Advertisement
ಇಲ್ಲಿನ ನೀರಿನ ಸಮಸ್ಯೆಯನ್ನು ಮನಗಂಡು ಬಾರ್ಯ ಗ್ರಾಮದಲ್ಲಿರುವ ನೇತ್ರಾವತಿ ನದಿಯಿಂದ ಕುಡಿಯುವ ನೀರು ಪೂರೈಸಲು ಜಿಲ್ಲಾ ಪಂಚಾಯತ್‌ನಿಂದ ಸುಮಾರು 30 ಲ.ರೂ. ಅನುದಾನ ಮಂಜೂರುಗೊಂಡಿತು. ಬಾರ್ಯ ಗ್ರಾಮ ದ ಅಜಿರ ಕೆಳೆಂಜಿಬಾಗಿಲು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಬೃಹತ್ ಜಾಕ್‌ವೆಲ್ ನಿರ್ಮಿಸಿ ಅದರಲ್ಲಿ ಒರತೆಯ ಮೂಲಕ ನೀರನ್ನು ಶೇಖರಿಸಿ, ಆ ನೀರನ್ನು 15 ಎಚ್‌ಪಿ ಪಂಪ್‌ನಿಂದ ಮೇಲೆತ್ತಿ ಎರಡೂವರೆ ಇಂಚಿನ ಪೈಪ್‌ನ ಮೂಲಕ 1.5 ಕಿ.ಮೀ. ದೂರದ ಮುಜ್ಜಾಲೆಗುಡ್ಡದಲ್ಲಿರುವ 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಲ್ಲಿ ಸಂಗ್ರಹಿಸಿ, ಬಳಿಕ ಈ ನೀರನ್ನು ಮುಗ್ಗ ಮತ್ತು ದೈಪಿಲಗಳಿಗೆ ಹರಿಸುವುದೇ ಈ ಯೋಜನೆಯ ಉದ್ದೇಶ. 2014-15ನೇ ಸಾಲಿನಲ್ಲಿ ಇದರ ಶಿಲಾನ್ಯಾಸವೂ ನಡೆದು, ಕಾಮಗಾರಿ ಆರಂಭವಾಯಿತು. ಆದರೆ ಕಾಮಗಾರಿ ಆಮೆ ನಡಿಗೆ ಯಲ್ಲಿ ಸಾಗಿ ಇದು ಪೂರ್ಣಗೊಳ್ಳಲು ಮೂರು ವರ್ಷಗಳೇ ಹಿಡಿದವು. ಆದರೂ ಪೂರ್ಣಗೊಂಡ ಈ ಯೋಜನೆಯಿಂದ ಮುಗ್ಗ ದೈಪಿಲ ಹಾಗೂ ಕಲ್ಲಾಪು ಪ್ರದೇಶಗಳಿಗೆ ನೀರು ಹರಿಸಲು ಮಾತ್ರ ಸಾಧ್ಯವಾಗಿಲ್ಲ.
ಈ ಬಗ್ಗೆ ‘ಉದಯವಾಣಿ’ಯೊಂದಿಗೆ ಮಾತನಾಡಿದ ತಣ್ಣೀರುಪಂಥ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್, ಪ್ರತಿವರ್ಷ ಮುಗ್ಗ ದೈಪಿಲ ಹಾಗೂ ಕಲ್ಲಾಪು ಪ್ರದೇಶಗಳಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುತ್ತದೆ. ಇಲ್ಲಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ. ಇದಕ್ಕೊಂದು ಅಂತ್ಯ ಹಾಡುವ ನಿಟ್ಟಿನಲ್ಲಿ 2014-15ನೇ ಸಾಲಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯೊಂದಕ್ಕೆ ಚಾಲನೆ ನೀಡಲಾಯಿತು. ಆದರೆ ಅದು ಪೂರ್ಣಗೊಂಡು ಕೆಲವು ವರ್ಷವಾದರೂ, ನೀರು ಹರಿಸಲು ಸಾಧ್ಯವಾಗಿಲ್ಲ. ಕಳೆದ ಬಾರಿಯ ಬೇಸಗೆಯಲ್ಲಿ ನೀರು ಹರಿಸಲು ಮುಂದಾದಾಗ ಪೈಪ್‌ಗ್ಳು ಒಡೆದು ಸಮಸ್ಯೆಯಾಯಿತು. ಅಡೆತಡೆಗಳು ಎದುರಾಗುತ್ತಿರುವುದರಿಂದ ಈ ಭಾಗದವರ ನೀರಿನ ಬವಣೆಗೆ ಇತಿಶ್ರೀ ಹಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚೆನ್ನಪ್ಪ ಮೊಯ್ಲಿ ಪ್ರತಿಕ್ರಿಯಿಸಿ, ಕೆಲವೊಂದು ತಾಂತ್ರಿಕ ತೊಂದರೆಗಳಿಂದ ನೀರು ಹರಿಸಲು ವಿಳಂಬವಾಗಿದೆ. ಇದಕ್ಕೆ ಎಚ್‌ಡಿ ಪೈಪ್ ಅಳವಡಿಸಲಾಗಿದ್ದು, ಅದು ಲಾರಿ ಮತ್ತಿತರ ಘನ ವಾಹನಗಳು ಸಂಚರಿಸಿ ಒಡೆದು ಹೋಗಿವೆ, ಮತ್ತೂಂದು ಕಡೆ ಇದರ ವಿದ್ಯುತ್ ಪರಿವರ್ತಕ ಸುಟ್ಟುಹೋಗಿತ್ತು. ಬಳಸದೆ ಪಂಪ್ ದುರಸ್ತಿಗೆ ಬಂದಿತ್ತು. ತಾನು ಕರ್ತವ್ಯ ವಹಿಸಿಕೊಂಡು ಎರಡೂವರೆ ತಿಂಗಳಷ್ಟೇ ಆಗಿದ್ದು, ಶೀಘ್ರವಾಗಿ ಆ ಭಾಗಕ್ಕೆ ನೀರು ಕೊಡಲು ಪ್ರಯತ್ನ ಪಡುತ್ತೇನೆ. ಅಂತಿಮ ದುರಸ್ತಿಗಳು ಮಾತ್ರ ಬಾಕಿಯಿದ್ದು, ವಾರದೊಳಗೆ ಎಲ್ಲ ಕೆಲಸಗಳು ಮುಗಿದು ಈ ಭಾಗಕ್ಕೆ ನೀರು ಬರಲಿದೆ ಎಂದರು.