Advertisement

ರಚನಾತ್ಮಕ ಟೀಕೆಗೆ ಸ್ವಾಗತ : ಮನ್‌ ಕಿ ಬಾತ್‌ನಲ್ಲಿ ಮೋದಿ

10:23 AM May 29, 2017 | Team Udayavani |

ಹೊಸದಿಲ್ಲಿ: ‘ನಾವು ಮಾಡಿರುವ ಕೆಲಸಗಳನ್ನು ಜನರು ಅಭೂತಪೂರ್ವವಾಗಿ ವಿಶ್ಲೇಷಿಸುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ಏಕೆಂದರೆ, ರಚನಾತ್ಮಕ ಟೀಕೆಯು ಪ್ರಜಾಸತ್ತೆ ಯನ್ನು ಬಲಿಷ್ಠಗೊಳಿಸುತ್ತದೆ.’ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತಿದು.  ಕೇಂದ್ರ ಸರಕಾರವು 3 ವರ್ಷಗಳನ್ನು ಪೂರೈಸಿದ ನಂತರದ ಮೊದಲ ‘ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, ಮೊದಲಿಗೆ ಮುಸ್ಲಿಮರ ಪವಿತ್ರ ಮಾಸ ರಂಜಾನ್‌ ಆರಂಭಗೊಂಡ ಹಿನ್ನೆಲೆಯಲ್ಲಿ ದೇಶದ ಜನತೆಗೆ ಶುಭ ಕೋರಿದರು.

Advertisement

ನಮ್ಮ ದೇಶವು ಎಲ್ಲ ನಂಬಿಕೆಗಳು ಹಾಗೂ ಸಮುದಾಯಗಳ ಜನರನ್ನು ಹೊಂದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ರಮ್ಜಾನ್‌ ಮಾಸವು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲಿ ಎಂದು ಪ್ರಾರ್ಥಿಸುವುದಾಗಿ ಅವರು ಹೇಳಿದರು. ಭಾರತದಲ್ಲಿ ವಿಗ್ರಹಪೂಜೆಯನ್ನು ನಂಬುವವರು ಮತ್ತು ಅದನ್ನು ವಿರೋಧಿಸುವವರು ಜತೆಯಾಗಿ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಕೊನೆಯದಾಗಿ, ಎಲ್ಲ ಧರ್ಮಗಳು, ನಂಬಿಕೆಗಳು, ಸಿದ್ಧಾಂತಗಳು ಅಥವಾ ಸಂಪ್ರದಾಯಗಳು ನೀಡುವ ಸಂದೇಶವೊಂದೇ- ಅದು ಶಾಂತಿ, ಒಗ್ಗಟ್ಟು ಮತ್ತು ಸದ್ಭಾವನೆ ಎಂದು ಹೇಳಿದರು ಮೋದಿ.

ಸ್ವಚ್ಛತೆಯು ಸಾಮೂಹಿಕ ಚಳವಳಿಯಾಗಲಿ: ಎಲ್ಲರೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದೂ ಕರೆ ನೀಡಿದ ಮೋದಿ, ದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಾಮೂಹಿಕ ಚಳವಳಿ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು. ‘ತ್ಯಾಜ್ಯವನ್ನು ಕೇವಲ ‘ಕಸ’ವೆಂದು ನೋಡಬೇಡಿ. ಅದನ್ನು ‘ರಸ’ವೆಂದು ನೋಡಿದರೆ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯ ಐಡಿಯಾಗಳು ಹೊಳೆಯುತ್ತವೆ,’ ಎಂದರು. ಜತೆಗೆ, ಮುಂಬೈನ ವರ್ಸೋವಾ ಬೀಚ್‌ ಅನ್ನು ಸ್ವಚ್ಛಗೊಳಿಸುವ ಕಾರ್ಯಕ್ಕಿಳಿದಿರುವ ಅಫ್ರೋಜ್‌ ಶಾ ಮತ್ತು ತಂಡವನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.


