ಮುಂಬಯಿ: ಟಿಕೆಟ್ ಇಲ್ಲದೆ ಪ್ರಯಾಣ ನಡೆಸುವ ಪ್ರಯಾಣಿಕರ ವಿರುದ್ಧ ಕಾರ್ಯಾಚರಣೆ ನಡೆಸಿದ ಪಶ್ಚಿಮ ರೈಲ್ವೇ ಇಲಾಖೆಯು ಉಪನಗರಗಳ ಲೋಕಲ್ ರೈಲಿನ ಪ್ರಯಾಣಿಕರಿಂದ ಸುಮಾರು 14.64 ಕೋ. ರೂ.ಗಳಷ್ಟು ದಂಡ ವಸೂಲಿ ಮಾಡಿದೆ.
ಯಾವುದೇ ಅನುಮತಿ ಇಲ್ಲದೆ ವಸ್ತು ಸಾಗಾಟ, ಟಿಕೆಟ್ ರಹಿತ ಪ್ರಯಾಣಿಸುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಇಲ್ಲಿಯ ತನಕ ಸುಮಾರು 2.86ಲಕ್ಷ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇದಲ್ಲದೆ, 273 ಭಿಕ್ಷುಕರು ಹಾಗೂ 467 ಅನಧಿಕೃತ ಬೀದಿ ವ್ಯಾಪಾರಿಗಳಿಗೆ ರೈಲ್ವೇ ಪರಿಸರದಿಂದ ಹೊರಗೆ ಹಾಕುವುದರ ಜತೆಗೆ ದಂಡ ವಸೂಲಿ ಮಾಡಲಾಗಿದೆ ಮತ್ತು 175 ವ್ಯಕ್ತಿಗಳನ್ನು ಜೈಲಿಗೆ ಕಳುಹಿಸಲಾಗಿದೆ.
ಮುಖ್ಯ ಜನಸಂಪರ್ಕ ಅಧಿಕಾರಿ ರವೀಂದ್ರ ಭಾಕರ್ ಅವರ ಪ್ರಕಾರ, 2019ರ ಎಪ್ರಿಲ್ ವೇಳೆ ದಲಾಲಿ ಹಾಗೂ ಅಸಾಮಾಜಿಕ ತತ್ವಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪಶ್ಚಿಮ ರೈಲ್ವೇ ಇಲಾಖೆಯು 210 ಮಂದಿಗಳನ್ನು ತಪಾಸಣೆ ನಡೆಸಿದೆ.ಎಪ್ರಿಲ್‌ನಲ್ಲಿ 191 ವ್ಯಕ್ತಿಗಳನ್ನು ಬಂಧಿಸಲಾಗಿದೆ ಹಾಗೂ ರೈಲ್ವೇ ನಿಯಮದ ವಿವಿಧ ಕಾಯಿದೆ ಅಡಿಯಲ್ಲಿ ಹಲವು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. 2019ರ ಎಪ್ರಿಲ್‌ನಲ್ಲಿ ಒಂದು ಮೀಸಲಾತಿ ಟಿಕೆಟ್ ಹಸ್ತಾಂತರಿಸಿದ ಪ್ರಕರಣ ನಡೆದಿದ್ದು, ಕಾರ್ಯಾಚರಣೆ ನಡೆಸಲಾಯಿತು.
12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 29 ಮಕ್ಕಳು ಉಪನಗರ ಲೋಕಲ್‌ನ ಮಹಿಳಾ ಬೋಗಿಯಲ್ಲಿ ಸಂಚರಿಸುವುದು ಕಂಡುಬಂದಿದ್ದು, ಅವರನ್ನು ಸುರಕ್ಷಿತವಾಗಿ ಬೇರೆ ಬೋಗಿಗಳಲ್ಲಿ ಕಳುಹಿಸುವ ವ್ಯವಸ್ಥೆಗಳನ್ನು ಮಾಡಲಾಗಿದೆ.