ಮಂತ್ರಿ, ಸೈನಿಕರೊಂದಿಗೆ ಗುರು ಮಹಂತರ ಡೇರೆಗೆ ಹೋಗಿ, ರಾಜ ಗುರುಗಳನ್ನು ಆಸ್ಥಾನಕ್ಕೆ ಆಹ್ವಾನಿಸಿರುವ ಸಂಗತಿ ತಿಳಿಸಿದ. ಮಹಂತರು “ತನ್ನನ್ನು ನೋಡುವ ಇಚ್ಛೆಯಿದ್ದರೆ ರಾಜನನ್ನೇ ಇಲ್ಲಿಗೇ ಬರಲು ಹೇಳಿ’ ಎಂದರು.
ಕಂಪಲಾಪುರ ಎಂಬ ರಾಜ್ಯವನ್ನು ವೀರಸಿಂಹ ಎಂಬ ರಾಜನು ಆಳುತ್ತಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಇದೇ ಸಮಯದಲ್ಲಿ ರಾಜನ ಓರ್ವ ಸಣ್ಣವಯಸ್ಸಿನವಳೂ, ಸುಂದರಿಯೂ ಆದ ರಾಣಿ ಆಕಸ್ಮಿಕವಾಗಿ ತೀರಿಕೊಂಡುಬಿಟ್ಟಳು. ರಾಜನಿಗೆ ತುಂಬ ದುಃಖವಾಯಿತು. ಇದರಿಂದ ಹೊರಬರಬೇಕೆಂದರೆ ತಾನು ಜ್ಞಾನಿಯಾಗಬೇಕು ಮತ್ತು ರಾಜ್ಯಭಾರ ಮಾಡುತ್ತಲೇ ತಪಸ್ಸು ಮಾಡುತ್ತ ಮಾನವ ಜನುಮದ ಸಾಫಲ್ಯವನ್ನು ಕಾಣಬೇಕು ಎಂಬ ಇಚ್ಛೆಯುಂಟಾಯಿತು. ಅದಕ್ಕಾಗಿ ಓರ್ವ ಶ್ರೇಷ್ಠ ಗುರುವಿನ ಹುಡುಕಾಟದಲ್ಲಿ ಅವನು ತೊಡಗಿದ.
ಹೀಗಿರುವಾಗಲೇ ರಾಜ್ಯದ ಹೊರವಲಯದಲ್ಲಿ ಶಿವರಾಜ ಮಹಂತ ಎಂಬ ಒಬ್ಬ ಸಂತರು ಬೀಡುಬಿಟ್ಟಿರುವ ಸಂಗತಿ ಅವನ ಕಿವಿಗೆ ಬಿತ್ತು. ಕೂಡಲೆ ರಾಜನು ಅವರನ್ನು ಆಸ್ಥಾನಕ್ಕೆ ಕರೆತರುವಂತೆ ಮಂತ್ರಿಯನ್ನು ಕಳುಹಿಸಿದ. ಮಂತ್ರಿ ಸೈನಿಕರೊಂದಿಗೆ ಮಹಂತರ ಡೇರೆಗೆ ಹೋಗಿ ನಮಸ್ಕಾರ ಮಾಡಿ ರಾಜನ ಕೋರಿಕೆಯನ್ನು ತಿಳಿಸಿದ. ಮಹಂತರು “ತನ್ನನ್ನು ನೋಡುವ ಇಚ್ಛೆಯಿದ್ದರೆ ರಾಜನನ್ನು ಇಲ್ಲಿಗೇ ಬರಲು ಹೇಳಿ’ ಎಂದು ಹೇಳಿದರು.
ಮಂತ್ರಿ ರಾಜನ ಬಳಿ ತೆರಳಿ ಮಹಂತರ ಸಂದೇಶ ಮುಟ್ಟಿಸಿದರು. ರಾಜ ತಾನೊಬ್ಬನೇ ಕುದುರೆಯೇರಿ ಹೊರಟು ಮಹಂತರ ಡೇರೆಯ ಬಳಿಗೆ ಬಂದ. ಹೊರಗೆ ನಿಂತಿದ್ದ ಶಿಷ್ಯಂದಿರಿಗೆ “ಮಹಾರಾಜರು ದರ್ಶನಕ್ಕೆ ಬಂದಿದ್ದಾರೆ ಎಂದು ಗುರುಗಳಿಗೆ ತಿಳಿಸಿ’ ಎಂದು ಪ್ರಾರ್ಥಿಸಿಕೊಂಡ. ಶಿಷ್ಯರು ರಾಜನ ನಿವೇದನೆಯನ್ನು ಗುರುಗಳಿಗೆ ತಿಳಿಸಿದರು. “ರಾಜನನ್ನು ಒಳಗೆ ಕಳಿಸಿ’ ಎಂದರು ಗುರುಗಳು. ರಾಜ ಒಳಗೆ ಪ್ರವೇಶಿಸಿದ. ಅವನು ಮೂರು ಚಿಕ್ಕ ಚಿಕ್ಕ ಬಾಗಿಲುಗಳನ್ನು ದಾಟಿ ಹೋಗಬೇಕಾಗಿತ್ತು.
