ಶಿವಮೊಗ್ಗ: ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಟಿಕೆಟ್ ಸಿಗುವುದು ಅನುಮಾನ ಎಂಬ ಸುದ್ದಿಗಳು ಹರಿದಾಡುತ್ತಿರುವುದರಿಂದ ಅವರ ಅಭಿಮಾನಿಗಳು ಶುಕ್ರವಾರ ಮನೆ ಮುಂದೆ ಜಮಾಯಿಸಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತೇಶ್, ಸದ್ಯ ಗೊಂದಲ ಸೃಷ್ಟಿಯಾಗಿರುವುದರಿಂದ ನಮ್ಮ ಮನೆಗೆ ಬೆಂಬಲಿಗರು ಬಂದಿದ್ದಾರೆ. ಯಡಿಯೂರಪ್ಪ ಅವರು ಆಶೀರ್ವಾದ ಮಾಡಿದ್ದರು. ಹೀಗಾಗಿ ಹಾವೇರಿಯಲ್ಲಿ ಟಿಕೆಟ್ ಸಿಗುತ್ತದೆ ಹಾಗೂ ಕ್ಷೇತ್ರದಲ್ಲಿ ಓಡಾಡುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಓಡಾಟ ಮಾಡಿದ್ದೆ. ಈಗ ಬಸವರಾಜ ಬೊಮ್ಮಾಯಿ ಹೆಸರು ಕೇಳಿಬರುತ್ತಿದೆ.
ಹಾಗಾಗಿ ಕೆಲ ಗೊಂದಲಗಳು ಸೃಷ್ಟಿಯಾಗಿವೆ. ಈಗಲೂ ನನಗೆ ವಿಶ್ವಾಸ ಇದೆ. ಟಿಕೆಟ್ ನನಗೆ ಸಿಕ್ಕೇ ಸಿಗುತ್ತದೆ ಎಂದರು.
ವಿಜಯೇಂದ್ರ, ರಾಘಣ್ಣ ಅವರು ನನಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಟಿಕೆಟ್ ಮಿಸ್ ಆಗುವುದಿಲ್ಲ. ಹಾವೇರಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲುತ್ತದೆ. ಹಾವೇರಿ-ಗದಗ ಕ್ಷೇತ್ರಕ್ಕೆ ನನಗೆ ಟಿಕೆಟ್ ಸಿಗುವುದು ಖಚಿತ.
ಹೈಕಮಾಂಡ್ ಸೂಚನೆ ಮೇರೆಗೆ ನಮ್ಮ ತಂದೆ ರಾಜಕೀಯ ನಿವೃತ್ತಿ ಹೊಂದಿದ್ದರು. ಇದೀಗ ನಮ್ಮ ಕುಟುಂಬಕ್ಕೆ ಲೋಕಸಭಾ ಟಿಕೆಟ್ ಸಿಕ್ಕೇ ಸಿಗುತ್ತದೆ. ನಾವು ಬಿಜೆಪಿಯನ್ನು ತಾಯಿಯಂತೆ ಪ್ರೀತಿಸುತ್ತೇವೆ. ಹಾಗಾಗಿ ಪಕ್ಷದ ಮೇಲೆ ನಮಗೆ ಗೌರವವಿದೆ ಎಂದರು.