ಕೊಚ್ಚಿ: ಕಮಲ್ ಹಾಸನ್ ಅವರ ʼಥಗ್ ಲೈಫ್ʼ ಸಿನಿಮಾದ ಚಿತ್ರೀಕರಣದ ವೇಳೆ ಅಪಘಾತವಾಗಿರುವ ಕುರಿತು ವರದಿಯಾಗಿದೆ.
ಪುದುಚೇರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಾಡ ಸಂಭವಿಸಿದೆ ಎನ್ನಲಾಗಿದೆ. ಮಾಲಿವುಡ್ ನಟ ಜೋಜು ಜಾರ್ಜ್ ಅವರ ಪಾತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಯೋಜನೆಯ ಪ್ರಕಾರ ಹೆಲಿಕಾಪ್ಟರ್ ಯೊಂದರಿಂದ ಅವರು ಜಗಿಯುವ ದೃಶ್ಯವನ್ನು ಸೆರೆಹಿಡಿಯಬೇಕಿತ್ತು.
ನಟ ತನ್ನ ಸಹ-ನಟ ನಾಸರ್ ಜೊತೆಗೆ ಹೆಲಿಕಾಪ್ಟರ್‌ನಿಂದ ಜಿಗಿಯಬೇಕಿತ್ತು. ಆದರೆ ಜಿಗಿಯುವಾಗ ಅವರು ಮುಗ್ಗರಿಸಿ ಬಿದ್ದಿದ್ದಾರೆ. ಪರಿಣಾಮ ಅವರ ಕಾಲಿಗೆ ಏಟಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಎಡಗಾಲು ಮೂಳೆ ಮುರಿತವಾಗಿದೆ. ಕನಿಷ್ಠ ಒಂದು ವಾರದ ವಿಶ್ರಾಂತಿ ಪಡೆಯಬೇಕಿಂದು ವೈದ್ಯರು ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.
ವೈದ್ಯರ ಸೂಚನೆಯ ಹೊರತಾಗಿಯೂ ನಟ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪುದುಚೇರಿ ವಿಮಾನ ನಿಲ್ದಾಣದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದೆ ಎನ್ನಲಾಗಿದೆ. ನಟರಾದ ಕಮಲ್ ಹಾಸನ್, ಸಿಲಂಬರಸನ್ ಟಿಆರ್ ಮತ್ತು ಅಶೋಕ್ ಸೆಲ್ವನ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
1987 ರ ʼನಾಯಕನ್ʼ ಸಿನಿಮಾದ ಬಳಿಕ ಕಮಲ್ ಹಾಸನ್ – ಮಣಿರತ್ನಂ ʼಥಗ್ ಲೈಫ್ʼ ಮೂಲಕ ಜೊತೆಯಾಗಿದ್ದಾರೆ.
ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ಸಿಲಂಬರಸನ್ ಟಿಆರ್, ತ್ರಿಶಾ ಕೃಷ್ಣನ್, ಅಭಿರಾಮಿ, ನಾಸರ್, ಜೋಜು ಜಾರ್ಜ್, ಐಶ್ವರ್ಯ ಲಕ್ಷ್ಮಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.