Advertisement

ಟಿಕೆಟ್‌ ಹಂಚಿಕೆ: ಕಾಂಗ್ರೆಸ್‌ vs ಬಿಜೆಪಿ

10:04 AM Mar 30, 2019 | mahesh |

ಲೋಕಸಭೆ ಚುನಾವಣೆ ಕಣ ಕಾದಿದೆ. ಅಭ್ಯರ್ಥಿಗಳೂ ನಾಮಪತ್ರ ಸಲ್ಲಿಕೆ ನಡೆಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ಜತೆಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಭಾನುವಾರ (ಮಾ.25)ದರವರೆಗೆ ಬಿಜೆಪಿ 296 ಮಂದಿ ಹುರಿಯಾಳುಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‌ 218 ಮಂದಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

Advertisement

ಬಿಜೆಪಿಯ ಮೊದಲ ಪಟ್ಟಿಯಲ್ಲಿ 150 ಮಂದಿಯನ್ನು ಮತ್ತೆ ಕಣಕ್ಕೆ ಇಳಿಸಿದೆ. ಇನ್ನುಳಿದ 146 ಮಂದಿ ಹೊಸಬರೇ ಆಗಿದ್ದಾರೆ. ಎಲ್ಲಿಯ ವರೆಗೆ ಎಂದರೆ ಬಿಜೆಪಿ ಇದುವರೆಗೆ ಸ್ಪರ್ಧೆ ಮಾಡದ ರಾಜ್ಯಗಳಲ್ಲಿಯೂ ಸೇರಿಕೊಂಡು. ಆ ಸಂಖ್ಯೆಯೇ 34. ಬಿಹಾರದ ಲೆಕ್ಕಾಚಾರವನ್ನು ತೆಗೆದುಕೊಂಡರೆ ಐದು ಸ್ಥಾನಗಳನ್ನು ಜೆಡಿಯುಗೆ ಬಿಟ್ಟುಕೊಡಲಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರಗಳಲ್ಲಿ ಹೆಚ್ಚಿನ ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಈ ಪೈಕಿ ಬಿಹಾರದಲ್ಲಿ ಹಿಂದಿನ ಚುನಾವಣೆ ವೇಳೆ ಉತ್ತಮ ಸಾಧನೆಯನ್ನು ಪಕ್ಷ ಮಾಡಿರಲಿಲ್ಲ. ಅಲ್ಲಿ ಕೆಲವರನ್ನು ಬದಲು ಮಾಡಲಾಗಿದೆ.

ಇನ್ನು ಕಾಂಗ್ರೆಸ್‌ ವಿಚಾರಕ್ಕೆ ಬಂದರೆ ಹೆಚ್ಚಿನ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಿದೆ. ಇದುವರೆಗೆ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿ ಪೈಕಿ 150 ಮಂದಿ ಹೊಸಬರೇ ಆಗಿದ್ದಾರೆ (ಉದಾಹರಣೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಮಿಥುನ್‌ ರೈ). ಇನ್ನು ಎಂಟು ಮಂದಿ ನಾಯಕರಾದ ಕೆ.ವಿ.ಥಾಮಸ್‌, ಕೆ.ಸಿ.ವೇಣುಗೋಪಾಲ್‌, ಪಶ್ಚಿಮ ಬಂಗಾಳದಲ್ಲಿ ಮೌಸಮ್‌ ನೂರ್‌ ಸೇರಿದಂತೆ ಎಂಟು ಮಂದಿ ಸ್ಪರ್ಧಿಸುತ್ತಿಲ್ಲ. ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ತನ್ನ ಸಂಘಟನೆಗಳಲ್ಲಿಯೂ ಆಮೂಲಾಗ್ರ ಬದಲು ಮಾಡಿವೆ.

