳೆಯ ರಾಮಚಂದ್ರ ಅವರು ಒಂದಷ್ಟು ಮಂದಿ ಜತೆ ಚರ್ಚೆ ನಡೆಸಿದರು. ಈಗ 23 ಜನ ನಿರ್ಮಾಪಕ ಗೆಳೆಯರು, ಅದರಲ್ಲೂ ವೈದ್ಯರೇ ಹೆಚ್ಚು ಹಣ ಹಾಕಿದ್ದರಿಂದ ನಾನು “ಕಾಫಿತೋಟ’ ಮಾಡಿದ್ದೇನೆ. ಹೊಸ ತರಹ ಕಥೆ ಇದು. ತ್ರಿಕೋನ ಪ್ರೇಮಕಥೆಯ ಹಿನ್ನೆಲೆಯಲ್ಲಿ ನಡೆಯೋ ಕಥೆಯಲ್ಲಿ ಸಂದೇಶವಾಗಲಿ, ಸಾಮಾಜಿಕ ಕಳಕಳಿಯಾಗಲಿ ಇಲ್ಲ. ಆದರೆ, ಆ ರೀತಿಯ ಯೋಚನೆ ಕಥೆಯಲ್ಲಿ ಅಡಗಿದೆ. ಇನ್ನು, ಬೆನ್ನೆಲುಬಾಗಿ ನಿಂತವರು ಬಹಳಷ್ಟು ಮಂದಿ ಇದ್ದಾರೆ. ಯೋಗರಾಜ್ ಭಟ್ ಜೋಗಿ, ಮನೋಜ ಗಲಗಲಿ, ಛಾಯಾಗ್ರಾಹಕ ಅಶೋಕ್ ಕಶ್ಯಪ್, ಚಂದನ್ ಶಂಕರ್, ಮಗ ಸತ್ಯಜಿತ್ ಮುಂತಾದವರ ಉತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ರಘು ಮುಖರ್ಜಿ, ರಾಹುಲ್, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ಸುಂದರ್‌ರಾಜ್, ಅಪೇಕ್ಷಾ ಪುರೋಹಿತ್ ಇತರರು ನಟಿಸಿದ್ದಾರೆ’ ಎಂದು ವಿವರ ಕೊಡುವ ಹೊತ್ತಿಗೆ ಸಮಯ ಮೀರಿತ್ತು. ಆಡಿಯೋ ಸಿಡಿ ರಿಲೀಸ್ ಕಾರ್ಯಕ್ರಮಕ್ಕೂ ತೆರೆಬಿತ್ತು.