Advertisement

ರಂಜಿಸಿದ ಮೂರು ತಾಳಮದ್ದಳೆಗಳು 

12:30 AM Mar 01, 2019 | |

ಸುರತ್ಕಲ್‌ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಬೆಂಗಳೂರಿನಲ್ಲಿ ಮೂರನೇ ಬಾರಿ ಯಕ್ಷಗಾನ ತಾಳಮದ್ದಲೆ ಪ್ರದರ್ಶನ ನೀಡಿ ಯಕ್ಷಗಾನಾಸಕ್ತರ ಮನಗೆದ್ದಿತು. ಮೊದಲನೆ ದಿನ ಕುಮಾರಸ್ವಾಮಿ ಲೇಔಟ್‌ನ ಮೂಲ ಕುಮಾರಸ್ವಾಮಿ ದೇವಸ್ಥಾನದಲ್ಲಿ “ಮೀನಾಕ್ಷಿ ಕಲ್ಯಾಣ’ ಪ್ರಸಂಗವನ್ನು ಆಯೋಜಿಸಲಾಗಿತ್ತು. ಮೀನಾಕ್ಷಿಯ ಪಾತ್ರದಲ್ಲಿ ಲಲಿತ ಭಟ್‌ ಪ್ರಬುದ್ಧ ಅರ್ಥವೈಖರಿಯಿಂದ ಪಾತ್ರ ನಿರ್ವಹಣೆ ಮಾಡಿದರೆ ಶೂರಸೇನನಾಗಿ ಸುಲೋಚನಾ ವಿ. ರಾವ್‌ ಮೊದಲು ಎದುರಾಳಿಯನ್ನು ಎದುರಿಸವಲ್ಲಿ ವೀರರಸದ ಅಬ್ಬರವನ್ನು ಪ್ರಕಟಿಸಿದರೆ ಮೀನಾಕ್ಷಿ ತನ್ನ ಮೊಮ್ಮಗಳೆಂದು ತಿಳಿದ ಬಳಿಕ ಅಜ್ಜ ತನ್ನ ಮೊಮ್ಮಗಳಲ್ಲಿ ಪ್ರೀತಿಯ ಧಾರೆಯನ್ನು ಹರಿಸುತ್ತಾ ಭಾವನಾತ್ಮಕ ಪ್ರದರ್ಶನದಿಂದ ಜನಮನ ಗೆದ್ದರು. ಈಶ್ವರನಾಗಿ ಜಯಂತಿ ಹೊಳ್ಳ ಗಂಭೀರವಾದ ಮಾತುಗಾರಿಕೆಯಿಂದ ಅರ್ಥವೈಭವವನ್ನು ಮೆರೆದರು. ಸ್ತ್ರೀ ರಾಜ್ಯದ ಮುಖ್ಯಸ್ಥೆ ಪದ್ಮಗಂಧಿನಿಯಾಗಿ ದೀಪ್ತಿ ಭಟ್‌ ವೀರೋಚಿತವಾದ ಪ್ರಸ್ತುತಿಯೊಂದಿಗೆ ಎದ್ದು ಕಂಡರು. ನಂದಿಕೇಶ್ವರನಾಗಿ ಕಲಾವತಿ ಹಾಸ್ಯಮಿಶ್ರಿತ ವೀರರಸದ ಮಾತುಗಾರಿಕೆಯಿಂದ ರಂಜಿಸಿದರು. ಅಜ್ಜ ಮಗಳನ್ನು ಒಂದು ಮಾಡುವ ಸಂಧಾನಕಾರ ನಾರದನಾಗಿ ಕಲಾಪ್ರೇಮಿ ಚಂದ್ರಿಕಾ ರಘುನಂದನ್‌ ಪಾತ್ರ ಚಿತ್ರಣವನ್ನು ಅಂದವಾಗಿ ನಡೆಸಿಕೊಟ್ಟರು.

