ಲಾಲ್‌ಬಾಗ್‌ಗೆ ಪ್ರವೇಶ ಕೊಡುವ ದ್ವಾರದಲ್ಲಿಯೇ ನಿಮ್ಮನ್ನು ಮೊದಲು ಸ್ವಾಗತಿಸುವುದು ಫಲಪುಷ್ಪಗಳಲ್ಲ, ದೊಡ್ಡ ಗಡಿಯಾರ. ಲಾಲ್‌ಬಾಗ್‌ಗೆ ಹೋದವರೆಲ್ಲ ಈ ಗಡಿಯಾರವನ್ನು ನಿಂತು ನೋಡಿದವರೇ. ಚೆಂದದ ಹೂಗಳಿಂದ ಅಲಂಕೃತವಾದ ಗಡಿಯಾರ, ಜನಾಕರ್ಷಣೆಯ ಕೇಂದ್ರಬಿಂದು. “ಕಾಲವನ್ನು ತಡೆಯೋರು ಯಾರೂ ಇಲ್ಲ’ ಅನ್ನುವಂತೆ, ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ 35 ವರ್ಷಗಳಿಂದ ಓಡುತ್ತಲೇ ಇತ್ತು.
ಹಾಗೆ ಓಡುತ್ತಿದ್ದ ಗಡಿಯಾರಕ್ಕೆ ಕೊಂಚ ಬ್ರೇಕ್ ಹಾಕಿದ್ದು ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿನ ಸುರಿದ ಜಡಿಮಳೆ. ಲಾಲ್‌ಬಾಗ್‌ನ ಕೆರೆ ತುಂಬಿ, ಉದ್ಯಾನದಲ್ಲಿ ನೀರು ನಿಂತ ಕಾರಣದಿಂದ ಗಡಿಯಾರದ ಮಷಿನ್ ಇರುವ ಸ್ಥಳಕ್ಕೂ ನೀರು ನುಗ್ಗಿತ್ತು. ಹಾಗಾಗಿ, ಇದೇ ಮೊದಲ ಬಾರಿಗೆ ಹೂವಿನ ಗಡಿಯಾರಕ್ಕೆ ದೊಡ್ಡ ಮಟ್ಟದ ದುರಸ್ತಿ ಮಾಡಬೇಕಾಗಿ ಬಂದಿತ್ತು. 2.5 ಲಕ್ಷ ರೂ. ವೆಚ್ಚದಲ್ಲಿ ರಿಪೇರಿ ಕಾರ್ಯಗಳೆಲ್ಲಾ ಮುಗಿದು ಈಗ ಮತ್ತೆ ಗಡಿಯಾರ ಟಿಕ್ ಟಿಕ್ ಎಂದು ಓಡುತ್ತಿದೆ.
ಉಡುಗೊರೆಯ ಗಡಿಯಾರ: ಸಸ್ಯಕಾಶಿಯ ಮುಖ್ಯದ್ವಾರದ ಬಳಿ ಇರುವ ಈ ಹೂವಿನ ಗಡಿಯಾರವನ್ನು 1983ರಲ್ಲಿ ಹಿಂದೂಸ್ಥಾನ್ ಮಶೀನ್ ಟೂಲ್ಸ್ ಲಿಮಿಟೆಡ್‌ನವರು ಲಾಲ್‌ಬಾಗ್‌ಗೆ ಉಡುಗೊರೆಯಾಗಿ ನೀಡಿದರು. ಅಂದಿನ ರಾಜ್ಯಪಾಲ ಎ.ಎನ್. ಬ್ಯಾನರ್ಜಿ ಅವರು ಈ ಗಡಿಯಾರಕ್ಕೆ ಚಾಲನೆ ನೀಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಅಡಚಣೆಗಳಿಲ್ಲದೆ ಗಡಿಯಾರ ಕಾರ್ಯ ನಿರ್ವಹಿಸುತ್ತಾ ಬಂದಿತ್ತು. ಪ್ರತಿ ವರ್ಷವೂ ಎಚ್‌ಎಂಟಿ ಕಂಪನಿಯವರೇ ಗಡಿಯಾರದ ಸಣ್ಣಪುಟ್ಟ ರಿಪೇರಿಗಳನ್ನು ನೋಡಿಕೊಳ್ಳುತ್ತಿದ್ದರು.
