ರಮೇಶ್ ಅರವಿಂದ್ ನಾಯಕಾಗಿರುವ “ಶಿವಾಜಿ ಸುರತ್ಕಲ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಕೂಡಾ ಘೋಷಿಸಿತು. ಚಿತ್ರ ಫೆ.21 ರಂದು ತೆರೆಕಾಣುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಕೊಲೆಯ ರಹಸ್ಯವನ್ನು ಹುಡುಕಿ ಹೊರಟ ಚಿತ್ರವಾಗಿದ್ದು, ಪ್ರೇಕ್ಷಕನಿಗೆ ಹೊಸ ಅನುಭವ ನೀಡಲಿದೆ ಎಂಬುದು ಚಿತ್ರತಂಡ ಮಾತು. ರೇಖಾ ಕೆ.ಎನ್ ಹಾಗೂ ಅನುಪ್ ಗೌಡ ರವರು ಈ ಚಿತ್ರವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್‌ನಡಿ ನಿರ್ಮಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಆಕಾಶ್, “ಶಿವಾಜಿ ಅಂದ್ರೇನೆ ಅದೊಂದು ಪವರ್‌ಫುಲ್ ಪದ. ಸುರತ್ಕಲ್ ಅಂದ್ರೆ ಮೆದುಳು ಅಂಥ ಅರ್ಥವಿದೆ. ಇವೆರಡು ಸೇರಿಕೊಂಡು ಒಂದು ಕೊಲೆಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಅನ್ನೋದೆ ಚಿತ್ರದ ಕಥೆಯ ಎಳೆ. ಚಿತ್ರದ ಟೈಟಲ್‌ಗೆ ದಿ ಕೇಸ್ ಆಫ್ ರಣಗಿರಿ ರಹಸ್ಯವೆಂದು ಅಡಬರಹದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದೆ’ ಎನ್ನುತ್ತಾರೆ. ಚಿತ್ರದ ಬಗ್ಗೆ ಮಾತನಾಡುವ ರಮೇಶ್ ಅರವಿಂದ್, “ಈ ಚಿತ್ರ ನನಗೆ ಹೊಸ ಅನುಭವ ನೀಡಿದೆ. ಸುಮಾರು 100ಕ್ಕೂ ಹೆಚ್ಚು ಮಂದಿ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಸಿನಿಮಾ ನೋಡುತ್ತಿದ್ದಂತೆ.
ಕಾದಂಬರಿ ಓದಿದಂತೆ ಭಾಸವಾಗುವ ನಿರೂಪಣಾ ಶೈಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂದರು. ಚಿತ್ರದಲ್ಲಿ ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾಯಕಿಯರಾಗಿ ನಟಿಸಿದ್ದಾರೆ. ರಾಧಿಕಾ ಇಲ್ಲಿ ಲಾಯರ್ ಆದರೆ, ಆರೋಹಿ ವೈದ್ಯೆಯಾಗಿ ನಟಿಸಿದ್ದಾರೆ.
ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗಿತ ನಿರ್ದೇಶನವಿದೆ. ಮೊದಲನೆಯದಾದ “ಉಸಿರೇ’ ಎಂಬ ಹಾಡಿಗೆ ವಿಜಯ್ ಪ್ರಕಾಶ್ ಅವರು ಕಂಠದಾನ ಮಾಡಿದ್ದು, ಜಯಂತ್ ಕಾಯ್ಕಿಣಿ ಅವರು ಸಾಹಿತ್ಯ ರಚಿಸಿದ್ದಾರೆ. ಎರಡನೆಯದಾಗಿ “ಅಪರಿಚಿತ’ ಎಂಬ ಮತ್ತೂಂದು ಹಾಡಿಗೆ ಜಯಂತ್ ಕಾಯ್ಕಿಣಿ ಅವರೇ ಸಾಹಿತ್ಯ ರಚಿಸಿದ್ದು ಇದೊಂದು ಜರ್ನಿ ಹಾಡಾಗಿದ್ದು ಇದಕ್ಕೆ ಶ್ರೇಯಾ ಸುಂದರ್ ಅಯ್ಯರ್ ಅವರು ಕಂಠದಾನ ಮಾಡಿದ್ದಾರೆ. ಮೂರನೆಯ ಹಾಡಾದ “ಯಾರೋ ನೀ ಯಾರೋ’ ಹಾಡಿಗೆ ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರೇ ಸಾಹಿತ್ಯ ರಚಿಸಿದ್ದಾರೆ. ಈ ಹಾಡನ್ನು ಜೂಡಾ ಸ್ಯಾಂಡಿ ಹಾಗೂ ಸಂಜಿತ್ ಹೆಗ್ಡೆ ಇಬ್ಬರು ಸೇರಿ ಹಾಡಿದ್ದಾರೆ. ಚಿತ್ರರದಲ್ಲಿ ಅವಿನಾಶ್,ರಮೇಶ್ ಪಂಡಿತ್, ಪಿಡಿ ಸತೀಶ್, ರಾಘು ರಮಣಕೊಪ್ಪ ನಟಿಸಿದ್ದಾರೆ.