Advertisement

ಕಾರಿಗೆ ಬೆಂಕಿ ಇಟ್ಟು ಮೂವರ ಕೊಲೆ: 6 ಮಂದಿ ವಶ

07:48 AM Mar 24, 2024 | Team Udayavani |

ಬೆಳ್ತಂಗಡಿ: ತುಮಕೂರಿನ ಕೋರಾ ಪೊಲೀಸ್‌ ಠಾಣಾ ವ್ಯಾಪ್ತಿಯ ಬತ್ತಿರುವ ಕುಚ್ಚಂಗಿ ಕೆರೆಯ ಮಧ್ಯಭಾಗ ಕಾರಿನಲ್ಲಿ ಮೂವರನ್ನು ಸಜೀವವಾಗಿ ಬೆಂಕಿ ಹಚ್ಚಿ ಕೊಲೆಮಾಡಿರುವ ಪ್ರಕರಣದ ಹಿಂದೆ ನಕಲಿ ಚಿನ್ನ ವ್ಯಾಪಾರ ಮತ್ತು ಬರೋಬ್ಬರಿ 50 ಲಕ್ಷ ರೂ. ಹಣಕಾಸು ವ್ಯವಹಾರ ಎಂಬುದು ಬಹಿರಂಗವಾಗಿದೆ.

Advertisement

ಮೃತಪಟ್ಟಿರುವ ಈ ಮೂವರೂ ತುಮಕೂರಿಗೆ ತೆರಳುವಾಗ ಬೇರೆ ಬೇರೆ ಮೂಲಗಳಿಂದ 50 ಲಕ್ಷಕ್ಕೂ ಅಧಿಕ ಹಣ ಸಂಗ್ರಹಿಸಿ ಹೋಗಿದ್ದರು ಎಂದು ಕುಟುಂಬ ಸದಸ್ಯರ ಮೂಲಗಳಿಂದ ತಿಳಿದುಬಂದಿದೆ. ಅತ್ತ ಕೋಲಾರ ಜಿಲ್ಲೆಯ ಕೋರಾ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆಗಿರುವ ಪ್ರಕರಣ ಆಧರಿಸಿ ಪೊಲೀಸರು ಚುರುಕಿನ ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೃತರ ಕರೆಗಳನ್ನು ಆಧರಿಸಿ ಈಗಾಗಲೇ ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿದಂತೆ 6 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಕಲಿ ಚಿನ್ನದ ದಂಧೆ
ಮೂವರು ಕೂಡ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ. ಅದರಲ್ಲಿ ಕೋಟ್ಯಂತರ ರೂ. ಚಿನ್ನದ ಗಟ್ಟಿಗಳಿವೆ. ನಮಗೆ ಅದನ್ನು ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ನೀವು ಬಂದರೆ ನಾವು ಅದನ್ನು ಕೇವಲ 50 ಲಕ್ಷ ರೂ. ಗಳಿಗೆ ನೀಡುತ್ತೇವೆ ಎಂದು ನಂಬಿಸಿರುವ ಸಾಧ್ಯತೆ ಕಂಡುಬಂದಿದೆ. ಚಿನ್ನದ ಆಸೆಗೆ ಈ ಮೂವರು ಬಾಡಿಗೆ ಕಾರಿನಲ್ಲಿ ತುಕೂರಿಗೆ ತೆರಳಿದ್ದು, ವ್ಯವಹಾರ ಕುದುರಿಸಿದ ಬಳಿಕ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾರಿನ ಢಿಕ್ಕಿಯಲ್ಲಿ ಇಬ್ಬರ ಮೃತದೇಹ ಹಾಗೂ ಹಿಂಬದಿ ಸೀಟಿನಲ್ಲಿ ಸಂಪೂರ್ಣ ಸುಟ್ಟ ರೀತಿಯಲ್ಲಿ ಮೃತದೇಹ ಸಿಕ್ಕಿರುವುದು ಕೊಲೆಗೆ ಬಲವಾದ ಸಾಕ್ಷಿಯಾಗಿದೆ. ಮೃತದೇಹವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದು ಬಳಿಕವಷ್ಟೆ ಹಸ್ತಾಂತರ ವಾಗಲಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದ್ದಡ್ಕ ರಫೀಕ್‌ ಮಾಲಕತ್ವದ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್‌ ನಿವಾಸಿ, ಆಟೋ ಚಾಲಕ ಶಾಹುಲ್‌ ಹಮೀದ್‌ (45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್‌ (56) ಮತ್ತು ಶಿರ್ಲಾಲು ಗ್ರಾಮದ ಸಿದ್ದಿಕ್‌ ಯಾನೆ ಇಮಿ¤ಯಾಝ್ (34) ಮೂವರು ಬಾಡಿಗೆ ಮಾಡಿಕೊಂಡು ತೆರಳಿದ್ದರು.

