Advertisement

ಬೆಳಂದೂರು: ಪ್ಲಾಸ್ಟಿಕ್ ಸೌಧಕ್ಕೆ ದಾರಿಯೇ ಇಲ್ಲ!

10:33 AM Aug 06, 2018 | Team Udayavani |

ಬೆಳಂದೂರು: ಕಸವನ್ನು ಎಸೆಯಬೇಡಿ. ಪ್ಲಾಸ್ಟಿಕ್‌ ಅನ್ನು ಭೂಮಿಯ ಮೇಲೆ ಹಾಕಬೇಡಿ. ಪರಿಸರವನ್ನು ಕಾಪಾಡಿ ಎಂದು ಗ್ರಾಮಸ್ಥರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕೆಲವೆಡೆ ಪ್ಲಾಸ್ಟಿಕ್‌ ಸೌಧವನ್ನು ನಿರ್ಮಿಸಲಾಗಿತ್ತು. ಆದರೆ, ಬೆಳಂದೂರು ಗ್ರಾ.ಪಂ. ಸಮೀಪವಿರುವ ಪ್ಲಾಸ್ಟಿಕ್‌ ಸೌಧಕ್ಕೆ ಹೋಗಲು ಸರಿಯಾದ ದಾರಿಯೇ ಇಲ್ಲ!

Advertisement

ಇದು ಗ್ರಾ.ಪಂ.ನ ಸ್ವಚ್ಛತೆಯ ಕಾಳಜಿಯನ್ನು ಪ್ರಶ್ನಿಸುವಂತಿದೆ. ಗ್ರಾ.ಪಂ. ಪೇಟೆಯ ಸುತ್ತಮುತ್ತಲ ಅಂಗಡಿಗಳು, ಮನೆಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ದಾಸ್ತಾನಿರಿಸಲು ಪ್ಲಾಸ್ಟಿಕ್‌ ಸೌಧವನ್ನು ನಿರ್ಮಿಸಿದ್ದರೂ ಅದಕ್ಕೆ ಪ್ಲಾಸ್ಟಿಕ್‌ ತ್ಯಾಜ್ಯ ತಂದು ಹಾಕುವುದೇ ಇಲ್ಲ. ಗ್ರಾ.ಪಂ.ನಿಂದ ಬರೆಪ್ಪಾಡಿ, ಕುದ್ಮಾರು, ಬೈತಡ್ಕದಲ್ಲೂ ಪ್ಲಾಸ್ಟಿಕ್‌ ಸೌಧ ನಿರ್ಮಿಸಲಾಗಿದೆ. ಆದರೆ ಅಲ್ಲಿಗೂ ಕಸ ಹಾಕುವುದಿಲ್ಲ. ಈ ಕುರಿತು ಗ್ರಾ.ಪಂ. ಅರಿವು ಮೂಡಿಸುವ ಕಾರ್ಯ ನಡೆಸಬೇಕಿದೆ. ಸ್ವಚ್ಛ ಭಾರತಕ್ಕಾಗಿ ದೇಶದ ಪ್ರಧಾನಿಯವರೇ ಕರೆ ಕೊಟ್ಟಿದ್ದರೂ ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎನ್ನುವುದಕ್ಕೆ ಪ್ಲಾಸ್ಟಿಕ್‌ ಸೌಧಗಳೇ ಉದಾಹರಣೆ. ಬೆಳಂದೂರಿನಲ್ಲಿ ಪ್ಲಾಸ್ಟಿಕ್‌ ಸೌಧಕ್ಕೆ ತೆರಳುವ ದಾರಿಯೇ ಬಂದ್‌ ಆಗಿದೆ. ಜನರು ಇದರ ಪ್ರಯೋಜನ ಪಡೆಯುವುದಾದರೂ ಹೇಗೆ? ಕಡಿದ ಮರದ ಗೆಲ್ಲುಗಳು ಹಾಗೆಯೇ ಬಿದ್ದುಕೊಂಡಿವೆ. ಇವುಗಳನ್ನೂ ಗ್ರಾ.ಪಂ. ತೆರವು ಮಾಡಿಸಿಲ್ಲ.

