Advertisement

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

05:08 PM Apr 24, 2024 | Team Udayavani |

ಉದಯವಾಣಿ ಸಮಾಚಾರ
ಕಾರವಾರ: ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಾಮಾನ್ಯವಾಗಿ
ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ  ಹೆಚ್ಚಾಗಿದ್ದು, ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಈ ಕೆಳಗಿನಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

Advertisement

ಸಾರ್ವಜನಿಕರು ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮೂನ್ಸೂಚನೆ ಹಾಗೂ ಸಾಮಾನ್ಯ ಅರಿವು ಮುಖಾಂತರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಬರುವ ಎಚ್ಚರಿಕೆ ಸಂದೇಶಗಳನ್ನು ಗಮನಿಸಬೇಕು.

ಪ್ರತಿಕೂಲ ಹವಾಮಾನ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಚಲಾಯಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ
ಹೋಗಬಾರದು ಎಂದಿದ್ದಾರೆ.

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಾದ ಮನೆಗಳು, ಕಚೇರಿಗಳು, ಅಂಗಡಿಗಳು ಮತ್ತು ಕಿಟಕಿ ಮುಚ್ಚಿರುವ ವಾಹನಗಳಲ್ಲಿ ಆಶ್ರಯ ಪಡೆಯಬೇಕು. ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು, ಪ್ರವಾಹ ಬಾರದಂತಹ ತಗ್ಗು ಪ್ರದೇಶವನ್ನು ಖಚಿತ ಪಡಿಸಿಕೊಂಡು ಆಶ್ರಯ ಪಡೆಯಬೇಕು. ಕೆರೆ ಮತ್ತು ನದಿಗಳು ಹಾಗೂ ಇನ್ನಿತರೆ ನೀರಿನ ಮೂಲಗಳಿಂದ ತಕ್ಷಣವೇ ದೂರವಿರಬೇಕು. ವಿದ್ಯುತ್‌ ಉಪಕರಣ ಹಾಗೂ ವಿದ್ಯುತ್‌ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್‌ ಟವರ್‌, ಪವನ ವಿದ್ಯುತ್‌ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಬೇಕು.

ಗುಡುಗು-ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣ ಮುಂದೂಡಬೇಕು. ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ನಿಲ್ಲಿಸಿ, ವಾಹನದಲ್ಲಿಯೇ ಆಶ್ರಯ ಪಡೆಯಬೇಕು. ಮರಗಳು ಮತ್ತು ವಿದ್ಯುತ್‌ ಲೈನ್‌ಗಳಿಂದ ದೂರದಲ್ಲಿ ವಾಹನ ನಿಲುಗಡೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

Advertisement

ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ ಅಪಾಯ ಕಡಿಮೆ ಮಾಡಲು ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು.
ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು, ತಲೆಯನ್ನು ಬಗ್ಗಿಸಿ, ಕಿವಿಗಳನ್ನು ಮುಚ್ಚಿಕೊಳ್ಳಬೇಕು.
ಮಿಂಚನ್ನು ಆಕರ್ಷಿಸುವಂತಹ ವಿದ್ಯುತ್‌ ಅಥವಾ ಟೆಲಿಫೋನ್‌ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಅರಣ್ಯ ಪ್ರದೇಶದಲ್ಲಿದ್ದರೆ ಸಣ್ಣ, ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಲೋಹದ ವಸ್ತುಗಳನ್ನು ಬಳಸಬಾರದು ಮತ್ತು ಬೈಕ್‌ಗಳು, ವಿದ್ಯುತ್‌ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು
ಇತ್ಯಾದಿಗಳಿಂದ ದೂರವಿರಬೇಕು. ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು. ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಬೆಂಕಿ ಮತ್ತು ವಿದ್ಯುತ್‌ ಶಕ್ತಿ ಸಂಪರ್ಕದಿಂದ ದೂರವಿರಬೇಕು.

ಮಕ್ಕಳು, ವಯೋವೃದ್ಧರು, ಜಾನುವಾರುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಲ್ಲಿರುವಂತೆ  ಗಮನಹರಿಸಬೇಕು. ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರೆ ಯಾವುದೇ
ಅವಶೇಷಗಳನ್ನು ತೆಗೆದು ಹಾಕಬೇಕು. ಸಿಡಿಲು ಸಂದರ್ಭದಲ್ಲಿ ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ವಿದ್ಯುತ್‌ ಹರಿಯುವ ಸಾಧ್ಯತೆ ಇರುವುದರಿಂದ ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್‌ ತೆಗೆದುಕೊಳ್ಳಬಾರದು, ಪಾತ್ರೆಗಳನ್ನು ತೊಳೆಯಬಾರದು ಮತ್ತು ಬಟ್ಟೆ ಒಗೆಯಬಾರದು.

ಗುಡುಗು ಸಿಡಿಲಿನ ಸಮಯದಲ್ಲಿ ಮೋಟಾರ್‌ ಸೈಕಲ್‌ ಅಥವಾ ಇನ್ನಿತರೆ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡಬಾರದು. ಆಟದ ಮೈದಾನ, ಉದ್ಯಾನವನಗಳು ಈಜುಕೊಳ ಮತ್ತು ಕಡಲ ತಿರಗಳಿಗೆ ಹೋಗುವುದನ್ನು ತಪ್ಪಿಸಬೇಕು. ದೋಣಿ ವಿಹಾರ ಅಥವಾ ಈಜುತ್ತಿದ್ದರೆ ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು. ಅರಣ್ಯ ಪ್ರದೇಶದಿಂದ ಗಿಡ ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು ಮಿಂಚಿನ ಹೊಡೆತದಿಂದಾಗಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯಿದೆ.

ಬಯಲು ಪ್ರದೇಶದಲ್ಲಿ ಸಿಲುಕಿಕೊಂಡಿದ್ದರೆ, ತಕ್ಷಣವೇ ಹತ್ತಿರದಲ್ಲೇ ಇರುವ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದು ಅಪಾಯದಿಂದ ಪಾರಾಗಬೇಕು. ಮಿಂಚು ಬರುವ ಸಮಯದಲ್ಲಿ ರಬ್ಬರ್‌ ಸೋಲ್‌ ಇರುವ ಪಾದರಕ್ಷೆಗಳು ಮತ್ತು ಕಾರಿನ ಚಕ್ರಗಳು ಸುರಕ್ಷಿತವಲ್ಲದ ಕಾರಣ ಅವುಗಳಿಂದ ದೂರವಿರಬೆಕು. ವಿದ್ಯುತ್‌ ಉಪಕರಣಗಳಿಂದ ದೂರವಿರಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next