Advertisement

ಅಲ್ಲಿ ಹುಚ್ಚಂಗಿ ಕೆರೆಯ ಬಳಿ ಮಧ್ಯದಲ್ಲಿ ಕಾರೊಂದು ಸುಟ್ಟ ಸ್ಥಿತಿಯಲ್ಲಿರುವುದನ್ನು ಕಂಡು ಜೆಸಿಬಿ ಕಾರ್ಮಿಕ ನಾಗರಾಜು ಅವರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಅಲ್ಲಿನ ಪೊಲೀಸ್‌ ಅಧಿಕಾರಿ, ಗುಪ್ತಚರ ವಿಭಾಗದ ಸಿಬಂದಿ ಚೇತನ್‌ ಕುಮಾರ್‌ ಅವರ ಜತೆ ಇಲಾಖಾ ವಾಹನದಲ್ಲಿ ತೆರಳಿ ಪರಿಶೀಲಿಸಿದಾಗ ಕೃತ್ಯ ಬಹಿರಂಗವಾಗಿತ್ತು. ಮದ್ದಡ್ಕದ ರಫೀಕ್‌ ಅವರಿಂದ ಇಸಾಕ್‌ ಅವರು 13 ದಿನಗಳ ಹಿಂದೆ ಬಾಡಿಗೆಗೆ ಕಾರು ಪಡೆದಿದ್ದರು. ಇತ್ತ ಮನೆಯವರಿಗೆ ಬೆಂಗಳೂರಿಗೆ ಹೋಗಿದ್ದಾರೆ ಎಂಬುದಷ್ಟೇ ಗೊತ್ತಿತ್ತು. ಆದರೆ ಮಾ.21 ರಂದು ರಾತ್ರಿಯ ನಂತರ ಕೋಲಾರದ ಕುಚ್ಚಂಗಿ ಕೆರೆಯ ಬಳಿ ದೊಡ್ಡ ಮಟ್ಟದ ಅನಾಹುತವೇ ನಡೆದಿತ್ತು. ಮೂವರನ್ನು ಕೈಕಾಲು ಕಟ್ಟಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಸಾಧ್ಯತೆಯೇ ಹೆಚ್ಚಾಗಿ ಕಂಡುಬಂದಿದೆ.

ಮಗಳ ಚಿನ್ನ, ಮನೆ ಮಾರಿದ ಹಣ
ಇಸಾಕ್‌ ಅವರು ವಿದೇಶದಿಂದ ಮರಳಿದ್ದು, ಆರ್ಥಿಕ ತೊಂದರೆಯಿಂದ ಇದ್ದರೆಂದು ಹೇಳಲಾಗುತ್ತಿದ್ದು ಗುರುವಾಯನಕೆರೆಯ ಮನೆ ಮಾರಿ ಮದ್ದಡ್ಕದಲ್ಲಿ ಬಾಡಿಗೆ ಮನೆಯಲ್ಲಿ ಸದ್ಯಕ್ಕೆ ನೆಲೆಸಿದ್ದರು. ಅವರು ಸುಲಭದಲ್ಲಿ ಹಣ ಗಳಿಸುವ ಈ ದಂಧೆಯ ಆಸೆಗೆ ಬಲಿ ಬಿದ್ದು ಮಿತ್ರರೊಡಗೂಡಿ ಅತ್ತ ಕಡೆಗೆ ಪ್ರಯಾಣ ಬೆಳೆಸಿದ್ದರು. ರಫೀಕ್‌ ಅವರಿಂದ ಕಾರು ಪಡೆಯುವ ವೇಳೆ ತನ್ನ ಜತೆಗೆ ಉಜಿರೆಯ ಶಾಹುಲ್‌ ಹಮೀದ್‌ ಇದ್ದಾರೆ ಎಂದು ಹೇಳಿದ್ದರಂತೆ. ಇಸಾಕ್‌ ಅವರು ಮನೆ ಮಾರಿದ ಹಣ, ಏಕೈಕ ಮಗಳ ಚಿನ್ನ ಅಡವಿಟ್ಟು ಅದರಿಂದ 35 ಲಕ್ಷ ರೂ. ವರೆಗೆ ಹಣ ಹೊಂದಿಸಿಕೊಂಡಿದ್ದರು. ಶಾಹುಲ್‌ ಮತ್ತು ಮತ್ತೂಬ್ಬರು 15 ಲಕ್ಷ ರೂ. ಒಟ್ಟುಮಾಡಿದ್ದರು ಎನ್ನಲಾಗಿದೆ. ಹೀಗೆ ಒಟ್ಟು 50 ಲಕ್ಷ ರೂ. ಹಣದೊಂದಿಗೆ ವಂಚನೆಗಾರರ ಬಲೆಗೆ ಬಿದ್ದು ದಹನಗೊಂಡಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next