ರಾಜ ತಲೆಯನ್ನು ಬಗ್ಗಿಸಿಕೊಂಡು ಅದರೊಳಗೆ ತೂರಿ ಬರಬೇಕಾಯಿತು. ಗುರುಗಳ ಕೋಣೆ ಕಿರಿದಾಗಿತ್ತು. ಮೂಲೆಯಲ್ಲಿದ್ದ ಮಂಚದ ಮೇಲೆ ಗುರುಗಳು ಮಲಗಿದ್ದರು. ರಾಜನನ್ನು ಕಂಡ ಗುರುಗಳು ಮಲಗಿದ್ದಲ್ಲಿಂದಲೇ ಹೇಳಿದರು- “ಅದೋ ಅಲ್ಲಿ ಚಾದರ ಇದೆ. ಅದನ್ನು ತಂದು ನನಗೆ ಹೊದೆಸು. ಚಳಿಯಾಗುತ್ತಾ ಇದೆ’. ರಾಜ ಗುರುಗಳ ಮಾತನ್ನು ಪಾಲಿಸಿದ. ಚಾದರವನ್ನು ತಂದು ಗುರುಗಳಿಗೆ ಹೊದಿಸಿದ. ಅನಂತರ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ.
ಸ್ವಲ್ಪ ಸಮಯದ ನಂತರ ಕಣ್ಣುಬಿಟ್ಟ ಗುರುಗಳು ನಗುತ್ತ ಎದ್ದು ಕುಳಿತರು. ಗುರುಗಳಿಗೆ ಆರೋಗ್ಯ ಸರಿಯಿಲ್ಲವೇನೋ ಎಂದುಕೊಂಡಿದ್ದ ರಾಜನಿಗೆ ಅಚ್ಚರಿಯಾಯಿತು. ಗುರುಗಳು “ಕುಳಿತುಕೊ ರಾಜ. ನೀನೀಗ ಶಿಷ್ಯತ್ವ ಪಡೆಯಲು ಯೋಗ್ಯನಾಗಿದ್ದೀಯೆ. ಜ್ಞಾನವನ್ನು ಪಡೆಯುವ ಅರ್ಹತೆ ಪ್ರಾಪ್ತವಾಗಿದೆ. ನಮ್ಮ ಸೇವೆಗೂ ಒಬ್ಬ ಶಿಷ್ಯ ಬೇಕಾಗಿತ್ತು!’ ಎಂದು ದೊಡ್ಡದಾಗಿ ನಕ್ಕರು! “ಹುಷಾರಿಲ್ಲ ಎಂದಿರಿ?’ ರಾಜ ಕೇಳಿದ. “ಹಾಗೇನಿಲ್ಲ. ನಿನಗೆ ಮೂರು ಪರೀಕ್ಷೆಗಳನ್ನು ಒಡ್ಡಿದ್ದೆ. ಆ ಮೂರರಲ್ಲಿಯೂ ನೀನು ಉತ್ತೀರ್ಣನಾಗಿರುವೆ. ನಿಜವಾಗಿಯೂ ಶಿಷ್ಯನಲ್ಲಿ ಈ ಮೂರು ಗುಣಗಳು ಇರಬೇಕು. ಅವನೇ ಅರ್ಹನಾದ ಶಿಷ್ಯ. ಅದಾವುದೆಂದರೆ ಗುರುವಿನ ಬಳಿಗೇ ಶಿಷ್ಯನು ಹೋಗಬೇಕು, ಅದಕ್ಕೇ ನಿನ್ನನ್ನೇ ಇಲ್ಲಿಗೆ ಬರಹೇಳಿದ್ದು. ಎರಡನೆಯ ಗುಣ ದೇವರು, ಗುರು, ಹಿರಿಯರ ಬಳಿಗೆ ಹೋಗುವಾಗ, ಅಹಂಕಾರವನ್ನು ಕಳೆದುಕೊಂಡು ತಲೆತಗ್ಗಿಸಿ ವಿನಯಶೀಲತೆಯಿಂದ ಹೋಗಬೇಕು. ಈ ಕಾರಣಕ್ಕೇ ದೇಗುಲದ ಬಾಗಿಲು ಗಿಡ್ಡಕ್ಕಿರುತ್ತದೆ. ನೀನು ತಗ್ಗಿ ಬಗ್ಗಿ ಬಂದೆ. ಶಿಷ್ಯನಾದವನು ಗುರುಸೇವೆ ಮಾಡಬೇಕು. ನೀನು ರಜಾಯಿ ಹೊದೆಸಿದೆ. ಸೇವೆ ಮಾಡುವ ಶ್ರದ್ಧೆ- ಪ್ರೀತಿ ನಿನಗಿದೆಯೆಂದು ರುಜುವಾತುಪಡಿಸಿದೆ’ ಎಂದರು. ರಾಜಾ ವೀರಸಿಂಹನಿಗೆ ಸಂತರ ಮಾತುಗಳಿಂದ ಸಂತಸವಾಯಿತು. ಮಹಂತ ಶಿವರಾಜರ ಶಿಷ್ಯತ್ವ ಸ್ವೀಕರಿಸಿ ರಾಜ ಜ್ಞಾನಿಯಾದ. ದಕ್ಷತೆಯಿಂದ ರಾಜ್ಯವನ್ನು ಆಳಿದ.
– ವನರಾಗ ಶರ್ಮಾ