Advertisement
ಬೆಂಗಳೂರಿನ ಪುಲಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ, ಕಲಬುರಗಿ ಉತ್ತರದ ಖನೀಜ್ ಫಾತಿಮಾ, ಕುಂದಗೋಳದ ಕುಸುಮಾ ಶಿವಳ್ಳಿ, ಶಿಡ್ಲಘಟ್ಟದ ವಿ.ಮುನಿಯಪ್ಪ, ಪಾವಗಡದ ವೆಂಕಟರಮಣಪ್ಪ, ಲಿಂಗಸುಗೂರಿನ ಡಿ.ಎಸ್.ಹೂಲಗೇರಿ, ಅಫಜಲಪುರದ ಎಂ.ವೈ.ಪಾಟೀಲ್ ಹಾಗೂ ಹರಿಹರದ ರಾಮಪ್ಪ ಅವರಿಗೆ ವಿವಿಧ ಕಾರಣಗಳಿಂದ ಟಿಕೆಟ್ ನೀಡದಿರುವ ತೀರ್ಮಾನಕ್ಕೆ ಬರಲಾಗಿದೆ. ವಯಸ್ಸು, ಅನಾರೋಗ್ಯ, ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರದೇ ಇರುವುದು, ಕ್ಷೇತ್ರ ಮಟ್ಟದಲ್ಲಿ ಜನಸಂಪರ್ಕದ ಕೊರತೆ ಹಾಗೂ ಈ ಸಲ ಮತ್ತೆ ಟಿಕೆಟ್ ನೀಡಿದರೆ ಸೋಲಬಹುದೆಂಬ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ ಇವರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಂ.ವೈ.ಪಾಟೀಲ್ ಸಹ ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದರೆ, ಹರಿಹರದಿಂದ ರಾಮಪ್ಪ ಬದಲಿಗೆ ಕುರುಬ ಸಮುದಾಯದಿಂದ ಹೊಸಬರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಖನೀಜ್ ಫಾತಿಮಾ ಹಾಗೂ ಕುಸುಮಾ ಶಿವಳ್ಳಿಗೆ ಮತ್ತೆ ಟಿಕೆಟ್ ಕೊಡಬೇಕೋ ಬೇಡವೋ ಎಂಬುದರ ಬಗ್ಗೆಯೂ ಗೊಂದಲ ಉಂಟಾಗಿದೆ. ಹೀಗಾಗಿ 8 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇತ್ಯರ್ಥವಾಗಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಾಲಿಗಳಲ್ಲಿ ಆತಂಕ ಮನೆ ಮಾಡಿದೆ. ಬೆಂಗಳೂರಿನಲ್ಲೇ ಅಭ್ಯರ್ಥಿಗಳ ಕೊರತೆ
ರಾಜಧಾನಿ ಬೆಂಗಳೂರಿನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಅಭ್ಯರ್ಥಿಗಳ ಕೊರತೆ ಉಂಟಾಗಿರುವುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಒಟ್ಟು 28 ಕ್ಷೇತ್ರಗಳಲ್ಲಿ 18 ರಿಂದ 20 ಕಡೆ ಗೆಲ್ಲುವ ಸಾಮರ್ಥ್ಯವಿದ್ದರೂ ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುವ ಪ್ರಬಲ ಅಭ್ಯರ್ಥಿಗಳೇ ಇಲ್ಲದಿರುವುದು ಕಾಂಗ್ರೆಸ್‌ಗೆ ತಲೆ ನೋವಾಗಿದೆ. ಶುಕ್ರವಾರದ ಸಭೆಯಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಚರ್ಚೆ ಸಂದರ್ಭದಲ್ಲಿ ಸ್ವತಃ ರಾಹುಲ್ ಗಾಂಧಿ ಅವರೇ ರಾಜಧಾನಿಯಲ್ಲೇ ಕಾಂಗ್ರೆಸ್ ಈ ರೀತಿಯಾದರೆ ಹೇಗೆ? ಇಷ್ಟು ವರ್ಷಗಳ ಕಾಲ ಸ್ಥಳೀಯವಾಗಿ ಏಕೆ ಸಮರ್ಥರನ್ನು ಬೆಳೆಸಿಲ್ಲ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆ.ಆರ್.ಪುರಂ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಬೆಳೆಸಲು ಏಕೆ ಸಾಧ್ಯವಾಗಿಲ್ಲ. ಇತರೆಡೆಯೂ ಏಕೆ ಇದುವರೆಗೆ ನಮಗೆ ಸಮರ್ಥರು ದೊರೆತಿಲ್ಲ ಎಂಬುದರ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರೆಂದು ತಿಳಿದುಬಂದಿದೆ.
Related Articles
Advertisement