ಕಾರ್ಕಳ: ಮನೆಯ ಕನಸು ಹೊತ್ತು ಮನೆ ನಿರ್ಮಾಣ ಮಾಡಲು ಮುಂದಾದ ಕುಟುಂಬಗಳು ಮರಳು ದೊರೆಯದೇ ಕಾಮಗಾರಿಯನ್ನು ನಿಲ್ಲಿಸುವಂತ ದುಃಸ್ಥಿತಿ ಕಾರ್ಕಳದಲ್ಲಿದೆ. ಸರಕಾರದ ವಸತಿ ಯೋಜನೆಯಡಿ ಮಂಜೂರಾದ ಬಹುತೇಕ ಮನೆಗಳ ಕಾಮಗಾರಿ ಅತಂತ್ರ ಸ್ಥಿತಿಯಲ್ಲಿದೆ. 2017-18ರಲ್ಲಿ ಕಾರ್ಕಳ ತಾಲೂಕಿನಲ್ಲಿ ಸರಕಾರದಿಂದ ಮಂಜೂರಾತಿ ಪಡೆದ 1080 ಮನೆಗಳಲ್ಲಿ ಕೇವಲ 406 ಮನೆ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. 405 ಮನೆಗಳ ಕಾಮಗಾರಿ ವಿವಿಧ ಹಂತದಲ್ಲಿದ್ದು, 269 ಮನೆ ಕಾಮಗಾರಿಗೆ ಚಾಲನೆಯೇ ದೊರಕಿಲ್ಲ. ಇದಕ್ಕೆ ಪ್ರಮುಖ ಕಾರಣ ಮರಳಿನ ಅಭಾವ ಎನ್ನಲಾಗುತ್ತಿದೆ.
ಕೆಲಸ ನಡೆಯುತ್ತಿಲ್ಲ
ಮನೆ ನಿರ್ಮಾಣ ಸೇರಿದಂತೆ ಮರಳಿಲ್ಲದೇ ಯಾವೊಂದು ಕೆಲಸ ಕಾರ್ಯಗಳೂ ಆಗುತ್ತಿಲ್ಲ. ಹೊಸ ಮನೆ ಕಟ್ಟುವ ಕನಸು ಕಾಣುತ್ತಿರುವ ಕುಟುಂಬ ಮರಳಿನ ಅಭಾವವನ್ನು ನೆನೆದು ಸುಮ್ಮನಿರುವಂತೆ ಮಾಡಿದೆ. ಶಿಥಿಲಗೊಂಡ ಮನೆಯವರು ಗಾಳಿ ಮಳೆಗೆ ಅದೇ ಮನೆಯಲ್ಲಿ ಜೀವನ ದೂಡುವಂತಾಗಿದೆ. ಆಶ್ರಯ ಯೋಜನೆಗಳಲ್ಲಿ ಮನೆ ನಿರ್ಮಾಣಕ್ಕೆ ಆದೇಶ ಪ್ರತಿ ತಗೊಂಡವರಿಗೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗದೇ ಅನುದಾನ ವಾಪಾಸಾಗುವ ಆತಂಕದಲ್ಲಿದ್ದಾರೆ.
ಕಾರ್ಮಿಕರಿಗೂ ಕಷ್ಟ
ಮರಳಿನ ಕೊರತೆಯಿಂದ ಕಾರ್ಮಿಕರು ಉದ್ಯೋಗವಿಲ್ಲದೇ ಅವರ ಬದುಕನ್ನು ಸಂಕಷ್ಟಕ್ಕೆ ದೂಡಿದೆ. ಮರಳಿನ ಕುರಿತಂತೆ ಸ್ಪಷ್ಟ ನಿಯಮ ರೂಪಿಸುವಲ್ಲಿ ಜಿಲ್ಲಾಡಳಿತ, ಸರಕಾರಗಳು ವಿಫಲವಾಗಿವೆ. ನಿಯಮ ಸಡಿಲಗೊಳಿಸುವಂತೆ, ಸಾಗಾಟದ ನಿರ್ಬಂಧ ತೆರವಿಗೆ ಆಗ್ರಹಿಸಿ ಇತ್ತೀಚೆಗೆ ಕಾರ್ಕಳದಲ್ಲಿ ಪ್ರತಿಭಟನೆ ನಡೆಯಿತು. ಚುನಾವಣೆ ಬಹಿಷ್ಕಾರದ ಮಾತುಗಳೂ ಇತ್ತು. ಆದರೆ ಇವ್ಯಾವುದು ಸಂಬಂಧಪಟ್ಟವರಿಗೆ ಕೇಳಿಸಲಿಲ್ಲ.
ಸರಕಾರಿ ಕಾಮಗಾರಿಗೂ ತಡೆ
ಮನೆ, ಕಟ್ಟಡ ನಿರ್ಮಾಣಕ್ಕೆ ಮಾತ್ರ ಸಮಸ್ಯೆಯಲ್ಲದೇ ಸರಕಾರದ ಕಾಮಗಾರಿಗೂ ಮರಳಿನ ಕೊರತೆಯ ಬಿಸಿ ತಟ್ಟಿದೆ.
ಕಾರ್ಕಳದಲ್ಲಿ ಲೋಕೋಪಯೋಗಿ, ಸಿಆರ್‌ಎಫ್ ಸೇರಿದಂತೆ ವಿವಿಧ ಯೋಜನೆಗಳಡಿ ಮಂಜೂರಾದ ಸುಮಾರು 20 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆೆ. ಕಾರ್ಕಳ ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಪೊಲೀಸ್ ವಸತಿ ಗೃಹ, ವಿದ್ಯಾರ್ಥಿನಿಲಯ, ಶಾಲಾ ಕಟ್ಟಡಗಳು, ಪಂಚಾಯತ್ ಕಟ್ಟಡಗಳಿಗೂ ಮರಳಿನ ಅಭಾವ ಅಧಿಕವಾಗಿ ಬಾಧಿಸಿದೆ.
ಎಂ. ಸ್ಯಾಂಡ್‌ಗಿಲ್ಲ ಬೇಡಿಕೆ
ಎಂ. ಸ್ಯಾಂಡ್ ಮರಳಿಗೆ ಪರ್ಯಾಯವಾಗಿ ಬಳಕೆಯಾಗುತ್ತಿದ್ದರೂ ಅದನ್ನು ಬಳಕೆ ಮಾಡುವವರ ಸಂಖ್ಯೆ ವಿರಳ.
ಸರಕಾರಿ ಎಂಜಿನಿಯರ್‌ಗಳೇ ಎಂ. ಸ್ಯಾಂಡ್ ಅಳವಡಿಕೆಗೆ ಮಾನ್ಯತೆ ನೀಡುತ್ತಿಲ್ಲ ಎಂದು ಗುತ್ತಿಗೆದಾರರೋರ್ವರು ಹೇಳುತ್ತಾರೆ. ಎಂ.ಸ್ಯಾಂಡ್ ಧೂಳಿನಂತಿದ್ದು, ಅದರ ಗುಣಮಟ್ಟವೂ ಚೆನ್ನಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.