ಕೊರಟಗೆರೆ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿ ಹೆಣ್ಣು ಮಗುವಿನ ಜನನದ ನಂತರ ಸಿಡಿಪಿಒ ದೂರಿನ ಮೇರೆಗೆ ಪತಿಯನ್ನು ಪೋಸ್ಕೋ ಕಾಯಿದೆಯಡಿ ಬಂಧಿಸಿರುವ ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲ್ಲೂಕಿನ ಇರಕಸಂದ್ರ ಕಾಲೋನಿಯ ರಾಮಕೃಷ್ಣಯ್ಯನ ಮಗ ರಮೇಶ್ ಎಂಬುವನೆ ಪೋಸ್ಕೋ ಕಾಯ್ದೆಯಡಿ ಬಂಧಿತನಾಗಿರುವ ಆರೋಪಿಯಾಗಿದ್ದು, ಹೆರಿಗೆಯ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅಪ್ರಾಪ್ತ ಬಾಲಕಿಯ ಮದುವೆ ಬಗ್ಗೆ ದೂರು ನೀಡಿದೆ ಎನ್ನಲಾಗಿದೆ.
ರಮೇಶ್ ಆಟೋ ಡ್ರೈವರ್ ಆಗಿದ್ದು ಪ್ರೀತಿಸಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈತ ಅಪ್ರಾಪ್ತ ಬಾಕಿಯನ್ನು ಮದುವೆಯಾಗಿ ಕೊರಟಗೆರೆ ಮಾರುತಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ರವಾನೆಯಾಗಿದೆ. ಇಲಾಖೆಯ ಸಿಡಿಪಿಒ ದೂರಿನ ಮೇರೆಗೆ ಕೋಳಾಲ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ
ಈ ಹಿಂದೆ ಮದುವೆಯ ಮಾಹಿತಿ ಅರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಂಬಿಕಾ , ಅಂಗನವಾಡಿ ಕಾರ್ಯಕರ್ತೆ ಹಾಗೂ ಗ್ರಾಪಂ ಪಿಡಿಒ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಗುಟ್ಟಾಗಿ ಬೇರೆಡೆ ಮದುವೆ ಮಾಡಿ ಹೆಣ್ಣಿನ ಕಾಲುಂಗರ ಮತ್ತು ತಾಳಿಯನ್ನು ತೆಗೆದಿಟ್ಟು ಬಂದು ಪರಿಶೀಲಿಸುವವರನ್ನು ಯಾಮಾರಿಸಿದ್ದರು ಎನ್ನಲಾಗಿದೆ.
ಈಗ ಹೆರಿಗೆಯಾದ ನಂತರ ಸಿಕ್ಕಿಬಿದ್ದಿದ್ದು ಸಿಡಿಪಿಒ ದೂರಿನ ಮೇರೆಗೆ ಗಂಡ ಹಾಗೂ ಮದುವೆಗೆ ಸಹಕರಿಸಿದ ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎನ್ಬಲಾಗಿದೆ.
ಈ ಸಂಬಂಧ ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಸಿದ್ದರಾಮೇಶ್ವರ್ ಹಾಗೂ ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.