Advertisement
ಆದರೆ ಇದರ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ಹಗರಣದಲ್ಲಿ ಭಾರತದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಾಬಿನ್ ಮಾರಿಸ್, ಶ್ರೀಲಂಕಾದ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ದಿಲ್ಹರಾ ಲೋಕುಹಟ್ಟಿಗೆ, ಜೀವಂತ ಕುಲತುಂಗ ಮತ್ತು ಥರಿಂಡು ಮೆಂಡಿಸ್, ಪಾಕಿಸ್ತಾನ ಕ್ರಿಕೆಟಿಗ ಹಸನ್ ರಾಜಾ ಹೆಸರು ಕೇಳಿಬಂದಿದೆ.
Related Articles
2016ರಲ್ಲಿ ಚೆನ್ನೈನಲ್ಲಿ ನಡೆದ ಭಾರತ-ಇಂಗ್ಲೆಂಡ್ ಟೆಸ್ಟ್ (ಡಿ.16-20), 2017ರಲ್ಲಿ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ-ಭಾರತ ಟೆಸ್ಟ್ (ಮಾ.16ರಿಂದ 20), 2017ರಲ್ಲಿ ಶ್ರೀಲಂಕಾದ ಗಾಲೆಯಲ್ಲಿ ನಡೆದ ಭಾರತ-ಶ್ರೀಲಂಕಾ ಟೆಸ್ಟ್ (ಜು.26-29) ಪಂದ್ಯಗಳು ಫಿಕ್ಸ್ ಆಗಿವೆಯೆಂದು ವಾಹಿನಿ ಆರೋಪಿಸಿದೆ. ಗಮನಾರ್ಹ ಸಂಗತಿಯೆಂದರೆ 2016ರ ಚೆನ್ನೈ ಟೆಸ್ಟ್‌ನಲ್ಲಿ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದರು. ಆ ಪಂದ್ಯವೂ ಫಿಕ್ಸಿಂಗ್ ಆರೋಪಕ್ಕೊಳಗಾಗಿದೆ. ಮೇಲಿನ ಮೂರು ಟೆಸ್ಟ್ ಪಂದ್ಯಗಳ ಪೈಕಿ ಚೆನ್ನೈ, ಗಾಲೆಯಲ್ಲಿ ಭಾರತ ಗೆದ್ದಿದ್ದರೆ, ರಾಂಚಿಯಲ್ಲಿ ಪಂದ್ಯ ಡ್ರಾ ಆಗಿದೆ.
Advertisement
ಆರೋಪಿಗಳು ಹೇಳಿದ್ದೇನು?: ಶ್ರೀಲಂಕಾದ ಗಾಲೆ ಮೈದಾನದ ಕ್ಯುರೇಟರ್ ಇಂಡಿಕಾ ತರಂಗ ಅವರನ್ನು ಅಲ್‌ಜಜೀರಾ ವಾಹಿನಿಯ ಬುಕಿ ಎಂದು ಪರಿಚಯಿಸಿಕೊಂಡ ವರದಿಗಾರನಿಗೆ ಭಾರತದ ರಾಬಿನ್ ಮಾರಿಸ್ ಪರಿಚಯಿಸಿದ್ದಾರೆ. ವರದಿಗಾರನ ಪ್ರಶ್ನೆಗೆ ಇಂಡಿಕಾ ಸಲೀಸಾಗಿ ಬಲೆಗೆ ಬಿದ್ದು, ಅಂಕಣವನ್ನು ಬದಲಿಸಲು ಸಿದ್ಧವೆಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಹೇಗೆಲ್ಲ ಅಂಕಣ ಬದಲಿಸುತ್ತೇವೆಂದು ಬಾಯ್ಬಿಟ್ಟಿದ್ದಾರೆ. ಮತ್ತೂಂದು ಕಡೆ ಮಾತನಾಡಿದ ರಾಬಿನ್ ಮಾರಿಸ್, ತನ್ನ ಕೈಕೆಳಗೆ 31 ಕ್ರಿಕೆಟಿಗರಿದ್ದು ಅವರೆಲ್ಲ ತಾನು ಹೇಳಿದ ಹಾಗೆ ಕೇಳುತ್ತಾರೆಂದು ತನ್ನನ್ನು ತಾನೇ ಹೊಗಳಿಕೊಂಡಿದ್ದಾರೆ.
