Advertisement

ಅಪ್ಪ-ಮಗ ಸೇರಿ ಮೂವರ ಸೆರೆ: ಅರ್ಧ ಕೆಜಿ ಚಿನ್ನಾಭರಣ ಜಪ್ತಿ

10:31 AM Dec 11, 2018 | Team Udayavani |

ಕಲಬುರಗಿ: ಜಿಲ್ಲಾ ಪೊಲೀಸರ ವಿಶೇಷ ತಂಡ ಮೂವರು ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸಿ, 15 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ. ಶಿಕಾರಿ ಸರದಾರ ಆಲಿಯಾಸ್‌ ಕಲ್ಯಾ ಚವ್ಹಾಣ, ಈತನ ಮಗ ಶಿಕಾರಿ ಮದಲೇತಿ ಮತ್ತು ಶಿಕಾರಿ
ಸಂಧು ಆಲಿಯಾಸ್‌ ಸಪ್ರು ಎಂಬುವವರೇ ಬಂಧಿತರು.

Advertisement

ಇದರಲ್ಲಿ ಈಗಾಗಲೇ ಶಿಕಾರಿ ಮದಲೇತಿ ಹಾಗೂ ಶಿಕಾರಿ ಸಂಧುನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟು ಐದು ಕಳ್ಳತನದ ಪ್ರಕರಣಗಳಿಗೆ ಸೇರಿದ 500 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮೀಣ ಉಪ ವಿಭಾಗದ ಪೊಲೀಸರು ಮೂವರು ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಖದೀಮರು ನಗರ ಸೇರಿದಂತೆ ರಾಯಚೂರು, ಬಳ್ಳಾರಿ ಜಿಲ್ಲೆ ಮತ್ತು ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದರು. ಹೆಚ್ಚಾಗಿ ಗಡಿ ಭಾಗದ ಅನಂತಪುರಂ ಹಾಗೂ ಗುಂತಕಲ್‌ನಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿಸಿದರು.

ಕಳೆದ ಜುಲೈ 17ರಂದು ನಗರದ ರೇವಣಸಿದ್ಧೇಶ್ವರ ಕಾಲೋನಿ ನಿವಾಸಿ ಧನಂಜಯ ಬಿರಾದಾರ ಎಂಬುವರ ಮನೆಯಲ್ಲಿ 3.50 ಲಕ್ಷ ರೂ. ಮೌಲ್ಯದ 140 ಗ್ರಾಂ. ಚಿನ್ನಾಭರಣ ಕಳ್ಳತನ ಮಾಡಿದ್ದರು. ಈ ಬಗ್ಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಹಗಲು ಮತ್ತು ರಾತ್ರಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು ಎಂದು ತಿಳಿಸಿದರು.

ಮೊದಲು ಸೂಪರ್‌ ಮಾರ್ಕೆಟ್‌ ನಿವಾಸಿ ಶಿಕಾರಿ ಮದಲೇತಿ ಮತ್ತು ಗುಂತಕಲ್‌ನ ಶಿಕಾರಿ ಕಾಲೋನಿ ನಿವಾಸಿ ಶಿಕಾರಿ ಸಂಧು ಅಲಿಯಾಸ್‌ ಸಪ್ರುವನ್ನು ವಶಕ್ಕೆ ಪಡೆದು ವಿಚಾರಣೆಗೊಳಿಸಿದಾಗ ರೇವಣಸಿದ್ಧೇಶ್ವರ ಕಾಲೋನಿ ಹಾಗೂ ಡಬರಾಬಾದ್‌ ಕ್ರಾಸ್‌ ಹತ್ತಿರ ಹಾಗೂ ಹೊರ ರಾಜ್ಯಗಳಲ್ಲಿ ಕಳ್ಳತನ ನಡೆದ ಬಗ್ಗೆ ಬಾಯ್ಬಿಟ್ಟಿದ್ದಾರೆ.

