ಶ್ರೀನಗರ : ಜಮ್ಮು ಕಾಶ್ಮೀರದ ಹಂದ್ವಾರಾ ಜಿಲ್ಲೆಯ ಉನಿಸೂ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಿನ್ನೆ ಭಾನುವಾರ ತಡ ರಾತ್ರಿ ನಡೆಸಿದ ಎನ್‌ಕೌಂಟರ್ ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಇನ್ನೋರ್ವ ಉಗ್ರನನ್ನು ಭದ್ರತಾ ಪಡೆಗಳು ಸೆರೆ ಹಿಡಿದಿವೆ. ಈ ಗುಂಡಿನ ಕಾಳಗದಲ್ಲಿ ಓರ್ವ ಪೌರ ಸಾವಪ್ಪಿದ್ದಾನೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಇಂದು ಸೋಮವಾರ ವರದಿ ಮಾಡಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸೋಪೋರ್, ಬಾರಾಮೂಲಾ, ಹಂದ್ವಾರಾ ಮತ್ತು ಕುಪ್‌ವಾರಾ – ಈ ನಾಲ್ಕು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಅಮಾನತುಗೊಳಿಸಲಾಗಿದೆ.
ಭದ್ರತಾ ಪಡೆಗಳು ಉಗ್ರರ ಅಡಗುದಾಣಗಳನ್ನು ಗುರಿ ಇರಿಸಿ ಶೋಧ ಕಾರ್ಯ ಕೈಗೊಂಡದ್ದನ್ನು ಅನುಸರಿಸಿ ಎನ್‌ಕೌಂಟರ್ ನಡೆಯಿತು. ಈಗ ಗುಂಡಿನ ಕಾಳಗ ನಿಂತಿದೆಯಾದರೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಸ್ ಪಿ ವೈದ್ ಅವರು ಟ್ವೀಟ್ ಮಾಡಿ, “ಹಂದ್ವಾರಾ ಜಿಲ್ಲೆಯ ಉನಿಸೂ ದಲ್ಲಿ ಜಮ್ಮು ಕಾಶ್ಮೀರ ಪೊಲೀಸರು, ಆರ್ ಆರ್ ಮತ್ತು ಸಿಆರ್‌ಪಿಎಫ್ ಸಿಬಂದಿಗಳು ಜಂಟಿಯಾಗಿ ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಪಾಕ್ ಮೂಲದವರೆಂದು ಕಂಡು ಬಂದಿರುವ ಎಲ್ಲ ಮೂರು ಉಗ್ರರನ್ನು ಹತ್ಯೆಗೈಯಲಾಗಿದೆ; ನಿನ್ನೆ ಭಾನುವಾರ ರಾತ್ರಿ ಪೂರ್ತಿಯಾಗಿ ಮಳೆ ಸುರಿಯುತ್ತಿತ್ತು ಮತ್ತು ಮೈ ಕೊರೆಯುವ ಚಳಿ ಇತ್ತು; ಅದರ ನಡುವೆಯೂ ನಮ್ಮ ಧೀರ ಯೋಧರು ಯಶಸ್ವಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.