ಬೆಂಗಳೂರು: ಕಮಲ್ ಚಂದ್ರ ನಿರ್ದೇಶನದ “ಹಮಾರೆ ಬಾರಾಹ್” ಬಾಲಿವುಡ್ ಸಿನಿಮಾ ಬಿಡುಗಡೆಗೆ ಕರ್ನಾಟಕ ಸರ್ಕಾರ ಎರಡು ವಾರಗಳವರೆಗೆ ನಿಷೇಧ ಹೇರಿರುವುದಾಗಿ ವರದಿ ತಿಳಿಸಿದೆ. ಹಮಾರೆ ಬಾರಾಹ್ ಸಿನಿಮಾ ಜೂನ್ 7ರಂದು ದೇಶಾದ್ಯಂತ ಬಿಡುಗಡೆಯಾಗಿದೆ.
ಇದನ್ನೂ ಓದಿ:MLC: ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯಲ್ಲಿ ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಗೆಲುವು
ಈ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾದರೆ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ. ಅದಕ್ಕಾಗಿ ಸಿನಿಮಾ ಬಿಡುಗಡೆ ಮಾಡದಂತೆ ಹಲವು ಅಲ್ಪಸಂಖ್ಯಾಕ ಸಂಘಟನೆಗಳು, ನಿಯೋಗಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹಮಾರೆ ಬಾರಾಹ್ ಸಿನಿಮಾ ಬಿಡುಗಡೆಗೆ ಮುಂದಿನ ನಿರ್ದೇಶನದವರೆಗೆ 2ವಾರಗಳ ತನಕ ನಿಷೇಧ ಹೇರಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಹಮಾರೆ ಬಾರಾಹ್ ಸಿನಿಮಾದ ಟ್ರೈಲರ್ ವೀಕ್ಷಿಸಿದ ನಂತರ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ 1964ರ ಸೆಕ್ಷನ್ 15(1) ಮತ್ತು 15(5)ರ ಅನ್ವಯ ನಿಷೇಧದ ನಿರ್ಧಾರ ತೆಗೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಹಮಾರೆ ಬಾರಾಹ್ ಸಿನಿಮಾದಲ್ಲಿನ ಎರಡು ಆಕ್ಷೇಪಾರ್ಹ ಡೈಲಾಗಳನ್ನು ತೆಗೆದು ಹಾಕುವ ಷರತ್ತು ವಿಧಿಸುವ ಮೂಲಕ ಬಾಂಬೆ ಹೈಕೋರ್ಟ್ ಮಹಾರಾಷ್ಟ್ರದಲ್ಲಿ ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಬಿಡುಗಡೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದರಿಂದ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ.
ಹಮಾರೆ ಬಾರಾಹ್ ಚಿತ್ರದಲ್ಲಿ ಅನ್ನು ಕಪೂರ್, ಮನೋಜ್ ಜೋಶಿ ಮತ್ತು ಪ್ರಿತೋಷ್ ತ್ರಿಪಾಠಿ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ಜನಸಂಖ್ಯಾ ಸ್ಫೋಟದ ಕಥಾಹಂದರವನ್ನು ಒಳಗೊಂಡಿದೆ.