Advertisement

ದಿಗ್ಗಜ ಆಟಗಾರರ ನಿಧಾನಗತಿಯ ಶತಕಗಳು.. ಶತಕ ಪೂರೈಸಲು ಗಂಗೂಲಿ ಬಳಸಿದ ಎಸೆತಗಳೆಷ್ಟು ಗೊತ್ತಾ?

12:23 PM Jun 13, 2020 | keerthan |

ಆಧುನಿಕ ಕ್ರಿಕೆಟ್ ನಲ್ಲಿ ಅಂಕಿಅಂಶ, ಲೆಕ್ಕಾಚಾರಗಳೇ ತುಂಬಿದೆ. ಹೊಡಿಬಡಿ ಆಟ ಆರಂಭವಾದ ನಂತರವಂತೂ ಕ್ರಿಕೆಟ್ ನಲ್ಲಿ ಸರಾಸರಿಗಿಂತ ಸ್ಟ್ರೈಕ್ ರೇಟ್ ಗೆ ಹೆಚ್ಚಿನ ಮಾನ್ಯತೆ ದೊರೆಯುತ್ತಿದೆ. ಯಾರು ಎಷ್ಟು ಎಸೆತಗಳನ್ನು ಎದುರಿಸಿ ಎಷ್ಟು ರನ್ ಗಳಿಸಿದರು ಎಂಬ ಲೆಕ್ಕಾಚಾರಗಳಿಗೆ ಪ್ರಾಮುಖ್ಯತೆ ಸಿಗುತ್ತಿದೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಏಕದಿನ ಕ್ರಿಕೆಟ್ ನ ಅತೀ ವೇಗದ ಶತಕವೀರ. ಶತಕಕ್ಕಾಗಿ ಎಬಿಡಿ ಬಳಸಿದ್ದು ಕೇವಲ 31 ಎಸೆತಗಳನ್ನಷ್ಟೇ !

Advertisement

ಏಕದಿನ ಕ್ರಿಕೆಟ್ ನ ಅತೀ ವೇಗದ ಶತಕದಲ್ಲಿ ಭಾರತೀಯ ದಾಖಲೆಯಿರುವುದು ಟೀಂ ಇಂಡಿಯಾ ನಾಯಕ ವಿರಾಟ್ ಹೆಸರಲ್ಲಿ. 2013ರ ಜೈಪುರ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಆದರೆ ಭಾರತೀಯ ಕ್ರಿಕೆಟಿನ ಶ್ರೇಷ್ಠರೆಂದು ಕರೆಸಿಕೊಳ್ಳುವ ಮೂವರ ಈ ಶತಕ ಇದಕ್ಕೆ ತದ್ವಿರುದ್ಧ.

ಬ್ಯಾಟಿಂಗ್ ನಡೆಸಲು ಕಷ್ಟವಾದ ಪಿಚ್, ಆಕ್ರಮಣಕಾರಿ ಬೌಲಿಂಗ್ ಮುಂತಾದ ಕಾರಣಗಳಿಂದ ಕೆಲವೊಮ್ಮೆ ಎಂತಹ ಆಟಗಾರರೂ ಕೂಡಾ ರನ್ ಗಳಿಸಿಲು ಪರದಾಡುತ್ತಾರೆ. ಭಾರತೀಯ ಕ್ರಿಕೆಟರ್ ಗಳ ಏಕದಿನ ಕ್ರಿಕೆಟ್ ನ ನಿಧಾನಗತಿಯ ಇನ್ನಿಂಗ್ಸ್ ಗಳ ಕುರಿತು ಮಾಹಿತಿ ಇಲ್ಲಿದೆ.