ಮುಸ್ಲಿಂ ಅಭ್ಯರ್ಥಿಗಳು
ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ 32 ಮಂದಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್‌ ನೀಡಿದೆ (ಒಟ್ಟು ಅಭ್ಯರ್ಥಿಗಳ ಪೈಕಿ ಶೇ. 6.9). ಬಿಜೆಪಿಯ ಏಳು ಮಂದಿಗೆ ಅಂದರೆ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.1.2ರಷ್ಟು ಮಂದಿಗೆ ಟಿಕೆಟ್‌ ನೀಡಿತ್ತು. ಇದುವರೆಗೆ ಪ್ರಕಟಗೊಂಡಿರುವ ಪಟ್ಟಿ (ಮಾ.25ರ ವರೆಗೆ) ಪ್ರಕಾರ ಉತ್ತರ ಪ್ರದೇಶದಿಂದ 8, ಆಂಧ್ರಪ್ರದೇಶ 4 ಮತ್ತು ಪಶ್ಚಿಮ ಬಂಗಾಳದ 3 ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಆರು ಮಂದಿಗೆ ಟಿಕೆಟ್‌ ನೀಡಿದೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರದಲ್ಲಿಯೇ ಸಮುದಾಯದ ಮೂವರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ಆಂಧ್ರಪ್ರದೇಶ, ಲಕ್ಷದ್ವೀಪ, ಪಶ್ಚಿಮ ಬಂಗಾಳಗಳಲ್ಲಿ ತಲಾ ಒಬ್ಬರಿಗೆ ಟಿಕೆಟ್‌ ನೀಡಿದೆ.

Advertisement

ಎರಡು ಪಕ್ಷಗಳ ನಡುವಿನ ಅಭ್ಯರ್ಥಿಗಳ ಹೋಲಿಕೆ ಮಾಡಿದರೆ ಕಾಂಗ್ರೆಸ್‌ನ ಅಭ್ಯರ್ಥಿಗಳು ರಾಜಕೀಯವಾಗಿ ಹೆಚ್ಚು ಅನುಭವ ಉಳ್ಳವರು. ಏಳಕ್ಕೂ ಹೆಚ್ಚು ಮಂದಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದವರೇ ಆಗಿದ್ದಾರೆ.

ಮಹಿಳೆಯರಿಗೆ
ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಪ್ರಾತನಿಧ್ಯ ಕಲ್ಪಿಸಿಲ್ಲ ಎನ್ನುವುದಕ್ಕೆ ಅಂಕಿ-ಅಂಶಗಳೇ ಪುಷ್ಟೀಕರಿಸುತ್ತವೆ. ಕಾಂಗ್ರೆಸ್‌ 60 (ಒಟ್ಟು ಅಭ್ಯರ್ಥಿಗಳ ಪೈಕಿ ಶೇ.12.9), ಬಿಜೆಪಿ 38 ಮಂದಿ ಮಹಿಳೆಯರಿಗೆ (ಒಟ್ಟು ಅಭ್ಯರ್ಥಿಗಳ ಪೈಕಿ ಶೇ. 8.9) ಟಿಕೆಟ್‌ ಅನ್ನು 2014ರ ಚುನಾವಣೆಯಲ್ಲಿ ನೀಡಿತ್ತು. ಇದುವರೆಗೆ ಪ್ರಕಟಿಸಲಾದ ಪಟ್ಟಿಯ ಪ್ರಕಾರ (ಮಾ.25ರ ವರೆಗೆ) ಬಿಜೆಪಿ 36 ಮಂದಿ ಮಹಿಳಾ ನಾಯಕರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ 26 ಮಂದಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಇಂದು ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿಗೆ ಜೋರು ಪೆಟ್ಟು ಬಿದ್ದಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಈ ಬದಲಾವಣೆಯನ್ನು ಜನರು ಸ್ವಾಗತಿಸುತ್ತಿದ್ದಾರೆ.
ಅರುಣ್‌ ಜೇಟ್ಲಿ

ಅದೆಲ್ಲ ಸರಿ ಸರ್‌. ಆದರೆ ಜಮ್ಮು ಕಾಶ್ಮೀರದಲ್ಲಿ ಎಲ್ಲವೂ ಸರಿ ಇದ್ದಿದ್ದರೆ, ಅದೇಕೆ ಮೋದಿ ಸಾಹೇಬರು ಬಂದ ಮೇಲೆಯೂ ಸರಿಯಾದ ಸಮಯಕ್ಕೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ?
ಓಮರ್‌ ಅಬ್ದುಲ್ಲಾ

1,219 ಅಭ್ಯರ್ಥಿಗಳು ಈ ಬಾರಿ ತಮಿಳುನಾಡಲ್ಲಿ ಲೋಕಸಭಾ ಚುನಾವಣೆಯಲ್ಲಿಮ ಸ್ಪರ್ಧಿಗಳ ಸಂಖ್ಯೆ ಇದು.

