ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅಭಿನಯದ “ತ್ರಿವಿಕ್ರಮ’ ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ, ಇದೀಗ ರಾಜಸ್ತಾನದತ್ತ ತನ್ನ ಪಯಣ ಬೆಳೆಸಲು ಸಜ್ಜಾಗಿದ್ದಾನೆ.
ಹೌದು, ಸಹನಾಮೂರ್ತಿ ನಿರ್ದೇಶನದ “ತ್ರಿವಿಕ್ರಮ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಕೊರೆಯುವ ಚಳಿಯ ನಡುವೆಯೂ ಕೊಡಚಾದ್ರಿಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ನಡೆದಿದೆ. ಅತ್ತ ಮಲೆನಾಡಿನ ತೀರ್ಥಹಳ್ಳಿಯ ಜೋರಾಗಿ ಸುರಿಯೋ ಮಳೆಯಲ್ಲೂ ತ್ರಿವಿಕ್ರಮನ ಕಾರುಬಾರು ನಡೆದಿದೆ.
ಇನ್ನು, ಉಡುಪಿ ಹಾಗು ಸಾಗರದಲ್ಲೂ ತ್ರಿವಿಕ್ರಮ ಸುತ್ತಾಡಿ ಬಂದಿದ್ದಾನೆ. ಸದ್ಯಕ್ಕೆ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದಿರುವ ನಿರ್ದೇಶಕ ಸಹನಾಮೂರ್ತಿ, ಡಿಸೆಂಬರ್ ಮೊದಲ ವಾರದಲ್ಲಿ ರಾಜಸ್ತಾನಕ್ಕೆ ತೆರಳಲಿದ್ದಾರೆ.
ಅಂದಹಾಗೆ, ಇದುವರೆಗೆ ಮಾತಿನ ಭಾಗ, ಹಾಡು, ಫೈಟು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. “ತ್ರಿವಿಕ್ರಮ’ ಶುರುವಿಗೆ ಮುನ್ನವೇ ಜೋರು ಸುದ್ದಿ ಮಾಡಿತ್ತು. ಚಿತ್ರದ ಫಸ್ಟ್ ಲುಕ್ ಹೊರ ಬಂದ ದಿನದಿಂದಲೂ ಚಿತ್ರ ಕುತೂಹಲ ಮೂಡಿಸಿತ್ತು. ಆ ಕುತೂಹಲ ಚಿತ್ರದ ಮೋಷನ್ ಪೋಸ್ಟರ್, ಟೀಸರ್‌ನಲ್ಲೂ ಇತ್ತು. ಸದ್ಯಕ್ಕೆ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಚಿತ್ರಕ್ಕೆ ಆಕಾಂಕ್ಷ ಹಾಗು ಅಕ್ಷರಗೌಡ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಪೈಕಿ ಆಕಾಂಕ್ಷ ಮುಂಬೈ ಮೂಲದ ಹುಡುಗಿ. ಇದು ಅವರ ಮೊದಲ ಸಿನಿಮಾ. ಇದೊಂದು ಪಕ್ಕಾ ಲವ್ ಸ್ಟೋರಿ ಹೊಂದಿ ದ್ದು, ತಾಯಿ ಸೆಂಟಿಮೆಂಟ್, ಎಮೋಷನ್ಸ್ ಹಾಗು ಒಂದಷ್ಟು ಗೆಳೆತನ ಇತ್ಯಾದಿ ಅಂಶಗಳು ಚಿತ್ರದಲ್ಲಿವೆ. ನಾಯಕ ವಿಕ್ರಮ್‌ಗೆ ಇಲ್ಲಿ ಹೊಸ ಗೆಟಪ್ ಇರಲಿದ್ದು, ಅದಕ್ಕಾಗಿ
ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ ಎಂಬುದು ನಿರ್ದೇಶಕರ ಮಾತು. ಚಿತ್ರ ದಲ್ಲಿ ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್ ಇತರರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತವಿದೆ.
ಬೆಂಗಳೂರು, ಕೊಡಚಾದ್ರಿ, ತೀರ್ಥಹಳ್ಳಿ, ಉಡುಪಿ, ರಾಜಸ್ತಾನ್ ಹಾಗು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಸೋಮಣ್ಣ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.