Advertisement

ಎರಡನೇ ದಿನ ವಸಂತಪುರ ಬಿ.ಡಿ.ಎ. ಲೇಔಟ್‌ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ “ಗುರುದಕ್ಷಿಣೆ’ (ಪಾಂಚಜನ್ಯೋತ್ಪತ್ತಿ) ಆಖ್ಯಾನ ಪ್ರದಶ್ರಿಸಲಾಯಿತು. ಕಥಾನಾಯಕ ಶ್ರೀಕೃಷ್ಣನ ಪಾತ್ರದಲ್ಲಿ ಸುಲೋಚನಾ ವಿ. ರಾವ್‌ ಸುಲಲಿತವಾದ ಮಾತುಗಾರಿಕೆ ಸಂಭಾಷಣೆಯ ಮೆರುಗನ್ನು ಸೇರಿಸಿ ಪಾತ್ರದ ಕಳೆಯನ್ನು ಹೆಚ್ಚಿಸಿದರೆ, ಬಲರಾಮನಾಗಿ ಕಲಾವತಿ ಅದಕ್ಕೆ ಸಮನಾದ ಸ್ಪಂದನವನ್ನಿತ್ತರು. ಪಂಚಜನನಾಗಿ ದೀಪ್ತಿ ಭಟ್‌ ಏರುದನಿಯಲ್ಲಿ ಅಬ್ಬರಿಸಿದರೆ ಯಮನಾಗಿ ಜಯಂತಿ ಹೊಳ್ಳ ಮೊದಲಿಗೆ ಬಿರುಸಾದ ಮಾತುಗಾರಿಕೆ, ದೇವನಿಗೆ ಶರಣಾದ ಬಳಿಕ ಭಕ್ತಿರಸ ಸ್ಪುರಣವನ್ನು ಸೊಗಸಾಗಿ ಪ್ರತಿಬಿಂಬಿಸಿದರು. ಗುರು ಸಾಂದೀಪನಿಯಾಗಿ ಲಲಿತ ಭಟ್‌ ಸ್ವರ ಗಾಂಭೀರ್ಯದಿಂದ ಧೃಡಚಿತ್ತದ ಪಾತ್ರ ನಿರ್ವಹಣೆ ಮಾಡಿದರೆ, ಪತ್ನಿ ಸದೊದಿನಿಯಾಗಿ ತನ್ನ ಅಗಲಿದ ಮಗನನ್ನು ಪಡೆವ ಹಂಬಲದಿಂದ ಗುರುದಕ್ಷಿಣೆ ಯಾಚಿಸುವ ದುಃಖತಪೆ¤ ತಾಯಿಯಾಗಿ, ಚಂದ್ರಿಕಾ ರಘುನಂದನ್‌ ಮನೋಜ್ಞವಾಗಿ ನಿರ್ವಹಿಸಿದರು. 

ಅದೇ ದಿನ ಸಂಜೆ ಬೆಂಗಳೂರಿನ ವಸಂತಪುರ ಮಾರುತಿ ನಗರದಲ್ಲಿ ನಡೆದ “ಶಲ್ಯ ಸಾರಥ್ಯ’ ಪ್ರಸಂಗವು ವೀರರಸದ ಹೊನಲನ್ನೇ ಹರಿಸಿತು. ಕರ್ಣನಾಗಿ ದೀಪ್ತಿ ಭಟ್‌ ವೀರೋಚಿತ ಪಾತ್ರವನ್ನು ಭಾವಪೂರ್ಣವಾಗಿ ನಿರ್ವಹಿಸಿದರೆ, ಪ್ರತಿಸ್ಪರ್ಧಿ ಅರ್ಜುನನಾಗಿ ಸುಲೋಚನಾ ವಿ. ರಾವ್‌ ಪ್ರಬುದ್ಧ ಭಾಷಾ ಶೈಲಿಯ ಮೂಲಕ ವಾಕ್‌ಚಾತುರ್ಯದ ಅರ್ಥಗಾರಿಕೆಯ ವೈಭವವನ್ನು ಮೆರೆದರು. ಶ್ರೀಕೃಷ್ಣನಾಗಿ ಜಯಂತಿ ಹೊಳ್ಳ ಅರ್ಜುನನ್ನು ಸಮಾಧಾನಿಸುವ ಹಾಗೂ ಕೊನೆಗೆ ಎಚ್ಚರಿಸುವ ಸನ್ನಿವೇಶವನ್ನು ಮನೋಜ್ಞವಾಗಿ ನಿರ್ವಹಿಸಿದರೆ ಶಲ್ಯನಾಗಿ ಕೆ. ಕಲಾವತಿ ಸ್ಪುಟವಾದ ಸಾಹಿತ್ಯಮಿಶ್ರಿತ ಮಾತುಗಾರಿಕೆಯಿಂದ ರಂಜಿಸಿದರು. ಅಶ್ವಸೇನನ ಪಾತ್ರದಲ್ಲಿ ಚಂದ್ರಿಕಾ ರಘುನಂದನ್‌ ಮಿಂಚಿದರು. ಭಾಗವತಿಕೆಯಲ್ಲಿ ಅರ್ಜುನ ಕುಡೇìಲ್‌ ಸುಶ್ರಾವ್ಯ ಹಾಡುಗಾರಿಕೆಯಿಂದ, ಮದ್ದಲೆಯಲ್ಲಿ ಅವಿನಾಶ್‌ ಬೈಪಾಡಿತ್ತಾಯ, ಚೆಂಡೆಯಲ್ಲಿ ವೇಣುಗೋಪಾಲ್‌ ಮಾಂಬಾಡಿ ಪ್ರಬುದ್ಧತೆಯ ಕೈಚಳಕದಿಂದ ಮೆಚ್ಚುಗೆಗೆ ಪಾತ್ರರಾದರು. 

ಯಕ್ಷಪ್ರಿಯ

Advertisement

Udayavani is now on Telegram. Click here to join our channel and stay updated with the latest news.

Next