ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವರ್ಣೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ರಚಿಸಿ, ನಿರ್ದೇಶಿಸಿ, ನಿರೂಪಿಸಿ, ಪ್ರಸ್ತುತ ಪಡಿಸಿದ “ತುಳುನಾಡ ವೈಭವ’ ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಿರಿಮೆಗರಿಮೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಯಿತು. ವಿವಿಧ ಸನ್ನಿವೇಶಗಳಿಗೆ ಸಂಬಂಧಪಟ್ಟ ನೃತ್ಯಗಳಿಗೆ, ಧ್ವನಿಮುದ್ರಿತ ಹಾಡುಗಳನ್ನು ಅನಿವಾರ್ಯವಿದ್ದಲ್ಲಿ ಮಾತ್ರ ಬಳಸಿಕೊಂಡು, ಉಳಿದೆಲ್ಲ ಕಡೆ ವಿದ್ಯಾರ್ಥಿಗಳೇ ಹಾಡಿ, ಹಿನ್ನೆಲೆ ಸಂಗೀತ ನೀಡಿ ಸಹಕರಿಸಿದ್ದು ಇನ್ನೊಂದು ವಿಶೇಷ.
ವಿದ್ಯಾರ್ಥಿಗಳೇ ನಿರ್ಮಿಸಿದ ತುಳುನಾಡಿನ ಪ್ರಾಚೀನ ಮನೆಯ ಮಾದರಿಯ ವೇದಿಕೆಯಲ್ಲಿ ಅಜ್ಜಿಯೊಬ್ಬಳು ಗತಕಾಲದಿಂದ ವರ್ತಮಾನದವರೆಗೆ ಮೆರೆದ, ಮೆರೆಯುತ್ತಿರುವ ತುಳುನಾಡಿನ ವೈಭವವನ್ನು ನಿರೂಪಿಸುವಂತೆ ಹೆಣೆದ ಈ ಕಾರ್ಯಕ್ರಮ ಆರಂಭವಾದದ್ದು ಪರಶುರಾಮ ಸೃಷ್ಟಿಯ ಪೌರಾಣಿಕ ಕಥನದ ಮೂಲಕ. ಕೊಡಲಿ ಎಸೆದು ತುಳುನಾಡನ್ನು ನಿರ್ಮಿಸಿದ ಐತಿಹ್ಯವನ್ನು “ಅಗ್ರತಃ ಚತುರೋ ವೇದಃ’ ಹಾಡಿನೊಂದಿಗೆ ನಿರೂಪಿಸಿದರು. ಹೀಗೆ ನಿರ್ಮಾಣವಾದ ಭೂಮಿಯಲ್ಲಿ ಮೊದಲೇ ವಾಸವಾಗಿದ್ದ ಸರ್ಪ ಸಂತತಿಯ ಸಮಾಧಾನಕ್ಕಾಗಿ ಬೆಳೆದುಬಂದ ನಾಗಾರಾಧನೆಯನ್ನು ನಾಗಮಂಡಲದ ಪ್ರದರ್ಶನದೊಂದಿಗೆ ಕಾಣಿಸಿದರು. ವಿಶಿಷ್ಟ ಸಂಪ್ರದಾಯವಾದ “ಅಳಿಯಕಟ್ಟಿನ’ ಮೂಲವಾದ ಭೂತಾಳ ಪಾಂಡ್ಯನ ಕಥೆಯನ್ನು ರೂಪಕದ ಮೂಲಕ ಪ್ರದರ್ಶಿಸಿದರು. ಆ ಮೂಲಕ ತುಳುನಾಡಿನ ರಾಜ ಪರಂಪರೆಯ ಚಿತ್ರಣವೂ ಮೂಡಿಬಂತು. ಜಾನಪದ ನೃತ್ಯ ಪರಂಪರೆಯ ಪ್ರತೀಕವಾಗಿ ಪ್ರದರ್ಶಿಸಲ್ಪಟ್ಟ ಕಂಗೀಲು ಕುಣಿತವಂತೂ ವಿದ್ಯಾರ್ಥಿಗಳ ಅಂತಃಶಕ್ತಿಯನ್ನು ಪರಿಪೂರ್ಣವಾಗಿ ಬಹಿರಂಗಪಡಿಸಿತು.
ಆಚಾರ್ಯ ಮಧ್ವರು ರಚಿಸಿದ “ಪ್ರೀಣಯಾಮೋ ವಾಸುದೇವಂ’ ಕೃತಿಗೆ ನೃತ್ಯ ದೊಂದಿಗೆ ಉಡುಪಿಯ ಕೃಷ್ಣನ ಸ್ಥಾಪನೆ, ಭರತನಾಟ್ಯದೊಂದಿಗೆ ಪರ್ಯಾಯ ದರ್ಬಾರಿನ ವೈಭವ ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕ ವೈಭವ ಮೇಳೈಸಿಸಿತು.