ಜಾಗೃತಿ ಮುಖ್ಯ
ಪ್ಲಾಸ್ಟಿಕ್‌ ವಸ್ತುಗಳನ್ನು ಏನು ಮಾಡಬೇಕು? ಎನ್ನುವ ಪರಿಜ್ಞಾನ ಕೆಲವರಿಗೆ ಇರುವುದಿಲ್ಲ. ಪ್ಲಾಸ್ಟಿಕ್‌ ಚೀಲಗಳನ್ನು ಮರು ಬಳಕೆ ಮಾಡುತ್ತಾರೆ ಎನ್ನುವ ಮಾಹಿತಿ ಗ್ರಾಮೀಣ ಜನರಿಗೆ ಇರುವುದಿಲ್ಲ. ಪ್ಲಾಸ್ಟಿಕ್‌ ವಸ್ತುಗಳನ್ನು ಸ್ವಚ್ಛವಾಗಿಟ್ಟು ಒಣಗಿಸಿ, ಅವುಗಳನ್ನು ಸ್ಥಳೀಯ ಅಂಗನವಾಡಿಗೆ ನೀಡಬೇಕು. ಅಲ್ಲಿಂದ ಬೇರೆ ಕಡೆ ರವಾನೆಯಾಗುತ್ತವೆ. ಸರಕಾರ ಈ ಬಗ್ಗೆ ಮಾಹಿತಿ ನೀಡಿದ್ದರೂ, ಪ್ರಯೋಜನ ಮಾತ್ರ ಶೂನ್ಯ. ಯಾವ ಅಂಗನವಾಡಿಗೂ ಪ್ಲಾಸ್ಟಿಕ್‌ ಬರಲೇ ಇಲ್ಲ. ಪ್ಲಾಸ್ಟಿಕ್‌ ವಸ್ತುಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಜಾಗೃತಿ ಮೂಡಿಸುವುದೇ ಇದಕ್ಕೆ ಪರಿಹಾರವಾಗಿದೆ.

ಅಚ್ಚುಕಟ್ಟಾದ ವ್ಯವಸ್ಥೆ
ಪ್ಲಾಸ್ಟಿಕ್‌ ಸೌಧ ಎನ್ನುವುದೊಂದು ಅಚ್ಚುಕಟ್ಟಾದ ವ್ಯವಸ್ಥೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲಾಗಿ ಸೌಧದೊಳಗೆ ತಂದು ಹಾಕಿ ಅದನ್ನು ಬೇರೆ ಕಡೆ ಸಾಗಾಟ ಮಾಡುವ ವ್ಯವಸ್ಥೆ. ನಾಲ್ಕೈದು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಸೇವೆಯನ್ನು ಮೊದಲಿಗೆ ಜನ ಉಪಯೋಗಿಸುತ್ತಿದ್ದರು. ಆ ಬಳಿಕ ಬಳಕೆ ನಿಲ್ಲಿಸಿದ್ದಾರೆ. ಈಗ ಸೌಧದೊಳಗೆ ಕಸವನ್ನು ಹಾಕುವುದೇ ಇಲ್ಲ. 

ಸಾರ್ವಜನಿಕರೂ ಗಮನಹರಿಸಬೇಕು
ವ್ಯವಸ್ಥೆ ಇದ್ದರೂ ಕಸ ಹಾಕುತ್ತಿಲ್ಲ. ಅದರ ಬದಲು ರಾತ್ರಿ ವೇಳೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ರಸ್ತೆ ಬದಿ ಎಸೆಯುತ್ತಾರೆ. ಈ ರೀತಿ ಕಸ ಎಸೆಯುವವರು ಯಾರು? ಕಣ್ಣೆದುರಿಗೇ ಕಸ ಹಾಕುವ ಸೌಧವಿದ್ದರೂ ಬಳಸದೇ ಇರಲು ಕಾರಣವೇನು? ಎಂಬುದೇ ಯಕ್ಷಪ್ರಶ್ನೆಯಾಗಿದೆ.

Advertisement

ನೋಟಿಸ್‌ ನೀಡುತ್ತೇವೆ
ಪ್ಲಾಸ್ಟಿಕ್‌ ಸೌಧದ ಎದುರಿನ ದಾರಿಗೆ ಅಡ್ಡವಾಗಿರುವ ಮರದ ಗೆಲ್ಲನ್ನು ಹಾಕಿದವರಿಗೆ ತೆರವುಗೊಳಿಸುವ ಕುರಿತಂತೆ ನೋಟಿಸ್‌ ನೀಡಲಾಗುವುದು.
– ಉಮೇಶ್ವರಿ ಅಗಳಿ
ಅಧ್ಯಕ್ಷರು, ಬೆಳಂದೂರು ಗ್ರಾ.ಪಂ

ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next