Advertisement

ಕಾಂಗ್ರೆಸ್‌ ಪ್ರಚೋದನೆ ಯಿಂದ ಕಲ್ಲು ತೂರಾಟ

05:10 PM Apr 14, 2018 | Team Udayavani |

ಚಿತ್ರದುರ್ಗ: ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಪಕ್ಷದ ಪ್ರಚೋದನೆಯಿಂದಾಗಿ ಕಲ್ಲು ತೂರಾಟ ನಡೆದು ಗಲಭೆ ಉಂಟಾಗಿದೆ. ಚುನಾವಣೆ ಎಂದಾಗ ಇವೆಲ್ಲ ಸಹಜ. ಯಾರು ಎಷ್ಟೇ ಪಿತೂರಿ ಮಾಡಿದರೂ ಕ್ಷೇತ್ರದಲ್ಲಿ ನಾನು ಗೆಲ್ಲುವುದು ಶತಸಿದ್ಧ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದರು. ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಪೂಜೆಗೆಂದು ಹೋದ ಸಂದರ್ಭದಲ್ಲಿ ಉಂಟಾದ ಕಲ್ಲು ತೂರಾಟಕ್ಕೆ ಕಾಂಗ್ರೆಸ್‌ನ ಕೆಲ ಕಿಡಿಗೇಡಿಗಳ ಕುಮ್ಮಕ್ಕು ಕಾರಣವಾಗಿದೆ.

Advertisement

ವರಿಷ್ಠರ ತೀರ್ಮಾನದಂತೆ ನಾನು ಅಭ್ಯರ್ಥಿಯಾಗಿದ್ದೇನೆ. ಯಾರು ಎಷ್ಟೇ ಗಲಭೆಗಳನ್ನು ನಡೆಸಿದರೂ ಜನರ ಅಪಾರ ಬೆಂಬಲ ದೊರೆಯುತ್ತಿದ್ದು, ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು. ಚಿತ್ರದುರ್ಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಪಕ್ಷದ ವರಿಷ್ಠರು ಈ ಕ್ಷೇತ್ರದಲ್ಲಿ ನನ್ನನ್ನ ಅಭ್ಯರ್ಥಿಯನ್ನಾಗಿಸಿ ಆದೇಶ ನೀಡಿದ್ದಾರೆ. ಅವರ ಅಣತಿಯಂತೆ ನಾನು ಸ್ಫರ್ಧಿಸಲಿದ್ದೇನೆ. ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ಈ ಭಾಗದ ಹಿಂದುಳಿದ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಲು ನೆರವಾಗುತ್ತದೆ. ಕಲ್ಲು ತೂರಿರುವ ನನ್ನ ಬಂಧುಗಳು ಚುನಾವಣೆಯಲ್ಲಿ ನನ್ನ ಕೈ
ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ. ಈ ವಿಚಾರವಾಗಿ ಯಾರನ್ನೂ ದೂರುವುದಿಲ್ಲ ಎಂದರು.

ಹಳ್ಳಿಗಳಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಶಾಸಕ ತಿಪ್ಪೇಸ್ವಾಮಿಯವರು ನನ್ನನ್ನು ಹೆದರಿಸುವ ಪ್ರಯತ್ನ ಫಲಿಸುವುದಿಲ್ಲ. ಹಲವಾರು ಚುನಾವಣೆಗಳನ್ನು ಕಂಡಿದ್ದೇನೆ. ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ತಿಪ್ಪೇಸ್ವಾಮಿ ಅವರಿಗೆ ಉತ್ತಮ ಸ್ಥಾನ ನೀಡುವ ಆಲೋಚನೆ ಇತ್ತು. ಆದರೆ, ಇಂದಿನ ಘಟನೆ ಬೇಸರ ತರಿಸಿದೆ. ಮತದಾರರನ್ನು ನಂಬಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದೆ ಶಾಂತಾ, ಜಿಲ್ಲಾಧ್ಯಕ್ಷ ನವೀನ್‌, ಜಿಪಂ ಮಾಜಿ ಸದಸ್ಯ ಎಚ್‌.ಟಿ. ನಾಗರೆಡ್ಡಿ, ಮಂಡಲಾಧ್ಯಕ್ಷರಾದ ಟಿ. ರೇವಣ್ಣ, ಎಂ.ವೈ.ಟಿ ಸ್ವಾಮಿ ಇದ್ದರು.

ಶ್ರೀರಾಮುಲುಗೆ ಮುತ್ತಿಗೆ:24 ಜನರ ವಿರುದ್ಧ ಕೇಸು
ನಾಯಕನಹಟ್ಟಿ:
ಇಲ್ಲಿಯ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಭೇಟಿ ನೀಡಿದ ಸಂದರ್ಭ ಉಂಟಾದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕನಹಟ್ಟಿ ಪಪಂ ಬೋಸೇದೇರವಹಟ್ಟಿಯ 15ನೇ ವಾರ್ಡ್‌ ಸದಸ್ಯ ಎಸ್‌.ಪಿ. ನಾಗರಾಜ್‌ ಹಾಗೂ ಇತರ 23 ಜನರ ವಿರುದ್ಧ ಪೊಲೀಸರು ದೊಂಬಿ, ಕರ್ತವ್ಯಕ್ಕೆ ಅಡ್ಡಿ, ಆಸ್ತಿ ಹಾನಿ, ಬೆದರಿಕೆ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ.

ಶ್ರೀರಾಮುಲು ಅವರ ಕಾರಿನ ಮೇಲೆ ಕಲ್ಲೆಸೆದು, ಗಾಜು ಜಖಂಗೊಳಿಸಲಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಗಳಾದ ನಿರ್ಮಲಾ, ಪಿ.ಸಿ.ರೇಖಾರಾಣಿ, ಅನಿತಾ, ಲೋಕಮಾತೆ ಅವರು ಗಾಯಗೊಂಡಿದ್ದಾರೆ. ದೃಶ್ಯ ಮಾಧ್ಯಮದ ಕ್ಯಾಮೆರಾಮ್ಯಾನ್‌ ಶಿವರಾಜ್‌ ಅವರ ಬೆನ್ನಿಗೂ ಇಟ್ಟಿಗೆ ಬಿದ್ದು ಗಾಯಗೊಂಡಿದ್ದಾರೆ. ಈ ಎಲ್ಲ ಕೃತ್ಯಗಳಿಗೆ ಗುಂಪು ಕಟ್ಟಿಕೊಂಡು ದೊಂಬಿ ನಡೆಸಿದ್ದಾರೆಂದು ದೂರು ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next