Advertisement
ಅನಾರೋಗ್ಯದಿಂದ ಬಳಲುತ್ತಿದ್ದ ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್ (44) ಅವರು ಭಾನುವಾರ ನಿಧನರಾಗಿದ್ದಾರೆ. ಪತ್ನಿ ಪುಷ್ಪಲತಾ, ಪುತ್ರ ಚೇತಸ್, ಪುತ್ರಿ ಲೀನಾ ಹಾಗು ಚಿತ್ರರಂಗದ ಅಪಾರ ಗೆಳೆಯರನ್ನು ವಿಷ್ಣುವರ್ಧನ್ ಅಗಲಿದ್ದಾರೆ. ಕೆಲ ದಿನಗಳಿಂದ ವಿಷ್ಣುವರ್ಧನ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ನಗರದ ಕರುಣಾಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಛಾಯಾಗ್ರಾಹಕ ಕುಮಾರ್ ಚಕ್ರವರ್ತಿ (42) ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿಕೆಎಚ್ ದಾಸ್ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಕುಮಾರ್ ಚಕ್ರವರ್ತಿ, “ಎಚ್2ಓ’ ಚಿತ್ರದ ಮೂಲಕ ಸ್ಥಿರ ಛಾಯಾಗ್ರಾಹಕರಾಗಿ ತಮ್ಮ ಕೆಲಸ ಶುರುಮಾಡಿದ್ದರು. ಆ ನಂತರದ ದಿನಗಳಲ್ಲಿ”ಚಂದ್ರ ಚಕೋರಿ’, “ಆಪ್ತ ಮಿತ್ರ’,”ಶಿವಲಿಂಗ’ ಇತರೆ ಚಿತ್ರಗಳಲ್ಲಿ ದಾಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಮಹೇಶ್ ಅಭಿನಯದ “ಬೌಂಡರಿ’ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಆ ಬಳಿಕ “ಸೂರಿ ಗ್ಯಾಂಗ್’,”ಕೆಂಗುಲಾಬಿ’,” ಚಿತ್ತ ಚಂಚಲ’ ಸೇರಿದಂತೆ ಒಂದಷ್ಟು ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದರು.
Related Articles
ಕನ್ನಡ ಚಿತ್ರರಂಗದಲ್ಲಿ ಕಳೆದ ಎರಡು ದಶಕಗಳಿಂದಲೂ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಹಿರಿಯ ಪ್ರೊಡಕ್ಷನ್ ಮ್ಯಾನೇಜರ್ ಪಾಪಣ್ಣ (60) ಭಾನುವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೀಸೆ ಪಾಪಣ್ಣ ಎಂದೇ ಹೆಸರಾಗಿದ್ದ ಇವರು ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಸದಾ ಚುರುಕಾಗಿದ್ದ ಮೀಸೆ ಪಾಪಣ್ಣ, ಯಾವುದೇ ಚಿತ್ರದ ಚಿತ್ರೀಕರಣವಿರಲಿ, ಚಿತ್ರೀಕರಣ ಸ್ಥಳಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಜೂನಿಯರ್ ಕಲಾವಿದರನ್ನು ಕರೆಸುತ್ತಿದ್ದರು. ಯಾವುದೇ ಸಮಸ್ಯೆ ಇಲ್ಲದಂತೆ ಚಿತ್ರೀಕರಣ ಪೂರೈಸುವಲ್ಲಿ ಯಶಸ್ವಿಯಾಗುತ್ತಿದ್ದರು. “ಗಣೇಶನ ಮದುವೆ’ ಸೇರಿದಂತೆ ಕೆಲ ಚಿತ್ರಗಳಲ್ಲಿ ಮೀಸೆ ಪಾಪಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು. ಪಾಪಣ್ಣ ಇತ್ತೀಚೆಗೆ ವಿನಯ್‌ರಾಜಕುಮಾರ್ ಅಭಿನಯದ “ಅನಂತು ವರ್ಸಸ್ ನುಸ್ರುತ್’ ಚಿತ್ರಕ್ಕೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.
Advertisement