ಸಚಿನ್ ತೆಂಡೂಲ್ಕರ್

Advertisement

ಕ್ರಿಕೆಟ್ ಲೋಕದ ದಿಗ್ಗಜ, ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅದೆಷ್ಟೋ ಹೊಡಿಬಡಿ ಇನ್ನಿಂಗ್ಸ್ ಕಟ್ಟಿರುವ ಸಚಿನ್ ತೆಂಡೂಲ್ಕರ್ ನಿಧಾನಗತಿಯ ಇನ್ನಿಂಗ್ಸ್ ಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅದೂ ಕೂಡಾ ಎರಡು ಶತಕಗಳು. ಆಸೀಸ್ ವಿರುದ್ಧ 143 ಎಸೆತಗಳಿಂದ 175 ರನ್ ಬಾರಿಸಿದ್ದ ಸಚಿನ್ ಲಂಕಾ ವಿರುದ್ಧ ಶತಕ ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 138 ಎಸೆತಗಳು!

2000ರ ಅಕ್ಟೋಬರ್ ನಲ್ಲಿ ಲಂಕಾ ವಿರುದ್ಧ ಪಂದ್ಯದಲ್ಲಿ ಸಚಿನ್ ತನ್ನ ಈ ನಿಧಾನಗತಿಯ ಇನ್ನಿಂಗ್ಸ್ ಕಟ್ಟಿದ್ದರು. ತೆಂಡೂಲ್ಕರ್ ರ ಈ ಇನ್ನಿಂಗ್ಸ್ ಕಾರಣದಿಂದ ತಂಡ 50 ಓವರ್ ಗಳಲ್ಲಿ ಗಳಿಸಿದ್ದು ಕೇವಲ 224 ರನ್ ಮಾತ್ರ, ಆದರೆ ಲಂಕಾ ಈ ಮೊತ್ತವನ್ನು 43.5 ಓವರ್ ಗಳಲ್ಲಿ ಬೆನ್ನಟ್ಟಿತ್ತು.

ಸಚಿನ್ ತೆಂಡೂಲ್ಕರ್ ರ ವಿಶ್ವದಾಖಲೆಯ 100ನೇ ಅಂತಾರಾಷ್ಟ್ರೀಯ ಶತಕವೂ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್ ಆಗಿತ್ತು. ಬಾಂಗ್ಲಾ ವಿರುದ್ಧದ 2013ರ ಏಶ್ಯಾಕಪ್ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಲು ಸಚಿನ್ ಎದುರಿಸಿದ್ದು 138 ಎಸೆತಗಳನ್ನು!  ಭಾರತ ಈ ಪಂದ್ಯದಲ್ಲೂ ಸೋಲನುಭವಿಸಿತ್ತು.

ಅಜಯ್ ಜಡೇಜಾ

ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಮಿಂಚು ಹರಿಸಿದ್ದ ಅಜಯ್ ಜಡೇಜಾರ ಈ ನಿಧಾನಗತಿಯ ಇನ್ನಿಂಗ್ಸ್ ಬಂದಿದ್ದು 1999ರ ವಿಶ್ವಕಪ್ ಪಂದ್ಯದಲ್ಲಿ. ಆಸ್ಟ್ರೇಲಿಯಾದ ಗ್ಲೆನ್ ಮೆಕ್ ಗ್ರಾಥ್ ನೇತೃತ್ವದ ಬಿಗು ಬೌಲಿಂಗ್ ದಾಳಿಗೆ ಟೀಂ ಇಂಡಿಯಾ ನಲುಗಿದಾಗ ಎದುರಾಗಿ ನಿಂತು ಆಡಿದ್ದು ಅಜಯ್ ಜಡೇಜಾ.

ಆಸೀಸ್ ನೀಡಿದ್ದ 283 ರನ್ ಗುರಿ ಬೆನ್ನಟ್ಟಿದ್ದ ಭಾರತ ಕೇವಲ 17 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ತೆಂಡೂಲ್ಕರ್, ಗಂಗೂಲಿ, ದ್ರಾವಿಡ್ ಒಂದಂಕಿ ಮೊತ್ತಕ್ಕೆ ಪೆವಿಲಿಯನ್ ಸೇರಿದ್ದರು. ಆಗ ಜೊತೆಯಾಗಿದ್ದು ಅಜಯ್ ಜಡೇಜಾ- ರಾಬಿನ್ ಸಿಂಗ್ ಜೋಡಿ.