Advertisement

ಇದೇ ವೇಳೆ ತಲೆಮರೆಸಿಕೊಂಡಿದ್ದ ಮತ್ತೂಬ್ಬ ಆರೋಪಿಯಾದ ಶಿಕಾರಿ ಸರದಾರ ಕುರಿತು ಮಾಹಿತಿ ನೀಡಿದ್ದರು. ಡಿ. 5ರಂದು ಸೂಪರ್‌ ಮಾರ್ಕೆಟ್‌ನಲ್ಲಿ ಶಿಕಾರಿ ಸರದಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನಷ್ಟು ಕಳ್ಳತನ ಪ್ರಕರಣಗಳನ್ನು ಮೂವರು ಸೇರಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಇವರೆಲ್ಲ ನಿತ್ಯ ಕೂದಲು ಕೊಳ್ಳುವುದು, ಮನೆಗೆಲಸ ಮಾಡುವುದಾಗಿ ಹೋಗಿ ಮನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಲ್ಲದೇ, ತುಂಬಾ ದಿನದಿಂದ ಮನೆಗಳಿಗೆ ಬಾಗಿಲು ಹಾಕಿದ್ದನ್ನು ಗಮನಿಸಿ ಹಗಲು, ರಾತ್ರಿ ಎನ್ನದೆ ಕಳ್ಳತನ ಮಾಡುತ್ತಿದ್ದರು ಎಂದು ವಿವರಿಸಿದರು.

ಜಾನುವಾರುಗಳ ಕಳ್ಳತನ ವಿಷಯದ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ, ಅಕ್ರಮವಾಗಿ ಜಾನುವಾರುಗಳ ಸಾಗಾಟ ಪ್ರಕರಣವೊಂದರಲ್ಲಿ 14 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಜಾನುವಾರುಗಳ ಕಳ್ಳತನ ತಡೆಯುವ ನಿಟ್ಟಿನಲ್ಲಿ ಕಮಲಾಪುರ ಬಳಿ ಚೆಕ್‌ ಪೋಸ್ಟ್‌ ಸ್ಥಾಪಿಸಲು
ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು. 

ಎಸ್‌ಪಿ, ಗ್ರಾಮೀಣ ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ಕಮಲಾಪುರ ಪಿಎಸ್‌ಐ ಶಿವಶಂಕರ, ಜೇವರ್ಗಿ ಪಿಎಸ್‌ಐ ರೇವಣಸಿದ್ಧಪ್ಪ ಮತ್ತು ಸಿಬ್ಬಂದಿ ಹುಸೇನ್‌ ಬಾಷಾ, ದತ್ತಾತ್ರೇಯ, ರಾಜಕುಮಾರ, ಕೇಶವ, ಕುಷಣ್ಣ, ಅಂಬಾಜಿ, ಶಾಂತಕುಮಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ಗ್ರಾಮೀಣ ಡಿವೈಎಸ್‌ಪಿ ಎಸ್‌.ಎಸ್‌.ಹುಲ್ಲೂರ ಸುದ್ದಿಗೋಷ್ಠಿಯಲ್ಲಿದ್ದರು.

ಕಳ್ಳರಿಂದ ಎಚ್ಚರವಾಗಿರಿ: ಎಸ್‌ಪಿ ಮನವಿ ಕಳ್ಳತನ ಪ್ರಕರಣಗಳನ್ನು ತಪ್ಪಿಸಲು ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿರಬೇಕು. ಸಂಶಯಾಸ್ಪದವಾಗಿ ಓಡಾಡುತ್ತಿರುವವರ ಬಗ್ಗೆ ಎಚ್ಚರ ವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು. ಎರಡೂಮೂರು ದಿನಗಳ ಕಾಲ ಊರುಗಳಿಗೆ ತೆರಳಿದಾಗ ರಾತ್ರಿ ವೇಳೆ ಮನೆಯಲ್ಲಿ ಸಂಬಂಧಿಕರನ್ನು ಮಲಗಲು ಹೇಳಬೇಕು. ಹಣ ಮತ್ತು ಚಿನ್ನಾಭರಣವನ್ನು ಮನೆಯಲ್ಲಿ ಇಡಬಾರದು. ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಉತ್ತಮ ಎಂದು ಎಸ್‌ಪಿ ಶಶಿಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next