Advertisement

ತೊಡಿಕಾನ: 5ವರ್ಷ ಸಂದರೂ ಉದ್ಘಾಟನೆಗೊಳ್ಳದ ಅಂಗನವಾಡಿ

10:47 PM Jan 01, 2020 | Team Udayavani |

ಅರಂತೋಡು: ತೊಡಿಕಾನ ಗ್ರಾಮದ ಶಾಲೆ ಬಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಐದು ವರ್ಷಗಳು ಸಂದರೂ ಇನ್ನೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. 2015ರ ಜನವರಿಯಲ್ಲಿ ನೂತನ ಅಂಗವಾಡಿ ಕಟ್ಟಡಕ್ಕೆ ಹಳೆಯ ಅಂಗನವಾಡಿ ಕಟ್ಟಡದ ಪಕ್ಕದಲ್ಲಿಯೇ ಭೂಮಿ ಪೂಜೆ ನೆರವೇರಿಸಿ 4.18 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಬಳಿಕ ಅನೇಕ ಬಾರಿ ಕಾಮಗಾರಿ ಕುಂಟುತ್ತಾ ಸಾಗಿ ಅನುದಾನ ಕೊರತೆಯಿಂದ ನಾಲ್ಕು ಕಾಲು ವರ್ಷ ಕಾಮಗಾರಿ ಸ್ಥಗಿತಗೊಂಡಿತ್ತು.

Advertisement

ಆ ವೇಳೆ ಸ್ಲ್ಯಾಬ್‌ ಕೆಲಸ ಪೂರ್ಣ ಗೊಂಡು ಗೋಡೆಯ ಗಾರೆ ಮುಗಿ ಸಲಾಗಿತ್ತು. ಶೌಚಾಲಯದ ಕೆಲಸ, ಅಡುಗೆ ಕೊಠಡಿಯ ಕೆಲಸ, ಕಿಟಕಿ, ಬಾಗಿಲು, ವೈರಿಂಗ್‌ ಕೆಲಸ, ಆರ್‌.ಸಿ.ಸಿ. ಮೇಲ್ಭಾಗ ಬದಿಗಳನ್ನು ಕಟ್ಟಿ ಮಳೆ ನೀರು ಹೋಗಲು ಪೈಪ್‌ನ ವ್ಯವಸ್ಥೆ ಮಾಡಿರಲಿಲ್ಲ. ಮಳೆ ಬರುವಾಗ ನೀರು ಒಳಗೆಲ್ಲ ಬೀಳುತ್ತಿತ್ತು. ಒಳಗಿನ ಕೆಲವು ಭಾಗ ಟೈಲ್ಸ್‌ ಹಾಕಲು ಬಾಕಿ ಇತ್ತು. ಇತರ ಅಲ್ಪ ಪ್ರಮಾಣದ ಕೆಲಸವೂ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ಸಿಡಿಒ ಸರಸ್ವತಿ, ಅಂಗನವಾಡಿ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತ ಗೊಂಡಿರುವ ಕುರಿತು ಶಾಸಕ ಎಸ್‌. ಅಂಗಾರ ಅವರಿಗೆ ಮನವರಿಕೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಒದಗಿಸಲು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಶಾಸಕ, ಅನುದಾನ ಒದಗಿಸುವ ಭರವಸೆ ನೀಡಿದ್ದರು. ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇರೊಬ್ಬ ಗುತ್ತಿಗೆ ದಾರರಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2ನೇ ಗುತ್ತಿಗೆದಾರರು ಕಾಮಗಾರಿ ಪೂರ್ಣ ಗೊಳಿಸಿ 7 ತಿಂಗ ಳಾದರೂ ಉಪಯೋಗಕ್ಕೆ ದೊರೆತಿಲ್ಲ.

ನೀರಿನ ವ್ಯವಸ್ಥೆ ಇಲ್ಲ
ಹಳೆಯ ಅಂಗವಾಡಿಯಲ್ಲೇ ಮಕ್ಕಳು ಕಾಲ ಕಳೆಯುವಂತಾಗಿದೆ. ಅಂಗನವಾಡಿಗೆ ಸ್ವಂತ ನೀರಿನ ವ್ಯವಸ್ಥೆ ಇಲ್ಲ. ಪಕ್ಕದ ಪ್ರಾಥಮಿಕ ಶಾಲೆಯ ನೀರನ್ನು ಅಂಗನವಾಡಿಗೆ ಉಪಯೋಗಿಸಿಕೊಳ್ಳಲಾಗುತ್ತಿದ್ದು, ಪ್ರಾಥಮಿಕ ಶಾಲೆಗೆ ಬರುವ ವಿದ್ಯುತ್‌ ಬಿಲ್‌ನ ಮೂರನೇ ಒಂದು ಭಾಗವನ್ನು ಅಂಗನವಾಡಿ ಮಕ್ಕಳ ಹೆತ್ತವರಿಂದ ಸಂಗ್ರಹಿಸಿ ನೀಡಲಾಗುತ್ತಿದೆ.

ಶಾಸಕರಿಂದ ಭರವಸೆ
ತೊಡಿಕಾನ ಅಂಗನವಾಡಿ ಕಾಮಗಾರಿ ಪೂರ್ಣಗೊಂಡಿದ್ದು, ಹೆಚ್ಚುವರಿ ಅನುದಾನವನ್ನು ಶಾಸಕರು ತನ್ನ ನಿಧಿಯಿಂದ ಒದಗಿಸುವ ಭರವಸೆ ನೀಡಿದ್ದಾರೆ. ಅನುದಾನ ಬಿಡುಗಡೆಯಾದ ತತ್‌ಕ್ಷಣ ಅಂಗನಾಡಿ ಉದ್ಘಾಟನೆ ನಡೆಯಲಿದೆ.
– ಶಿವಾನಂದ ಕುಕ್ಕುಂಬಳ , ಉಪಾಧ್ಯಕ್ಷ, ಅರಂತೋಡು ಗ್ರಾ.ಪಂ.

ತೇಜೇಶ್ವರ್‌ ಕುಂದಲ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next