ದಿಲ್ಲಿಯ ಸ್ಲಮ್‌ನಲ್ಲಿ ಮನ್‌ ಕಿ ಬಾತ್‌ ಆಲಿಸುತ್ತಿರುವ ಅಮಿತ್‌ ಶಾ.

ಇದೇ ವೇಳೆ, ಹಿಂದುತ್ವದ ಐಕಾನ್‌ ವಿ.ಡಿ.ಸಾವರ್ಕರ್‌ರ 134ನೇ ಜನ್ಮದಿನದ ಅಂಗವಾಗಿ, ಅವರನ್ನು ಸ್ಮರಿಸಿದ ಮೋದಿ, ಸಾವರ್ಕರ್‌ರಂಥ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂದಿನ ಯುವಜನತೆ ತೋರಿಸುತ್ತಿರುವ ಆಸಕ್ತಿಯು ಶ್ಲಾಘನೀಯ ಎಂದರು. ಯೋಗದ ಮಹತ್ವವನ್ನೂ ಪ್ರಸ್ತಾಪಿಸಿ, ದೇಹದ ಎಲ್ಲ ಇಂದ್ರಿಯಗಳನ್ನು ಸಂಪರ್ಕಿಧಿಸುವಂತೆ, ಜಗತ್ತಿನ ಎಲ್ಲ ಜನರನ್ನೂ ಸಂಪರ್ಕಿಸುವ ಸಾಮರ್ಥ್ಯ ಯೋಗಕ್ಕಿದೆ ಎಂದರು.

Advertisement

ಮನದ ಮಾತಿನಿಂದ ನಿಮ್ಮಲ್ಲಿ ಒಬ್ಬನಾದೆ
2 ವರ್ಷಗಳ ಹಿಂದೆ ಮನ್‌ ಕಿ ಬಾತ್‌ ಕಾರ್ಯಕ್ರಮ ಆರಂಭಿಸಿದಾಗ ನಾನು ಇದನ್ನು ಯಾರೂ ರಾಜಕೀಯ ಕನ್ನಡಕ ಧರಿಸಿ ನೋಡಲಿಕ್ಕಿಲ್ಲ ಎಂದು ಭಾವಿಸಿದ್ದೆ. ಕೆಲವರು ಅದನ್ನು ಮಾಡುತ್ತಿದ್ದಾರೆ. ಆದರೆ, ಮನ್‌ ಕಿ ಬಾತ್‌ ಮೂಲಕ ನಾನು ದೇಶದ ಪ್ರತಿಯೊಂದು ಕುಟುಂಬದಲ್ಲೂ ಒಬ್ಬ ಸದಸ್ಯನಂತಾದೆ. ಕುಟುಂಬ ಸದಸ್ಯರೊಂದಿಗೆ ಎಲ್ಲ ವಿಚಾರಗಳನ್ನು ಮಾತನಾಡುವಂತೆ, ಚರ್ಚಿಸುವಂತೆ ನಾನಿಲ್ಲಿ ನಿಮ್ಮಲ್ಲಿ ಒಬ್ಬ ನಾದೆ ಎಂದೂ ಮೋದಿ ಹೇಳಿದರು. ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಬಿಡುಗಡೆಯಾದ ಮನ್‌ ಕಿ ಬಾತ್‌ ಪುಸ್ತಕಕ್ಕೆ ಒಂದು ರೂಪಾಯಿ ಯನ್ನೂ ಪಡೆಯದೇ ಚಿತ್ರ ಬಿಡಿಸಿಕೊಟ್ಟ ಅಬುಧಾಬಿಯ ಕಲಾವಿದ ಅಕ್ಬರ್‌ ಸಾಬ್‌ಗೆ ಧನ್ಯವಾದ ಹೇಳಬಯಸುತ್ತೇನೆ ಎಂದರು ಪ್ರಧಾನಿ.

Advertisement

Udayavani is now on Telegram. Click here to join our channel and stay updated with the latest news.

Next