ಬೆಂಗಳೂರು: ರಾಜ್ಯದ ಪ್ರಬಲ ಸಮುದಾಯಗಳಾದ ವೀರಶೈವ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರು ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದು, ಈ ವರ್ಗವನ್ನು ವಾಪಸ್ ಕರೆತರುವ ಪ್ರಯತ್ನಗಳು ಆದ್ಯತೆ ಮೇರೆಗೆ ನಡೆಯಬೇಕು. ಇದಕ್ಕೆ ಸ್ವತಃ ಹೈಕಮಾಂಡ್ ತಂತ್ರಗಾರಿಕೆ ರೂಪಿಸುವ ಅಗತ್ಯ ಇದೆ ಎಂದು ಕಾಂಗ್ರೆಸ್‌ನ ಕೆಲವು ಪದಾಧಿಕಾರಿಗಳು ಸತ್ಯಶೋಧನ ಸಮಿತಿಗೆ ವರದಿ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಈ ಮೂರೂ ಸಮುದಾಯಗಳು ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಯಿತು. ಆದರೆ ಒಂದು ವರ್ಷದ ಅಂತರದಲ್ಲಿ ಚಿತ್ರಣ ಬದಲಾಯಿತು. ಪ್ರಬಲ ಸಮುದಾಯಗಳು ಪಕ್ಷದಿಂದ ಅಂತರ ಕಾಯ್ದುಕೊಂಡ ಪರಿಣಾಮ ಹಿನ್ನಡೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಅವರನ್ನು ವಾಪಸ್ ಕರೆತರುವ ಕೆಲಸ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಗಿರಬಹುದು.
ಇದರ ಜತೆಗೆ ಸಮುದಾಯಗಳು ಅಂತರ ಕಾಯ್ದುಕೊಳ್ಳಲು ಯಾವ್ಯಾವ ಅಂಶಗಳು ಕಾರಣವಾಗಿವೆ ಎಂಬುದನ್ನು ತಿಳಿಯಲು ಖಾಸಗಿ ಏಜೆನ್ಸಿ ಮೂಲಕ ಅಥವಾ ಇನ್ನಾವುದಾದರೂ ಮೂಲದಿಂದ ಅಧ್ಯಯನ ನಡೆಸಬೇಕು. ಅದನ್ನು ಆಧರಿಸಿ, ವಾಪಸ್ ಕರೆತರಲು ತಂತ್ರಗಾರಿಕೆ ರೂಪಿಸಬೇಕು.
ವರ್ಷದ ಅಂತರದಲ್ಲಿ ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಬಜೆಟ್‌ನಲ್ಲೇ ಅಗತ್ಯ ಅನುದಾನವನ್ನೂ ನೀಡಲಾಗಿದೆ. ಯೋಜನೆಗಳಲ್ಲಿ ವೀರಶೈವ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರ ಸಹಿತ ಎಲ್ಲ ಸಮುದಾಯಗಳ ಫಲಾನುಭವಿಗಳೂ ಇದ್ದಾರೆ. ಈ ಮಧ್ಯೆ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯನ್ನೂ ಸರಕಾರ ಸ್ವೀಕರಿಸಿದೆ. ಈ ಅಂಶ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ನೋಡಬೇಕಿದೆ.
ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಯಶಸ್ವಿಯಾದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಫಲ ನೀಡಲಿದೆ. ಅಷ್ಟೇ ಅಲ್ಲ, ಮುಂದಿನ ವಿಧಾನಸಭಾ ಚುನಾವಣೆಗೂ ಅನುಕೂಲ ಆಗಲಿದೆ ಎಂದು ಪದಾಧಿಕಾರಿಗಳು ಸಮಿತಿಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.