ಈ ಬಾರಿ
ತೇಜಸ್ವಿ ಯಾದವ್‌
ಲಾಲೂ ಪ್ರಸಾದ್‌ ಯಾದವ್‌ರ ಮಗ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಈ ಬಾರಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಕಾಂಗ್ರೆಸ್‌ ಉತ್ತರಪ್ರದೇಶದಲ್ಲಿ 40 ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಸಿದ್ಧಪಡಿಸಿದ್ದು ಇದರಲ್ಲಿ ಖರ್ಗೆ, ರಾಹುಲ್‌, ಪ್ರಿಯಾಂಕಾ ಸೇರಿದಂತೆ 39 ಜನ ಕಾಂಗ್ರೆಸ್ಸಿಗರೇ ಇದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಮಾತ್ರ ಕಾಂಗ್ರೆಸ್ಸೇತರರಾಗಿದ್ದೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಇದೇನೇ ಇದ್ದರೂ ಅಪ್ಪ ಲಾಲೂ ಪ್ರಸಾದ್‌ ಯಾದವ್‌ ಜೈಲುಪಾಲಾದಾಗಿನಿಂದ ತೇಜಸ್ವಿ ಯಾದವ್‌ ಓಟಕ್ಕೆ ಬ್ರೇಕ್‌ ಬಿದ್ದಿರುವುದಂತೂ ಸತ್ಯ. ಈಗ ಅಣ್ಣ ತೇಜ್‌ಪ್ರತಾಪ್‌ ಯಾದವ್‌ ಕೂಡ ನಿರಂತರವಾಗಿ ತೇಜಸ್ವಿಗೆ ತೊಂದರೆ ಒಡ್ಡುತ್ತಲೇ ಇದ್ದಾನೆ. ಹಿರಿಯನಾದ ತನ್ನನ್ನು ಕಡೆಗಣಿಸಿ, ಕಿರಿಯ ತೇಜಸ್ವಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲಾಗಿರುವುದನ್ನು ತೇಜ್‌ಪ್ರತಾಪ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುರುವಾರವಷ್ಟೇ ತೇಜ್‌ ಪ್ರತಾಪ್‌ ಪಕ್ಷದ ವಿದ್ಯಾರ್ಥಿ ಗುಂಪಿನ ನೇತೃತ್ವದಿಂದ ಹಿಂದೆ ಸರಿದಿರುವುದರಿಂದ, ಈಗ ಅಣ್ಣನನ್ನು ಓಲೈಸುವಲ್ಲಿ ತೇಜಸ್ವಿ ಬ್ಯುಸಿ.

ವೈರಲ್‌ ಫೀವರ್
ರಾಹುಲ್‌-ಶತ್ರುಘ್ನ ಸಿನ್ಹಾ ಭೇಟಿ
ಬಿಜೆಪಿಯ ಹಿರಿಯ ನಾಯಕ ಶತುಘ್ನ ಸಿನ್ಹಾ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದೆ. ಅಸಮಾಧಾನ ಗೊಂಡಿರುವ ಸಿನ್ಹಾ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಗುರುವಾರ ಕಾಂಗ್ರೆಸ್‌ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದ ಚಿತ್ರವನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದೊಂದಿದೆ ಕೆಲವು ಸಾಲುಗಳನ್ನು ಬರೆದಿರುವ ಅವರು ಬಿಜೆಪಿ ವಿರುದ್ಧ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ. ನಾನು ಈಗಾಗಲೇ ಬಿಜೆಪಿಯಿಂದ ಹೊರ ಬರುತ್ತಿದ್ದು, ಗೆಳೆಯ ಲಾಲು ಪ್ರಸಾದ್‌ ಯಾದವ್‌ ಅವರ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ. ಈ ವೇಳೆ ನೆಹರೂ ಕುಟುಂಬದ ಪರವಾಗಿ ಮಾತನಾಡಿದ್ದು, ದೇಶ ಕಟ್ಟಿದ ಕುಟುಂಬ ಎನ್ನುವ ಮೂಲಕ ಬಿಜೆಪಿಗೆ ನೇರವಾಗಿ ಟಾಂಗ್‌ ನೀಡಿದ್ದಾರೆ.