ಮಾರಿಸ್ ಗೆಳೆಯ ಗೌರವ್ ರಾಜಕುಮಾರ್, ತಾವು ದುಬೈನಲ್ಲಿ 10 ದಿನಗಳ ಟಿ20 ಕ್ರಿಕೆಟ್ ನಡೆಸುವ ಉದ್ದೇಶ ಹೊಂದಿದ್ದೇವೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರು ಆಡಲಿದ್ದಾರೆ. ಇಲ್ಲಿ ಆಟಗಾರರು ಆಟದ ಸಾಮಾನುಗಳಿದ್ದಂತೆ. ಹಣ ನೀಡಿದರೆ ಏನು ಬೇಕಾದರೂ ಮಾಡುತ್ತಾರೆ. ತಂಡವೊಂದರ ಮೌಲ್ಯ ನೋಡಿಕೊಂಡು 2ರಿಂದ 6 ಕೋಟಿ ರೂ.ಗಳನ್ನು ಫಿಕ್ಸಿಂಗ್‌ಗೆ ವ್ಯಯಿಸಲು ಸಿದ್ಧವೆಂದು ಗೌರವ್ ಹೇಳುತ್ತಾರೆ. ಇನ್ನೂ ಮುಂದುವರಿದು ಮಾತನಾಡುವ ಅವರು, ಕ್ಯುರೇಟರ್ 25 ಲಕ್ಷ ರೂ. ನೀಡಿದರೆ ಅಂಕಣ ಬದಲಾಯಿಸುತ್ತಾರೆ. ಇದು ಅವರ 8 ವರ್ಷದ ಸಂಬಳ ಎಂದು ಹೇಳಿಕೊಂಡಿದ್ದಾರೆ.
ದಾವೂದ್ ಗುಂಪಿನ ಸದಸ್ಯನೆಂದು ಗುರ್ತಿಸಲ್ಪಟ್ಟ ಅನೀಲ್ ಮುನಾವರ್, ಭಾರತ-ಆಸ್ಟ್ರೇಲಿಯಾ ರಾಂಚಿ ಪಂದ್ಯದಲ್ಲಿ ಏನೇನು ನಡೆಯುತ್ತದೆ ಎಂದು ಮುಂಚಿತವಾಗಿಯೇ ಬಾಯ್ಬಿಟ್ಟಿದ್ದಾನೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹೀಗೆಯೇ ಆಗುತ್ತದೆಂದು ಆತ ಹೇಳಿದ್ದಾನೆ. ಅದೇ ಆಧಾರದ ಮೇಲೆ ಆ ಪಂದ್ಯ ಫಿಕ್ಸ್ ಆಗಿತ್ತೆಂದು ವಾಹಿನಿ ಆರೋಪಿಸಿದೆ.
ಯಾರು ಈ ರಾಬಿನ್ ಮಾರಿಸ್?ರಾಬಿನ್ ಮಾರಿಸ್ ಮುಂಬೈ ಪರ ರಣಜಿ ಕ್ರಿಕೆಟ್ ಆಡಿದ್ದರು. ಅವರು 42 ಪ್ರಥಮದರ್ಜೆ, 51 ಸೀಮಿತ ಓವರ್‌ಗಳ ಪಂದ್ಯವಾಡಿದ್ದರು. ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ಐಪಿಎಲ್ ಮಾದರಿಯ ಬಂಡಾಯ ಐಸಿಎಲ್ ಕ್ರಿಕೆಟ್‌ನಲ್ಲಿ ಆಡಿದ್ದರು. ತಮ್ಮ 31ನೇ ವಯಸ್ಸಿನಲ್ಲೇ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಸದ್ಯ ಇವರು ಬಿಸಿಸಿಐಗೆ ಸಂಬಂಧಪಟ್ಟ ಯಾವುದೇ ಜವಾಬ್ದಾರಿಯನ್ನೂ ಹೊಂದಿಲ್ಲವೆನ್ನುವುದು ಇಲ್ಲಿ ಗಮನಾರ್ಹ. ಸದ್ಯ ಬಿಸಿಸಿಐನಿಂದ 22,500 ರೂ. ಮಾಸಿಕ ಪಿಂಚಣಿ ಮಾತ್ರ ಪಡೆಯುತ್ತಿದ್ದಾರೆ. ಇವರ ಮೇಲಿನ ಆರೋಪ ಸಾಬೀತಾದರೆ ಪಿಂಚಣಿ ಕಳೆದುಕೊಳ್ಳಲಿದ್ದಾರೆ. ಬಿಸಿಸಿಐನಿಂದ ಕಾದು ನೋಡುವ ತಂತ್ರ
ಭಾರತ ಪಾಲ್ಗೊಂಡ ಟೆಸ್ಟ್ ಪಂದ್ಯಗಳೇ ಫಿಕ್ಸಿಂಗ್‌ಗೊಳಗಾಗಿರುವ ಆರೋಪ ಎದುರಾಗಿದ್ದರೂ ಬಿಸಿಸಿಐ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಪ್ರಕರಣದ ಬಗ್ಗೆ ಐಸಿಸಿ ತನಿಖೆ ನಡೆಯುತ್ತಿದೆ. ಅದರ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಅದರಲ್ಲೂ ಆರೋಪಿ ಸ್ಥಾನದಲ್ಲಿರುವ ರಾಬಿನ್ ಮಾರಿಸ್ ಬಿಸಿಸಿಐನ ಯಾವುದೇ ಜವಾಬ್ದಾರಿ ಹೊಂದಿಲ್ಲ ಎಂದು ಅದು ಹೇಳಿಕೊಂಡಿದೆ.