ಗಜೇಂದ್ರಗಡ: ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಟಿಕೆಟ್ ಹಂಚಿಕೆ ಹೈಕಮಾಂಡ್ ಮಾಡುತ್ತೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೋ, ಜನಾಭಿಪ್ರಾಯ ಯಾರಿಗಿದೆಯೋ ಅಂಥವರಿಗೆ ಅವಕಾಶ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾರು ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯ ಹೊಂದಿರುತ್ತಾರೋ ಅಂಥವರಿಗೆ ಹೈಕಮಾಂಡ್ ಮನ್ನಣೆ ನೀಡುತ್ತದೆ. ಉತ್ತಮ ಕೆಲಸ ಮಾಡುವವರಿಗೆ ಪಕ್ಷದಲ್ಲಿ ಆದ್ಯತೆ ನೀಡಲಾಗುತ್ತದೆ. ಜನಾಭಿಪ್ರಾಯದ ಆಧಾರದ ಮೇಲೆಯೇ ಟಿಕೆಟ್ ನಿರ್ಧಾರವಾಗುತ್ತದೆ ಎಂದರು.
ಪಕ್ಷದ ಕೆಲ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ಸಿಗದಿರುವ ಕುರಿತು ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್ ಹಂಚಿಕೆ ನಿರ್ಧಾರ ಪಕ್ಷದ ನಾಯಕರದ್ದು. ಆ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಶಾಸಕ ಕಳಕಪ್ಪ ಬಂಡಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಹೈಕಮಾಂಡ್ ಚುನಾವಣೆ ಸಮೀಪ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಸಚಿವ ವಿ. ಸೋಮಣ್ಣ ಪಕ್ಷ ಬಿಡುವ ಪ್ರಮೆಯವೇ ಇಲ್ಲ. ಅವರು ಎಲ್ಲಿಯೂ ಹೋಗಲ್ಲ. ದೆಹಲಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿಯೇ ಉಳಿಯಲಿದ್ದಾರೆ ಎಂದರು.