ನವಮುಖ
ನಾಯ್ಡು ಪುತ್ರಗೆ ಶರ್ಮಿಳಾ ಸವಾಲ್‌
ಆಂಧ್ರಪ್ರದೇಶದ ಹೈಪ್ರೊಫೈಲ್‌ ವಿಧಾನಸಭಾ ಕ್ಷೇತ್ರ ಮಂಗಳಗಿರಿ. ಮಾ.29ರಿಂದ ವೈ.ಎಸ್‌.ಆರ್‌.ಕಾಂಗ್ರೆಸ್‌ ಪಕ್ಷದ ನಾಯಕಿ, ಜಗನ್ಮೋಹನ ರೆಡ್ಡಿ ಸಹೋದರಿ ವೈ.ಎಸ್‌.ಶರ್ಮಿಳಾ ಪ್ರಚಾರ ಶುರು ಮಾಡಲಿದ್ದಾರೆ. ತೆಲಂಗಾಣ ರಾಜ್ಯವಾಗುವುದಕ್ಕೆ ಮೊದಲು ಇದ್ದ ಸಂಯುಕ್ತ ಆಂಧ್ರಪ್ರದೇಶದಲ್ಲಿ ವೈ.ಎಸ್‌.ಆರ್‌.ಕಾಂಗ್ರೆಸ್‌ ಪಕ್ಷವನ್ನು 16 ತಿಂಗಳ ಕಾಲ ಮುನ್ನಡೆಸಿದ ಹೆಗ್ಗಳಿಕೆ ಅವರದ್ದು. ಅಕ್ರಮ ಆಸ್ತಿ ಪ್ರಕರಣದಲ್ಲಿ ಜಗನ್ಮೋಹನ ರೆಡ್ಡಿ ಹದಿನಾರು ತಿಂಗಳ ಕಾಲ ಜೈಲಲ್ಲಿದ್ದ ಸಮಯವದು. 2012ರ ಉಪ ಚುನಾವಣೆಯಲ್ಲಿ 18 ಸ್ಥಾನಗಳ ಪೈಕಿ 16ನ್ನು ಗೆಲ್ಲಿಸಿದ್ದ ಗಟ್ಟಿಗಿತ್ತಿ ಆಕೆ. ಜತೆಗೆ ಒಂದು ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು ಕೂಡ.

ಮಂಗಳಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಡಿಪಿ ನಾಯಕ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್‌. ಸದ್ಯ ಅವರು ಆಂಧ್ರಪ್ರದೇಶ ವಿಧಾನಪರಿಷತ್‌ನ ಸದಸ್ಯರು. ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. “ಮಾ.29ಕ್ಕೆ ಪ್ರಚಾರ ಶುರು ಮಾಡಲಿದ್ದೇನೆ. ಜತೆಗೆ ತಾಯಿ ವಿಜಯಮ್ಮ ಇರಲಿದ್ದಾರೆ. ಆದರೆ ಅವರ ಪ್ರಚಾರದ ಶೈಲಿ ಬೇರೆ ರೀತಿಯದ್ದಾಗಿರಲಿದೆ’ ಎಂದು ಹೇಳಿದ್ದಾರೆ ವೈ.ಎಸ್‌.ಶರ್ಮಿಳಾ. 2012ರ ಅ.18ರಿಂದ 2013ರ ಆ.4ರ ವರೆಗೆ 3 ಸಾವಿರ ಕಿಮೀ ದೂರದ ಪಾದಯಾತ್ರೆಯನ್ನು ಕಡಪಾ ಜಿಲ್ಲೆಯ ಇಡುಪುಲಪಾಯದಿಂದ ಆರಂಭಿಸಿ ಶ್ರೀಕಾಕುಲಂ ಜಿಲ್ಲೆಯ ಇಚ್ಚಾಪುರಂನಲ್ಲಿ ಮುಕ್ತಾಯಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next