ಬೆಂಗಳೂರು: ನಕಲಿ ಚಿನ್ನದ ಸರಗಳನ್ನು ಕೊಟ್ಟು 916 ಹಾಲ್‌ಮಾರ್ಕ್ ಮತ್ತು 2 ಕ್ಯಾರೆಟ್ ಚಿನ್ನದ ಸರಗಳನ್ನು ಕೊಂಡೊಯ್ದು ವಂಚಿಸುತ್ತಿದ್ದ ಜಾಲ ಬೇಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಜೆ.ಪಿ.ನಗರದ ಸಂತೋಷ್ (27), ಸತ್ಯನಾರಾಯಣ ಅಲಿಯಾಸ್ ಸತ್ಯ (26) ಮತ್ತು ಮಧು ಅಲಿಯಾಸ್ ಮುರಳಿ
(26) ಬಂಧಿತರು. ಆರೋಪಿಗಳಿಂದ 9 ಲಕ್ಷ ರೂ. ಮೌಲ್ಯದ 302 ಗ್ರಾಂ ಚಿನ್ನಾಭರಣ, 64 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಇತರೆ ಇಬ್ಬರು ಆರೋಪಿಗಳಾದ ನಾಗೇಶ್, ಹರ್ಷ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸಂತೋಷ ಹಾಗೂ ತಲೆಮರೆಸಿಕೊಂಡಿರುವ ನಾಗೇಶ್ ಈ ಮೊದಲು ರಿಲಯನ್ಸ್ ಜ್ಯುವೆಲ್ಲರಿ ಶಾಪ್ ನಲ್ಲಿ ಸಂತೋಷ್ ಮಾರಾಟ ಪ್ರತಿನಿಧಿಯಾಗಿ, ನಾಗೇಶ್ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಆರೋಪಿಗಳಿಗೆ ಗ್ಲಾಮ್ ಕಲೆಕ್ಷನ್ಸ್(ಚಿನ್ನದ ಲೇಪನವಿರುವ ಸರಗಳು)ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರು. ಅಲ್ಲದೆ, ನಾಪತ್ತೆಯಾಗಿರುವ ಹರ್ಷ ಕೂಡ ರಿಲಯನ್ಸ್‌ನಲ್ಲಿ ಕೆಲಸ ಮಾಡಿದ್ದು, ಇತ್ತೀಚೆಗಷ್ಟೇ ಕೆಲಸ ತೊರೆದಿದ್ದ.
ಇನ್ನು ಮಧು ಮೂರು ತಿಂಗಳ ಹಿಂದೆ ದೊಡ್ಡಕಮ್ಮನಹಳ್ಳಿಯಲ್ಲಿರುವ ಸೆಂಚುರಿ ಪ್ಯಾರಾಡೈಸ್ ಅಪಾರ್ಟ್‌ಮೆಂಟ್‌ನಲ್ಲಿ ಫೆಸಿಲಿಟಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದು, ಸದ್ಯ ಕೆಲಸ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹರ್ಷನ ಮನೆ ಬಳಿ ವಾಸವಿದ್ದ ಮಧುಗೆ ರಿಲಯನ್ಸ್ ಜ್ಯುವೆಲ್ಲರಿ ಶಾಪ್‌ನಲ್ಲಿ ಮಾರಾಟ ಮಾಡುವ “ಗ್ಲಾಮ್ ಕಲೆಕ್ಷನ್’ ಅಂದರೆ ಕೋಟೆಡ್ ಚಿನ್ನದ ಸರಗಳ ಬಗ್ಗೆ ತಿಳಿಸಿದ್ದ. ಇದೇ ವೇಳೆ ಕೆಲಸವಿಲ್ಲದೆ ಅಲೆಯುತ್ತಿದ್ದ ಮಧು, ಕೋಟೆಡ್ ಚಿನ್ನದ ಸರಗಳನ್ನು ಖರೀದಿಸಿ ಐಎಂಎ ಜ್ಯುವೆಲ್ಲರಿ ಅಂಗಡಿಗಳಲ್ಲಿ ಬದಲಿಸಿಕೊಂಡು ಬಂದರೆ ಲಕ್ಷಾಂತರ ರೂ. ಹಣ ಸಂಪಾದಿಸಬಹುದು ಎಂದು ಆಸೆ ಹುಟ್ಟಿಸಿದ್ದ. ಇದನ್ನು ನಂಬಿದ ಮಧು ತನ್ನ ಹೆಸರನ್ನು ಮುರಳಿ ಎಂದು ಬದಲಿಸಿ ಐಎಂಎ ಜ್ಯುವೆಲ್ಲರಿ ಶಾಪ್‌ನಲ್ಲಿ ನೊಂದಾಯಿಸಿದ್ದ. ಬಳಿಕ ಚಿನ್ನದ ಲೇಪನವಿರುವ ನಕಲಿ ಚಿನ್ನದ ಸರಗಳನ್ನು
ಅಸಲಿ ಚಿನ್ನಕ್ಕೆ ಬದಲಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.
ನಂತರ ಇದನ್ನೆ ಬಂಡವಾಳನ್ನಾಗಿಸಿಕೊಂಡ ಆರೋಪಿಗಳು ರಿಲಯನ್ಸ್ ಜ್ಯುವೆಲ್ಲರಿಯಲ್ಲಿ ಮಾರಾಟ ಮಾಡುವ ಗ್ಲಾಮ್ ಕಲೆಕ್ಷನ್ ಅಂದರೆ ಕೋಟೆಡ್ ಚಿನ್ನದ ಸರಗಳನ್ನು ಖರೀದಿಸಿಕೊಂಡು, ಅವುಗಳನ್ನು ಐಎಂಎ ಜ್ಯುವೆಲ್ಲರಿ ಅಂಗಡಿಗಳಲ್ಲಿ 916 ಹಾಲ್ ಮಾರ್ಕ್, 22 ಕ್ಯಾರೆಟ್ ಇರುವ ಅಸಲಿ ಚಿನ್ನದ ಒಡವೆಗಳನ್ನು ಮತ್ತು ಬೆಳ್ಳಿಯ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.