ಈ ಜೋಡಿ ಐದನೇ ವಿಕೆಟ್ ಗೆ ಈ ಜೋಡಿ 141 ರನ್ ಗಳ ಜೊತೆಯಾಟ ನಡೆಸಿತ್ತು. ರಾಬಿನ್ ಸಿಂಗ್ 79 ರನ್ ಗಳಿಸಿದರೆ, ಅಜಯ್ ಶತಕ ಬಾರಿಸಿದ್ದರು. ಆದರೆ ಶತಕ ಬಾರಿಸಲು ಜಡೇಜಾ 138 ಎಸೆತ ಎದುರಿಸಿದ್ದರು. ವಿಪರ್ಯಾಸವೆಂದರೆ ರಾಬಿನ್ ಮತ್ತು ಅಜಯ್ ಹೊರತುಪಡಿಸಿ ಇತತರು ಯಾರೂ ಎರಡಂಕಿ ಮೊತ್ತ ದಾಟಿರಲಿಲ್ಲ.

ಆ ಪಂದ್ಯದಲ್ಲಿ ಭಾರತ 77 ರನ್ ಗಳ ಅಂತರದಿಂದ ಸೋಲನುಭವಿಸಿತ್ತು. ನಂತರ ಆಸೀಸ್ ವಿಶ್ವಕಪ್`ಗೆಲ್ಲುವಲ್ಲಿ ಸಫಲವಾಗಿತ್ತು. ಈ ಇನ್ನಿಂಗ್ಸ್ ನಂತರದ ಪಂದ್ಯದಲ್ಲಿ ಅದೇ ಜಡೇಜಾ ಪಾಕಿಸ್ಥಾನದ ವಿರುದ್ಧ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು.

ಸೌರವ್ ಗಂಗೂಲಿ

ಭಾರತೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ನಿಧಾನಗತಿಯ ಶತಕ ಬಾರಿಸಿದ ದಾಖಲೆ ಹೊಂದಿರುವುದಿ ಮಾಜಿ ನಾಯಕ, ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು. 1999ರ ಲಂಕಾ ವಿರುದ್ಧದ ನಾಗ್ಪುರ ಪಂದ್ಯದಲ್ಲಿ ಸೌರವ್ ಬರೋಬ್ಬರಿ 141 ಎಸೆತ ಎದುರಿಸಿ ಶತಕ ಪೂರೈಸಿದ್ದರು.

ಈ ಪಂದ್ಯದಲ್ಲಿ ಗಂಗೂಲಿ ಮತ್ತು ದ್ರಾವಿಡ್ ಇಬ್ಬರೂ ಶತಕ ಬಾರಿಸಿದ್ದರು. ದ್ರಾವಿಡ್ 118 ಎಸೆತಗಳನ್ನು ಎದುರಿಸಿ 116 ರನ್ ಗಳಿಸಿದ್ದರು. ಇವರಿಬ್ಬರ ಶತಕದ ನೆರವಿನಿಂದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು. ಬೌಲಿಂಗ್ ನಲ್ಲಿ ಕಮಾಲ್ ಮಾಡಿದ್ದ ಗಂಗೂಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಭಾರತ 80 ರನ್ ಜಯ ಸಾಧಿಸಿದ್ದರೆ, ಗಂಗೂಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದರೂ ಕೇವಲ ಒಂದು ತಿಂಗಳ ನಂತರ ಅದೇ ಲಂಕನ್ನರ ವಿರುದ್ಧ ಭರ್ಜರಿ ಬ್ಯಾಟ್ ಬೀಸಿದ್ದರು. ಟಾಂಟನ್ ನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಏಳು ಸಿಕ್ಸರ್ ನೆರವಿನಿಂದ 183 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ದ್ರಾವಿಡ್ ಕೂಡಾ 145 ರನ್ ಗಳಿಸಿದ್ದರು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next