Advertisement

ಪುತ್ರರಿಗೆ ಟಿಕೆಟ್‌: ಪಟ್ಟಿ ಕೊಡಿ

06:25 AM Nov 29, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾರೆಲ್ಲ ನಾಯಕರು ತಮ್ಮ ಮಕ್ಕಳಿಗೆ, ಸಂಬಂಧಿಕರಿಗೆ ಟಿಕೆಟ್‌ ಕೇಳಿದ್ದಾರೆ ಎಂಬ ಪಟ್ಟಿಯನ್ನು ಪ್ರತ್ಯೇಕವಾಗಿಯೇ ರೂಪಿಸಿ ನೀಡುವಂತೆ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ರಾಹುಲ್‌ ಗಾಂಧಿ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

Advertisement

ನಿರೀಕ್ಷೆಯಂತೆಯೇ ಮುಂದಿನ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ ಮತ್ತು ಸಂಬಂಧಿಕರಿಗೆ ಟಿಕೆಟ್‌ ಕೊಡಿಸುವ ಸಂಬಂಧ ನಾಯಕರು ಪ್ರಭಾವ ಬೆಳೆಸಲು ಶುರು ಮಾಡಿದ್ದು, ರಾಹುಲ್‌ ಗಾಂಧಿ ಅವರ ಈ ಸೂಚನೆ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿಸಿದೆ ಎಂದೂ ಹೇಳಲಾಗುತ್ತಿದೆ. ಈಗಾಗಲೇ ಟಿಕೆಟ್‌ಗಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಯಾರಿಗೆ ಕೊಡುವುದು ಮತ್ತು ಬಿಡು ವುದು ಎಂಬ ತಲೆನೋವು ಹೈಕಮಾಂಡ್‌ ಮಟ್ಟದಲ್ಲಿದ್ದು, ಹೀಗಾಗಿಯೇ ಟಿಕೆಟ್‌ ಕೇಳಿರುವ ದೊಡ್ಡವರ ಪಟ್ಟಿ
ಯನ್ನು ಪ್ರತ್ಯೇಕವಾಗಿಡಿ ಎಂದು ರಾಹುಲ್‌ ಸೂಚಿಸಿದ್ದಾರೆ ಎನ್ನಲಾಗಿದೆ.

ಸದ್ಯ ಸಚಿವರು, ಶಾಸಕರು ಮತ್ತು ಮಾಜಿ ಶಾಸಕರು ಸಹಿತ 40ರಿಂದ 45 ಮುಖಂಡರು ತಮ್ಮ ಮಕ್ಕಳು ಹಾಗೂ ಸಂಬಂಧಿಕರಿಗೆ ಟಿಕೆಟ್‌ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಇವರಲ್ಲಿ ಕೆಲವರು ಈಗಾಗಲೇ ತಾವು ಸ್ಪರ್ಧಿಸಬೇಕು ಅಂದುಕೊಂಡಿರುವ ಕ್ಷೇತ್ರಗಳಲ್ಲಿ ಚುನಾವಣ ತಯಾರಿಯನ್ನೂ ನಡೆಸುತ್ತಿದ್ದಾರೆ.

ದೊಡ್ಡವರ ಮಕ್ಕಳಿಗೆ ಟಿಕೆಟ್‌ ಕೊಟ್ಟರೆ, ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರು, ಟಿಕೆಟ್‌ ಆಕಾಂಕ್ಷಿಗಳು ಮುನಿಸಿಕೊಂಡು, ಪಕ್ಷದ ಚಟುವಟಿಕೆ ಗಳಿಂದ ದೂರವಾಗುವ ಸಾಧ್ಯತೆಗಳೇ ಹೆಚ್ಚಾಗಿವೆ. ಹೀಗಾಗಿಯೇ ದೊಡ್ಡವರ ಮಕ್ಕಳ ಪಟ್ಟಿಯನ್ನು ಪ್ರತ್ಯೇಕವಾಗಿಯೇ ಕೊಡಿ ಎಂದು ರಾಹುಲ್‌ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಿಲ್ಲಿಗೆ ಬರಬೇಡಿ: ಚುನಾವಣೆ ಹತ್ತಿರವಾಗುತ್ತಿರು ವಂತೆ ಪ್ರಭಾವಿ ಮುಖಂಡರು ತಳ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಕೆಲಸ ಮಾಡದಿದ್ದರೂ ಹೈಕಮಾಂಡ್‌ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಟಿಕೆಟ್‌ ಪಡೆಯುವ ಸಂಪ್ರದಾಯಕ್ಕೆ ಬ್ರೇಕ್‌ ಹಾಕಲು ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಟಿಕೆಟ್‌ಗಾಗಿ ದಿಲ್ಲಿಗೆ ಬರುವ ಬದಲು ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ಕೆಲಸ ಮಾಡುವಂತೆ ದಿಲ್ಲಿಗೆ ತಿರುಗಾಡುವ ನಾಯಕರಿಗೆ ಸೂಚನೆ ನೀಡಿದ್ದಾರೆ 
ಎಂದು ಹೇಳಲಾಗುತ್ತಿದೆ.

