ಮೈಸೂರು: ಇಂದಿನ ಕಾನೂನುಗಳು ಎರಡು ತಲೆಯ ಹಾವಿನಂತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ಕೆಲಸಗಳು ನಡೆಯುತ್ತಿವೆ ಎಂದು ಚಿಂತಕಿ ಡಾ.ವಿನಯಾ ಒಕ್ಕುಂದ ಹೇಳಿದ್ದಾರೆ.
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ -ಸಮಕಾಲೀನ ಸಂದರ್ಭ: ಬಹುತ್ವದ ಸವಾಲುಗಳು- ಗೋಷ್ಠಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟುಗಳು ವಿಷಯ ಕುರಿತು ವಿಚಾರ ಮಂಡಿಸಿದ ಅವರು, ನಮ್ಮ ದೇಶದ ಕಾನೂನಿನ ಹಿನ್ನೆಲೆಯೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸಬಹುದಾದ ಅಂಶಗಳು ಇವೆ. ಅನ್ನವನ್ನು ಕಸಿಯುವುದಕ್ಕಿಂತ ಘೋರವಾಗಿ ಆಲೋಚನೆಗಳನ್ನು ಕಸಿಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಪರ್ಯಾಸ: ತಮಿಳುನಾಡಿನಲ್ಲಿ ವ್ಯಂಗ್ಯ ಚಿತ್ರಕಾರನೊಬ್ಬ ಅಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಟುಂಬವೊಂದು ನ್ಯಾಯ ಒದಗಿಸುವಂತೆ ಆತ್ಮಹತ್ಯೆ ಮಾಡಿಕೊಂಡ ಅಮಾನ ವೀಯ ಘಟನೆ ಕುರಿತು ವ್ಯಂಗ್ಯಚಿತ್ರವೊಂದನ್ನು ಬರೆದಿ ದ್ದರು. ಅಲ್ಲಿನ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಬೆತ್ತಲಾದ ತಮ್ಮ ಮೈಯ್ಯನ್ನು ಹಣದಿಂದ ಮುಚ್ಚಿಕೊಳ್ಳುತ್ತಿರುವಂತೆ ಮತ್ತು ಅವರ ಮಧ್ಯದಲ್ಲಿ ಮಗುವೊಂದು ಬೆಂಕಿಯಲ್ಲಿ ಸುಡುತ್ತಿರುವ ವ್ಯಂಗ್ಯಚಿತ್ರ ಬರೆದಿದ್ದರು. ಇದನ್ನು ಅಪರಾಧವೆಂದು ಅಲ್ಲಿನ ಸರ್ಕಾರ ಆತನ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿತು. ಅದೇ ಮಾದರಿಯಲ್ಲಿ ಪದ್ಮಾವತಿ ಚಲನಚಿತ್ರದ ನಿರ್ದೇಶಕ ಮತ್ತು ಆ ಚಿತ್ರದಲ್ಲಿ ನಟಿಸಿದ ಚಿತ್ರನಟಿ ತಲೆ ಕಡಿದವರಿಗೆ ಲಕ್ಷಾಂತರ ರೂ.ನೀಡುತ್ತೇವೆ ಎನ್ನುವ ಸಾಂಸ್ಕೃತಿಕ ಭಯೋತ್ಪಾದನೆಗೆ ಮುಂದಾಗಿರುವುದು ವಿಪರ್ಯಾಸ ಎಂದರು.
ಬಹುತ್ವ: ಇಂದು ಬದುಕುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ಪರಿಸ್ಥಿತಿಯೊಳಗೆ. ಇದನ್ನು ಸಾಂಸ್ಕೃತಿಕ ಭಯೋತ್ಪಾದನೆ ಎಂದರೂ ಅತಿಶಯೋಕ್ತಿಯಲ್ಲ. ಆದರೆ ಇಂದಿಗೂ ನಮ್ಮ ಹಕ್ಕು ಜೀವಂತವಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಮೈಸೂರಿನಲ್ಲಿ ಬಹುತ್ವದ ಚರ್ಚೆ ನಡೆದಿದ್ದರೆ, ಉಡುಪಿಯಲ್ಲಿ ಹಿಂದುತ್ವದ ಚರ್ಚೆ ನಡೆದಿದೆ. ದಲಿತರು, ಶೋಷಿತರು, ಮಹಿಳೆಯರೂ ಒಳಗೊಂಡಂತೆ ಪ್ರತಿಯೊಬ್ಬರ ಭಾವನೆ, ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸಲು ಸಾಧ್ಯವಿಲ್ಲದ ಸ್ಥಿತಿ ಬೇಕೋ, ಇಲ್ಲವೇ ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವಂಥ ಬಹುತ್ವ ಬೇಕೋ ಎಂಬುದರ ಆಯ್ಕೆ ಎಲ್ಲರ ಮುಂದಿದೆ ಎಂದು ಹೇಳಿದರು.
ಸಂಪತ್ ತರೀಕೆರೆ