ಅಂತಿಂಥ ಗಡಿಯಾರವಲ್ಲ!: ಬರಿಯ ಗಡಿಯಾರ ಎಂದು ಇದನ್ನು ನಿರ್ಲಕ್ಷಿಸುವಂತಿಲ್ಲ. 7 ಮೀಟರ್ ವ್ಯಾಸವಿರುವ ಈ ಗಡಿಯಾರ ಬೆಗೊನಿಯಾ ಮತ್ತು ಅಮೆರಂಥಸ್‌ನಂಥ ಚೆಂದದ ಹೂವುಗಳಿಂದ ಅಲಂಕೃತಗೊಂಡಿದೆ. ಗಡಿಯಾರದ ಪಕ್ಕದಲ್ಲಿ, ಸ್ನೋ ವೈಟ್ ಆ್ಯಂಡ್ ಸೆವೆನ್ ಡ್ವಾಫ್Õì ಎಂಬ ಜಾನಪದ ಕಥೆಯಲ್ಲಿ ಬರುವ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದರ ಮುಳ್ಳುಗಳು 45-50 ಕೆಜಿ ತೂಕ ಹೊಂದಿವೆ. ಗಂಟೆ ಮುಳ್ಳು 2.45 ಮೀ, ನಿಮಿಷದ ಮುಳ್ಳು -3.30 ಮೀ ಹಾಗೂ ಸೆಕೆಂಡ್ ಮುಳ್ಳು 3.85 ಮೀಟರ್ ಉದ್ದ ಇವೆ.
ಹೇಗೆ ಕೆಲಸ ಮಾಡುತ್ತೆ?: ಜಪಾನ್‌ನ ಸಿಟಿಜನ್ ಕಂಪನಿಯವರು ಈ ಗಡಿಯಾರದ ತಯಾರಕರು. ಮೆಕಾನಿಕಲ್ ಮೂವ್‌ಮೆಂಟ್ ಹಾಗೂ ವಿದ್ಯುತ್‌ನ ಸಹಾಯದಿಂದ ಕೆಲಸ ಮಾಡುತ್ತಿದ್ದು, ವಿದ್ಯುತ್ ಇಲ್ಲದಿದ್ದರೂ 5-6 ಗಂಟೆ ಕೆಲಸ ಮಾಡಬಲ್ಲ ಬ್ಯಾಟರಿ ಬ್ಯಾಕಪ್ (ಯುಪಿಎಸ್) ಹೊಂದಿದೆ. ಭೂಮಿಯಿಂದ 3-4 ಅಡಿ ಆಳದಲ್ಲಿ ಗೇರ್, ವೀಲ್ಸ್, ಮಶೀನ್‌ಗಳನ್ನು ಅಳವಡಿಸಲಾಗಿದೆ. ಸಮಯದ ನಿಖರತೆಯಲ್ಲಿ ಈ ಗಡಿಯಾರ ಬಹಳ ಪಫೆìಕ್ಟ್. ದಿನದಲ್ಲಿ 3 ಸೆಕೆಂಡ್ ಹಾಗೂ ತಿಂಗಳಲ್ಲಿ ಸರಾಸರಿ 15 ಸೆಕೆಂಡ್ ವ್ಯತ್ಯಾಸವಾಗಬಹುದಷ್ಟೇ.
ಎಲ್ಲೆಲ್ಲಿದೆ ಇಂಥ ಗಡಿಯಾರ?: ಲಾಲ್‌ಬಾಗ್‌ನ ಮಾದರಿಯ, ಎಚ್‌ಎಂಟಿಯ ಇನ್ನೊಂದು ಹೂವಿನ ಗಡಿಯಾರ ರಾಜಭವನದಲ್ಲಿದೆ. ಕೆಂಗೇರಿ ಬಳಿಯ ಓಂಕಾರ ಹಿಲ್ಸ್‌ನಲ್ಲಿರುವ ದೊಡ್ಡ ಗಡಿಯಾರ, ಕೆ.ಆರ್. ಮಾರುಕಟ್ಟೆ ಹಾಗೂ ಬಿಬಿಎಂಪಿ ಟವರ್‌ನಲ್ಲಿರುವ ಗಡಿಯಾರಗಳೂ ಎಚ್.ಎಂ.ಟಿ.ಯದ್ದೇ ಆಗಿದೆ. ರಾಜರಾಜೇಶ್ವರಿ ನಗರದ ಬಳಿ ಇರುವ ಓಂಕಾರ್ ಹಿಲ್ಸ್‌ನಲ್ಲಿರುವ ಗಡಿಯಾರವು, ಏಷ್ಯಾದ ಎರಡನೇ ಅತಿ ದೊಡ್ಡ ಗಡಿಯಾರ ಎಂದು ಗುರುತಿಸಲಾಗಿದೆ.
* ಪ್ರಿಯಾಂಕಾ ಎನ್.