Advertisement

ಕ್ಷೇತ್ರದ ಜನತೆಯ ಅಭಿಪ್ರಾಯದಂತೆ ಅಭ್ಯರ್ಥಿಗಳ ಆಯ್ಕೆ ಮಾಡಲು ಕೈ ನಾಯಕರು ನಿರ್ಧರಿಸಿದ್ದು, ಅಭ್ಯರ್ಥಿ ಗಳ ಆಯ್ಕೆಗೆ ನಡೆಸುತ್ತಿರುವ ಸಮೀಕ್ಷೆಗಳಲ್ಲಿ ಜನರ ಒಲವು ಯಾರ ಪರವಾಗಿದೆ ಎನ್ನುವುದನ್ನು ಪರಿಗಣಿಸಿ ಟಿಕೆಟ್‌ ನೀಡಲು ತೀರ್ಮಾಸಿದ್ದಾರೆ. ಹೀಗಾಗಿ ಯಾರು ಏನಾದರೂ ಮಾಡಿಕೊಳ್ಳಲಿ ಹೈಕಮಾಂಡ್‌ನಿಂದ ಟಿಕೆಟ್‌ ಪಡೆಯುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿರುವ ನಾಯಕರಿಗೆ ರಾಹುಲ್‌ ಸಂದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ  ಕೇಳಿ ಬರುತ್ತಿವೆ.

ಆಕಾಂಕ್ಷಿಗಳ ಪಟ್ಟಿ
– ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ
– ಎಚ್‌.ಸಿ.ಮಹದೇವಪ್ಪ ಪುತ್ರ  ಬೋಸ್‌
– ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ
– ಮೋಟಮ್ಮ ಪುತ್ರಿ ನಯನಾ
– ಕೆ.ಎಚ್‌.ಮುನಿಯಪ್ಪ ಪುತ್ರಿ ರೂಪಾ 
– ವೀರಪ್ಪ ಮೊಲಿ ಪುತ್ರ ಹರ್ಷ ಮೊಲಿ
– ಟಿ.ಬಿ.ಜಯಚಂದ್ರ ಪುತ್ರ ಸಂತೋಷ್‌
– ಎ.ಮಂಜು ಪುತ್ರ ಡಾ| ಮಂಥರ್‌ ಗೌಡ
– ಶಾಸಕ ಕೆ.ಎನ್‌. ರಾಜಣ್ಣ ಪುತ್ರ ರಾಜೇಂದ್ರ
– ವಿನಯ್‌ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ
– ಮಾರ್ಗರೆಟ್‌ ಆಳ್ವ ಪುತ್ರ ನಿವೇದಿತ್‌ 
– ಎಚ್‌.ಸಿ. ಶ್ರೀಕಂಠಯ್ಯ ಮೊಮ್ಮಗ ದೀಪು
– ಕವಿಕಾ ಮಾಜಿ ಅಧ್ಯಕ್ಷ ವಿಶಾಲೇಶ್ವರಿ ಪುತ್ರ ಎಸ್‌.ಸಿ.ಸುಧೀಂದ್ರ

Advertisement

Udayavani is now on Telegram. Click here to join our channel and stay updated with the latest news.

Next