ವಾದಿರಾಜರು ತುಳುವಿನಲ್ಲಿ ರಚಿಸಿದ “ಲೇ ಲೇ ಲೇ ಗಾ’ ದಶಾವತಾರದ ವರ್ಣನೆಯನ್ನು ಒಳಗೊಂಡ ಹಾಡಿಗೆ ವಿದ್ಯಾರ್ಥಿಗಳ ಸಮೂಹ ನೃತ್ಯ ದಶಾವತಾರದ ಸಂಪೂರ್ಣ ದರ್ಶನವನ್ನು ನೀಡುವಲ್ಲಿ ಯಶ ಪಡೆಯಿತು. ಅವರೇ ರಚಿಸಿದ ಲಕ್ಷ್ಮೀ ಶೋಭಾನೆ ಕೃತಿಯ ಪ್ರಸ್ತುತಿ ತುಳುನಾಡಿನ ಮದುವೆಗಳಲ್ಲಿ ನೆಲದ ಹಾಡು ಸೇರಿಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿಯಾದ ರೀತಿಯನ್ನು ವಿವರಿಸಿತು. ವಾದಿರಾಜರ ಶಿಷ್ಯರಾದ ನಾರಾಯಣ ಭಟ್ಟರು ಮಾಡಿದ ಪ್ರಮಾದದಿಂದ ಬ್ರಹ್ಮರಾಕ್ಷಸರಾಗಿ ಮತ್ತೆ ಶಾಪವಿಮುಕ್ತರಾಗಿ ಭೂತರಾಜರಾದ ಪ್ರಕರಣವನ್ನು ಪರಿಣಾಮಕಾರಿಯಾಗಿ ರೂಪಕದಲ್ಲಿ ನಿರೂಪಿಸಿದರು.
ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿಯಾದ ಬಪ್ಪನಾಡಿನ ಐತಿಹ್ಯವನ್ನು ಯಕ್ಷಗಾನೀಯವಾಗಿ ಸಪ್ತದುರ್ಗೆಯರ ಭೂ ಅವತರಣ, ಗುಳಿಗನ ಭೇಟಿ, ಬೇರೆ ಬೇರೆ ಸ್ಥಳಗಳಲ್ಲಿ ದುರ್ಗೆಯರ ನೆಲೆ, ಬಪ್ಪ ಬ್ಯಾರಿಯ ಮೂಲಕ ದುರ್ಗೆಯ ಆಲಯದ ಸ್ಥಾಪನೆಗಳ ಸನ್ನಿವೇಶಗಳೊಂದಿಗೆ “ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗದ ಹಾಡುಗಳೊಂದಿಗೆ ಪ್ರದರ್ಶಿಸಿದರು. ದೊಂದಿಯೊಂದಿಗೆ ಗುಳಿಗನ ಪ್ರವೇಶವಂತೂ ಅದ್ಭುತ ವಾತಾವರಣವನ್ನು ನಿರ್ಮಿಸಿತು. ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಪ್ರಸ್ತಾಪದೊಂದಿಗೆ ತುಳುನಾಡಿನ ಇತಿಹಾಸದೊಂದಿಗೆ ಪವಾಡ ಸದೃಶ ಘಟನೆಗಳು ಸೇರಿಕೊಂಡು ಇಲ್ಲಿನ ಇತಿಹಾಸವು ಪುರಾಣವಾದ ಹೆಗ್ಗಳಿಕೆಯನ್ನು ಬಿಂಬಿಸಿತು.
“ಕೊಂಬುದ ಸೊರೊಕು ಕಂಬುಲದ ಎರುಕುಲು’ ಪದ್ಯಕ್ಕೆ ನೃತ್ಯದೊಂದಿಗೆ ಕಂಬಳದ ಪ್ರಾತ್ಯಕ್ಷಿಕೆ, ಕ್ರೀಡಾ ಸಂಸ್ಕೃತಿಗೆ ಸಾಕ್ಷಿಯಾದರೆ, “ನೀರೆ ತೋರೆಲೆ ನೀರೆ ತೋರೆಲೆ’ ಎಂಬ ವಾದಿರಾಜರ ಹಾಡಿಗೆ ತುಳಸಿ ಸಂಕೀರ್ತನೆ ಈ ಪ್ರದೇಶದ ಅಪೂರ್ವ ಸಂಪ್ರದಾಯದ ಸೌಂದರ್ಯವನ್ನು ಕಾಣಿಸಿತು.
ಹದಿನೈದು ನಿಮಿಷದ ಹುಲಿವೇಷ ಕುಣಿತ ಸಾಂಪ್ರದಾಯಿಕ ಹೆಜ್ಜೆಗಾರಿಕೆ, ಸತ್ವಯುತ ಪ್ರದರ್ಶನದೊಂದಿಗೆ ಯಶಸ್ವಿಯಾಗಿತ್ತು. “ತುದೆತ ಪುಡೆಟು, ಪುಣಿತ ಬರಿಟು’ ಹಾಡಿಗೆ ವಿದ್ಯಾರ್ಥಿನಿಯರು ಮಾಡಿದ ಓಬೇಲೆ ನೃತ್ಯ ಮನೋಹರವಾಗಿತ್ತು.
ಡಾ| ವಾಸುದೇವ